ಮಳವಳ್ಳಿಯನ್ನು ಪೌತಿ ಮುಕ್ತ ತಾಲೂಕು ಮಾಡಲು ಕ್ರಮ: ತಹಸೀಲ್ದಾರ್ ಕುಮಾರ್

| Published : Nov 29 2024, 01:05 AM IST

ಮಳವಳ್ಳಿಯನ್ನು ಪೌತಿ ಮುಕ್ತ ತಾಲೂಕು ಮಾಡಲು ಕ್ರಮ: ತಹಸೀಲ್ದಾರ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಪೌತಿ ಸಂಬಂಧ ಮರಣ ದೃಢೀಕರಣ ಪತ್ರ ಲಭ್ಯವಾಗಿರದಿದ್ದಲ್ಲಿ ಗ್ರಾಮದಲ್ಲಿ ಮಹಜರ್ ಮೂಲಕ ಸಂಬಂಧಪಟ್ಟ ವಾರಸುದಾರರಿಗೆ ಖಾತೆ ಮಾಡಿಸಿಕೊಳ್ಳಲು ಕ್ರಮವಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪೌತಿ ಖಾತಾ ಆಂದೋಲನ ಮೂಲಕ ಮಳವಳ್ಳಿ ತಾಲೂಕನ್ನು ಪೌತಿ ಮುಕ್ತ ಮಾಡಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ ಎಂದು ತಹಸೀಲ್ದಾರ್ ಬಿ.ವಿ. ಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಪೌತಿ ಖಾತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ಸಾಕಷ್ಟು ಪೌತಿದಾರರ ಹೆಸರಿನಲ್ಲಿಯೇ ಖಾತೆಗಳಿವೆ. ಮೃತ ಖಾತೆದಾರರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡುವ ಬಗ್ಗೆ ಪೌತಿ ಖಾತಾ ಆಂದೋಲನಕ್ಕೆ ಹೋಬಳಿ ಮಟ್ಟದಲ್ಲಿ ಈಗಾಗಲೇ ಚಾಲನೆ ನೀಡಿ, ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮಮಟ್ಟದಲ್ಲಿ ಸರ್ವೇ ನಡೆಸಿ ಪೌತಿ ಮುಕ್ತವಾಗಿಸಲು ಮುಂದಾಗುತ್ತೇನೆ ಎಂದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಕಸಬ ಹೋಬಳಿ ವ್ಯಾಪ್ತಿಗೆ ಬರುವ ಪೌತಿದಾರ ವಾರಸುದಾರರು ನಿಗದಿತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಪೌತಿ ಸಂಬಂಧ ಮರಣ ದೃಢೀಕರಣ ಪತ್ರ ಲಭ್ಯವಾಗಿರದಿದ್ದಲ್ಲಿ ಗ್ರಾಮದಲ್ಲಿ ಮಹಜರ್ ಮೂಲಕ ಸಂಬಂಧಪಟ್ಟ ವಾರಸುದಾರರಿಗೆ ಖಾತೆ ಮಾಡಿಸಿಕೊಳ್ಳಲು ಕ್ರಮವಹಿಸಲಾಗುವುದು ಎಂದರು.

ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಮಾಲೀಕತ್ವವು ಮೃತ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿ ಪಡಿಸಲು, ಸಾಲ ಸೌಕರ್ಯ ಸೇರಿದಂತೆ ಇತರೆ ಸೌಲಭ್ಯ ಪಡೆಯಲು ಉಂಟಾಗುವ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರತಿಯೊಬ್ಬರೂ ಪೌತಿ ಖಾತೆ ಮಾಡಿಸಿಕೊಳ್ಳಬೇಕು. ಪೌತಿ ಆಂದೋಲನಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.

ಈ ವೇಳೆ ಉಪ ತಹಸೀಲ್ದಾರ್ ಹೇಮಾವತಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

.