ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವಿಜ್ಞಾನ ಎಂಬುದು ಹುಚ್ಚು ಕುದುರೆಯಂತೆ. ವಿಜ್ಞಾನದಿಂದ ಮನಸ್ಸಿಗೆ ಶಾಂತಿ ಸಿಗುವುದಿಲ್ಲ. ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅಧ್ಯಾತ್ಮಿಕತೆ ಅತೀ ಮುಖ್ಯ. ಹೀಗಾಗಿ ವೈದ್ಯರೂ ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ವೈದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ಸಲಹೆ ನೀಡಿದರು.ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶಿಕ್ಷಕರ ಸಂಘವು ಗುರುವಾರ ಜೆ.ಕೆ. ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಅಧ್ಯಾತ್ಮಿಕ ಆರೋಗ್ಯದ ವೈಜ್ಞಾನಿಕ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಆಧ್ಯಾತ್ಮ ಎಂದರೆ ಧರ್ಮ ಅಥವಾ ದೇವರ ಪೂಜೆಯಲ್ಲ. ಅದು ಸೃಷ್ಟಿಯ ವಿಜ್ಞಾನ, ಮನುಷ್ಯ ಅದರೊಂದಿಗೆ ಜೋಡಣೆ ಆಗಿದ್ದಾನೆ. ಆಧ್ಯಾತ್ಮವನ್ನು ಅನುಭವಿಸಬಹುದೇ ಹೊರತು ಅದನ್ನು ಪ್ರದರ್ಶಿಸಲು ಸಾಧ್ಯವಿಲ್ಲ. ವಿಜ್ಞಾನದಿಂದ ಮನಸ್ಸಿಗೆ ಶಾಂತಿ ಸಿಗುವುದಿಲ್ಲ. ಹೀಗಾಗಿ ವೈದ್ಯರೂ ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.ಆಧ್ಯಾತ್ಮವನ್ನು ಮನುಷ್ಯ ಕೇಂದ್ರಿತವಾಗಿ ಅರ್ಥೈಸುವ ಕೆಲಸ ನಡೆಯುತ್ತಲೇ ಇದೆ. ಅನೇಕ ಸಾಧಕರು ಈ ಬಗ್ಗೆ ಹೇಳಿದ್ದಾರೆ. ಆದರೆ, ಅಲೋಪತಿಯಲ್ಲಿ ಜೈವಿಕ ಶಕ್ತಿಯ ಕುರಿತು ಸಂಶೋಧನೆ ಆಗಬೇಕಿದೆ. ಮನಸ್ಸು ಹುಚ್ಚು ಕುದುರೆಯಂತೆ ಓಡಾಡುತ್ತಿರುತ್ತದೆ ಅದನ್ನು ನಿಯಂತ್ರಿಸಲು ಆಧ್ಯಾತ್ಮಿಕತೆ ಅಗತ್ಯ ಎಂದರು.ಆಧುನಿಕ ವೈದ್ಯ ವಿಜ್ಞಾನವು ಮನುಷ್ಯನ ದೇಹವನ್ನು ಗುರುತಿಸಿದೆ. ಈಚೆಗೆ ಮನಸ್ಸನ್ನೂ ಗುರುತಿಸಿದೆ, ಆದರೆ, ಆತ್ಮದ ಬಗ್ಗೆ ಇನ್ನೂ ಜಿಜ್ಞಾಸೆ ಹೊಂದಿದೆ. ಪ್ರಾಚೀನ ಆರೋಗ್ಯ ಸಾಹಿತ್ಯವು ಆತ್ಮದ ಬಗ್ಗೆ ಹೇಳಿದ್ದು, ಅದು ಶಕ್ತಿಯ ಪ್ರತೀಕ ಎಂದು ಅವರು ತಿಳಿಸಿದರು.ವಿಶ್ವ ಸಂಸ್ಥೆಯು ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕವಾಗಿ ಖುಷಿಯಿಂದ ಇರುವುದು ಆರೋಗ್ಯ ಎಂದು ಹೇಳಿದೆ. ಅಂತಹ ಆರೋಗ್ಯ ನಮ್ಮದಾಗಬೇಕು. ಆದರೆ ನಾವು ಕಾಯಿಲೆ ರಹಿತ ಸ್ಥಿತಿಯಲ್ಲಿದ್ದರೆ ಆರೋಗ್ಯ ಎಂಬ ತಪ್ಪು ಕಲ್ಪನೆಯಲ್ಲಿದ್ದೇವೆ. ವೈದ್ಯಕೀಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಆರೋಗ್ಯದ ಬಗ್ಗೆ ಯಾವುದೇ ಮಾನದಂಡವಿಲ್ಲ. ಹೀಗಾಗಿ ಅದರ ಕುರಿತ ವೈಜ್ಞಾನಿಕ ವಿಶ್ಲೇಷಣೆ ಅಗತ್ಯ ಎಂದು ಅವರು ನುಡಿದರು.ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಸಂಪೂರ್ಣ ವಿಜ್ಞಾನ ಇಂಗ್ಲಿಷ್ ನಲ್ಲಿ ಉಳಿದುಕೊಂಡಿದೆ. ಕನ್ನಡದೊಳಗೆ ವೈದ್ಯಕೀಯ ಶಿಕ್ಷಣ ಬೋಧಿಸುವುದು ಯಾವಾಗ? ಇಂತಹ ಸಂದರ್ಭದಲ್ಲಿ ಕನ್ನಡದೊಳಗೆ ಪುಸ್ತಕ ಬಂದರೆ ಕೊಂಡು ಓದಬೇಕು ಎಂದರು.ಆಧ್ಯಾತ್ಮಿಕ ಆರೋಗ್ಯ ಪುಸ್ತಕವು 500 ಪುಟ ಹೊಂದಿದ್ದು, ಬಹಳ ಮುಕ್ತವಾಗಿ, ಸರಳವಾಗಿ ಡಾ.ಎಸ್.ಪಿ. ಯೋಗಣ್ಣ ಬರೆದಿದ್ದಾರೆ. ತನ್ನ ಮಾತೃಸಂಸ್ಥೆ ಮೈಸೂರು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಮೊದಲು ದೊರೆಯಬೇಕು ಎಂಬುದು ಅವರ ಇಂಗಿತ. ಹೀಗಾಗಿ ವಿದ್ಯಾರ್ಥಿಗಳು ಪುಸ್ತಕ ಓದಬೇಕು ಎಂದು ಹೇಳಿದರು.ಭಾರತ ಸಕ್ಕರೆ ಕಾಯಿಲೆಯ ರಾಜಧಾನಿ. ರಕ್ತದೊತ್ತಡ, ಸೊಂಟ ನೋವು ಸೇರಿ 35 ಕಾಯಿಲೆಗಳನ್ನು ಜೀವನ ಶೈಲಿಯ ಕಾಯಿಲೆಗಳೆಂದು ಗುರುತಿಸಲಾಗಿದೆ. ಕಾಯಿಲೆಗಳಿಂದ ದೂರವಾಗಲು, ಒತ್ತಡದ ನಿವಾರಣೆಗೆ ಧ್ಯಾನ ಅತ್ಯಂತ ಅವಶ್ಯಕ ಎಂದು ಹೇಳಿದರು.ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶಿಕ್ಷಕರ ಸಂಘದ ಅಧ್ಯಕ್ಷೆ ಡಾ. ಸುಧಾ, ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಗಜಾನನ ಹೆಗಡೆ, ಡಾ.ಬಿ.ವಿ. ಕುಮಾರಸ್ವಾಮಿ ಪಾಲ್ಗೊಂಡಿದ್ದರು.