ಅನುವಾದಗೊಂಡರೂ ಆಕರ್ಷಣೆ ಕಳೆದುಕೊಳ್ಳದ ವಚನಗಳು

| Published : Aug 05 2024, 12:33 AM IST

ಸಾರಾಂಶ

ಮಹಾಕವಿ ಕಾಳಿದಾಸ ಹಾಗೂ ವಿಲಿಯಂ ಶೆಕ್ಸ್‌ ‌ಪೀಯರ್ ಬಿಟ್ಟರೆ ಬಸವಣ್ಣನ ವಚನಗಳೇ ಹಲವು ಅನುವಾದಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರುವುದು

ಕನ್ನಡಪ್ರಭ ವಾರ್ತೆ ಮೈಸೂರು

ಬಸವಣ್ಣ ವಚನಗಳೂ ಒಂದೇ ಭಾಷೆಯಲ್ಲಿ ಅನೇಕ ಸಲ ಅನುವಾದಗೊಂಡು ಪ್ರಕಟವಾಗಿವೆ ಎಂದು ಸಾಹಿತಿ ಪ್ರೊ.ಸಿ. ನಾಗಣ್ಣ ತಿಳಿಸಿದರು.

ನಗರದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಪ್ರೊ.ಕೆ. ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್, ಹನ್ಯಾಳು ಪ್ರಕಾಶನ ಹಾಗೂ ಸಂವಹನ ಪ್ರಕಾಶನ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಲಕೆರೆ ಜೆ. ರಾಮಲಿಂಗೇಗೌಡ ಅವರ 108 ಪರ್ಲ್ಸ್‌ ಆಫ್ ವಿಸ್ಡಮ್ ( ಭಕ್ತಿ ಭಂಡಾರಿ ಬಸವಣ್ಣನವರ ಆಯ್ದ ವಚನಗಳ ಅನುವಾದ) ಮತ್ತು ಅಬಬಿಲ್- ಎ ಪ್ಲೋಕ್ ಆಫ್ ಟಿನಿ ಬರ್ಡ್ಸ್‌ಕರೀಮ (ಮೂಲ ತೆಲುಗಿನ 100 ವಚನಗಳ ಅನುವಾದ) ಎಂಬ ಅನುವಾದಿ ಕೃತಿಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಮಹಾಕವಿ ಕಾಳಿದಾಸ ಹಾಗೂ ವಿಲಿಯಂ ಶೆಕ್ಸ್‌ ‌ಪೀಯರ್ ಬಿಟ್ಟರೆ ಬಸವಣ್ಣನ ವಚನಗಳೇ ಹಲವು ಅನುವಾದಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರುವುದು. ಕಾಳಿದಾಸ ಹಾಗೂ ಶೆಕ್ಸ್‌‌ ಪೀಯರ್ ಅವರ ಕೃತಿಗಳು ಜಗತ್ತಿನ ಹಲವಾರು ಭಾಷೆಗಳಿಗೆ ಹಲವಾರು ಸಲ ಅನುವಾದಗೊಂಡಿವೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬಸವಣ್ಣ ವಚನಗಳನ್ನು ಮಾತ್ರ ಬೇರೆ ಭಾಷೆಗಳಿಗೆ ಹಲವು ಸಲ ಅನುವಾದಿಸಲಾಗಿದೆ ಎಂದರು.

ಬಸವಣ್ಣ ಅನುವಾದವನ್ನು ಎರಡೂ ಕೈಗಳಿಂದ ಆಲಂಗಿಸಿಕೊಳ್ಳುತ್ತಾರೆ. ಅಷ್ಟೂ ವಿಸ್ತಾರ ಅವರ ವಚನಗಳಿಗೆ ಇದೆ. ಎಷ್ಟೇ ಸಲ ಅನುವಾದ ಮಾಡಿದರು ಅದರ ಸಾರವೇನು ಕಡಿಮೆಯಾಗುವುದಿಲ್ಲ. ಅದರ ಆಕರ್ಷಣೆ ಕಡಿಮೆಯಾಗುವುದಿಲ್ಲ ಎಂದು ಅವರು ಹೇಳಿದರು.

ಸುಮಾರು 110 ವರ್ಷಗಳ ಹಿಂದೆ ಮೊದಲಿಗೆ ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ ಗೆ ಅನುವಾದಿಸಿರುವ ವಿಷಯವನ್ನು ಇತಿಹಾಸವು ಬೆಳಕು ಚಲ್ಲುತ್ತದೆ. ವಿಜಯಪುರದ ಪಾಟೀಲ ಎಂಬುವವರು ಇಂಗ್ಲಿಷ್ ಭಾಷೆಗೆ ಅನುವಾದ ಮಾಡುತ್ತಾರೆ. ಬಳಿಕ ಆಂಗ್ಲ ಸಾಹಿತಿ ಬಿ.ಎಲ್. ರೈಸ್ ಎಂಬುವವರು 100 ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಇದಾದ ಬಳಿಕ ವಚನ ಪಿತಾಮಹ ಫ.ಗು. ಹಳಕಟ್ಟಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ನೂರಾರು ವಚನಗಳನ್ನು ಇಂಗ್ಲಿಷ್‌ ಗೆ ಅನುವಾದಿಸಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಓ.ಎಲ್. ನಾಗಭೂಷಣಸ್ವಾಮಿ, ಡಿ.ಎ. ಶಂಕರ್, ವಿಜಯಪುರದ ಜ್ಞಾನಯೋಗಶ್ರಮದ ಸಿದ್ದೇಶ್ವರ ಸ್ವಾಮೀಜಿ ಮುಂತಾದವರು ಆಯ್ದ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ ಎಂದು ಅವರು ವಿವರಿಸಿದರು.

ವಚನಗಳು ಬದುಕಿನ ಕನ್ನಡಿ, ವಚನದಲ್ಲಿ ಇರುವ ಮಾನವೀಯ ಅಂಶಗಳು, ಸಮಾನತೆಯ ತತ್ವಗಳನ್ನು, ಕಾಯಕ ನಿಷ್ಠೆಯ ಹಿರಿಮೆ- ಗರಿಮೆಯನ್ನು ಕನ್ನಡ ಬಾರದ ಲೋಕಕ್ಕೆ ತಿಳಿಸುವ ಉದ್ದೇಶದಿಂದಲೇ ಅನುವಾದಿಸಲಾಗಿದೆ ಎಂದು ಬಸವಣ್ಣನ ವಚನಗಳನ್ನು ಇಂಗ್ಲಿಷ್‌ ಗೆ ಅನುವಾದ ಮಾಡಿರುವ ಅನೇಕ ಕವಿಗಳು ಹೇಳಿಕೊಂಡಿದ್ದಾರೆ ಎಂದರು.

ರವೀಂದ್ರನಾಥ ಠಾಗೂರ್ ಅವರ ಗೀತಾಂಜಲಿ ಕೃತಿಯನ್ನು ಕನ್ನಡದಲ್ಲಿ 28 ಕವಿಗಳು ಅನುವಾದಿಸಿದ್ದಾರೆ. ಇಷ್ಟು ಸಲ ಅನುವಾದವಾದ ವಿಷಯವಾಗಿಯೇ ಒಂದು ಸಂಶೋಧನೆಯನ್ನು ಮಾಡಿ ಪಿಎಚ್‌.ಡಿ ಪ್ರಬಂಧ ಬರೆಯಬಹುದು ಎಂದು ಅವರು ಸಲಹೆ ನೀಡಿದರು.

ಮೆಸ್ಕೋ ಐಟಿಐ ಪ್ರಾಂಶುಪಾಲ ಎಂ. ಕಲೀಮ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಎನ್.ಸಿ. ತಮ್ಮಣ್ಣಗೌಡ, ಪ್ರಕಾಶಕರಾದ ಡಿ.ಎನ್. ಲೋಕಪ್ಪ, ಎಚ್.ಎಸ್. ಗೋವಿಂದಗೌಡ, ಲೇಖಕ ಆಲಕೆರೆ ಜೆ. ರಾಮಲಿಂಗೇಗೌಡ ಇದ್ದರು. ಡಾ.ಬಿ.ಸಿ. ವಿಜಯಕುಮಾರ್ ನಿರೂಪಿಸಿದರು.

----

ಕೋಟ್...

ವಚನ ಸಾಹಿತ್ಯದಲ್ಲಿ ಬಸವಣ್ಣನ ವಚನಗಳನ್ನು ಬಿಟ್ಟರೆ ಅಲ್ಲಮ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಸಿದ್ಧರಾಮ ಮುಂತಾದ ಶರಣರ ವಚನಗಳು ಆಂಗ್ಲ ಭಾಷೆಗೆ ಅನುವಾದಗೊಂಡಿವೆ. ವಚನ ಸಾಹಿತ್ಯದಷ್ಟು ಬೇರೆ ಕೃತಿಗಳು ಕನ್ನಡ ಸಾಹಿತ್ಯ ಕ್ಷೇತ್ರದಿಂದ ಹೆಚ್ಚಾಗಿ ಹಲವು ಸಲ ಅನುವಾದಗೊಂಡ ಉದಾಹರಣೆಗಳು ಇಲ್ಲ.

- ಡಾ.ಸಿ. ನಾಗಣ್ಣ, ವಿಮರ್ಶಕ