ಮೈಸೂರು ವಿಭಾಗ ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ 2025 ಗಾನ ಸುಧೆ ಮಡಿಕೇರಿಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಕೊಡಗು ಜಿಲ್ಲಾ ಸಂಸ್ಥೆ, ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಗೈಡ್ಸ್ ಭವನ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ, ಕಬ್ಸ್-ಬುಲ್ ಬುಲ್ಸ್-ಸ್ಕೌಟ್ಸ್-ಗೈಡ್ಸ್-ರೋವರ್ಸ್-ರೇಂಜರ್ಸ್ ಮಕ್ಕಳಿಗೆ ಮೈಸೂರು ವಿಭಾಗ ಮಟ್ಟದ ದೇಶಭಕ್ತಿ ಗೀತೆಗಾಯನ ಸ್ಪರ್ಧೆ-2025 ‘ಗಾನ ಸುಧೆ’ ಮಡಿಕೇರಿಯಲ್ಲಿ ನಡೆಯಿತು. ಒಟ್ಟು 8 ಜಿಲ್ಲೆಗಳ 320 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೀತೆ ಗಾಯನದ ಮೂಲಕ ದೇಶಭಕ್ತಿ ಮೆರೆದರು. ನಗರದ ಜೂನಿಯರ್ ಕಾಲೇಜು ಆವರಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ(ಪಿಎಂಶ್ರೀ) ಸಭಾಂಗಣದಲ್ಲಿ ನಡೆದ ‘ಗಾನ ಸುಧೆ’ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿವೈಎಸ್‌ಪಿ ಪೆಮ್ಮಂಡ ಎ.ಸೂರಜ್ ಅವರು ಈ ರೀತಿಯ ಸ್ಪರ್ಧಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಐಕ್ಯತೆಯನ್ನು ಮೂಡಿಸುತ್ತದೆ ಮತ್ತು ಪೂರ್ವಜರ ದೇಶಭಕ್ತಿಯನ್ನು ನೆನಪಿಸುತ್ತದೆ ಎಂದರು.ಐಕ್ಯತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಸಮವಸ್ತ್ರಧಾರಿ ವಿಭಾಗವಾದ ಪೊಲೀಸ್ ಮತ್ತು ಸೇನೆ ಕೂಡ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಮಹತ್ವಪೂರ್ಣವಾದ ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಂದ ಸದ್ಬಳಕೆಯಾಗಬೇಕು ಎಂದು ತಿಳಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದು ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳ ಸವಿನೆನಪಿಗೆ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಹೊರ ಜಿಲ್ಲೆಗೆ ಭೇಟಿ ನೀಡಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ಅಲ್ಲಿನ ಆಕರ್ಷಕ ಪ್ರದೇಶಗಳನ್ನು ವೀಕ್ಷಿಸಬೇಕು ಎಂದು ಕಿವಿಮಾತು ಹೇಳಿದರು. ಸಂಘಟನಾತ್ಮಕವಾಗಿ ಕಾರ್ಯನಿರ್ವಹಣೆ:

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್ ಅವರು ಕೊಡಗಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಾಯಕತ್ವದ ಗುಣವನ್ನು ಬೆಳೆಸುತ್ತಿದೆ ಎಂದು ಶ್ಲಾಘಿಸಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಮಾತನಾಡಿ, ಇಂದಿನ ಮಕ್ಕಳೇ ದೇಶದ ಮುಂದಿನ ಭವಿಷ್ಯವಾಗಿದ್ದಾರೆ, ಎಂಟು ಜಿಲ್ಲೆಗಳ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ದೇಶಭಕ್ತಿಯ ‘ಗಾನ ಸುಧೆ’ಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು.ಈ ರೀತಿಯ ಕಾರ್ಯಕ್ರಮಗಳಿಂದ ಸಂಸ್ಕೃತಿಯ ವಿನಿಮಯವಾಗುತ್ತದೆ, ಪರಸ್ಪರ ವಿದ್ಯಾರ್ಥಿಗಳ ಪರಿಚಯವಾಗುತ್ತದೆ. ಭವಿಷ್ಯದ ಗೆಲುವಿಗಾಗಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಸೋಲೇ ಗೆಲುವಿನ ಮೆಟ್ಟಿಲಾಗಿದೆ, ಸೋಲು, ಗೆಲುವಿಗಿಂತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಕರೆ ನೀಡಿದರು.ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಪಾಜೆ ಅಧ್ಯಕ್ಷ ಧನಂಜಯ ಎಂ. ಅವರು ಮಾತನಾಡಿ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಉತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.ಸ್ಕೌಟ್ ನ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಅವರು ‘ಗಾನ ಸುಧೆ’ ಸ್ಪರ್ಧೆಯ ಕುರಿತು ವಿವರಿಸಿದರು.ತೀವ್ರ ಪೈಪೋಟಿ: ದೇಶಭಕ್ತಿಯ ಗೀತೆ ಗಾಯನ ಗುಂಪು ಸ್ಪರ್ಧೆಯಲ್ಲಿ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ 320 ವಿದ್ಯಾರ್ಥಿಗಳು ತೀವ್ರ ಪೈಪೋಟಿ ನೀಡಿದರು. ಸಮವಸ್ತ್ರಧಾರಿಗಳಾಗಿದ್ದ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಗಮನ ಸೆಳೆಯಿತು.ತೀರ್ಪುಗಾರರಾಗಿ ಕಲಾವಿದರಾದ ಶೋಭಾ ಸುಬ್ಬಯ್ಯ, ವೀಣಾ ಹೊಳ್ಳ, ಮಮತಾ ಶಾಸ್ತ್ರಿ, ಲಕ್ಷ್ಮಿ ಭಟ್, ಸುಮನಾ ರಾವ್ ಹಾಗೂ ಮೇಘನಾ ಭಟ್ ಕಾರ್ಯನಿರ್ವಹಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕ ರಾಜ್ಯ ಆಯುಕ್ತರಾದ(ಸ್ಕೌಟ್) ಬಿ.ಕೆ.ಬಸವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎನ್.ಎಂ.ಜಗದೀಶ್, ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಕಾರ್ಯದರ್ಶಿ ಚಂದ್ರಶೇಖರ್ ಆರ್.ಪಿ., ಪೊನ್ನಂಪೇಟೆ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ, ಕಾರ್ಯದರ್ಶಿ ಕೆ.ಬಿ.ಉಷಾರಾಣಿ, ಸ್ಥಾನಿಕ ಆಯುಕ್ತ ಎಚ್.ಆರ್.ಮುತ್ತಪ್ಪ, ಸ್ಕೌಟ್ಸ್ ತರಬೇತಿ ಆಯುಕ್ತ ಕೆ.ಯು.ರಂಜಿತ್, ಗೈಡ್ಸ್ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಸಂಸ್ಥೆಯ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮ ಕುಮಾರ್, ಜಿಲ್ಲಾ ಬುಲ್ ಬುಲ್ ಆಯುಕ್ತೆ ಡೈಸಿ ಫ್ರಾನ್ಸಿಸ್, ಕಾರ್ಯದರ್ಶಿ ಎಂ.ಎಂ.ವಸಂತಿ, ಕೋಶಾಧಿಕಾರಿ ಟಿ.ಎಂ.ಮುದ್ದಯ್ಯ, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಜಿಲ್ಲಾ ಸಹಾಯಕ ಆಯುಕ್ತ (ಸ್ಕೌಟ್) ಕೆ.ಬಿ.ಗಣೇಶ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಚ್.ಕೆ.ಭವಾನಿ, ಸ್ಕೌಟ್ಸ್, ಗೈಡ್ಸ್ ನ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.