ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸಾಂಸ್ಕೃತಿಕ ಚಿಂತನೆ ಮಸುಕಾಗಿ, ಸಾಮಾಜಿಕ ಜವಾಬ್ದಾರಿ ಬೇಜಾವಾಬ್ದಾರಿ ಆಗುತ್ತಿರುವ ಈ ಸಂದರ್ಭದಲ್ಲಿ ದೇಶ, ಭಾಷೆ, ಸಂಸ್ಕೃತಿಗೆ ಸೇರುವ ದಾರಿ ಹುಡುಕಬೇಕು ಎಂದು ರಂಗಾಯಣ ಮಾಜಿ ನಿರ್ದೇಶಕ ಎಚ್. ಜನಾರ್ಧನ್ ಹೇಳಿದರು.ಮೈಸೂರು ವಿವಿ ಪ್ರಸಾರಾಂಗ ಮತ್ತು ಸಹೃದಯ ಬಳಗವು ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮ.ಸ್ವಾಮಿ ಕಪ್ಪಸೋಗೆ ಅವರ ''''ಸೇರುವ ದಾರಿ'''' ಕಾದಂಬರಿ ಬಿಡುಗಡೆಗೊಳಿ ಅವರು ಮಾತನಾಡಿದರು.ಕೆಟ್ಟ ರಾಜಕೀಯಕ್ಕೆ ಧರ್ಮವನ್ನು ಬಳಸಿಕೊಳ್ಳಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ವಿಕೃತಿ ಮೆರೆಯಲಾಗುತ್ತಿದೆ. ನಾವೆಲ್ಲರೂ ಪ್ರಕೃತಿಯ ಜತೆಗೆ ಬೆಳೆಯಬೇಕು. ಚಿಕ್ಕಮಗಳೂರಿಗೆ ಹೋಗಿದ್ದೆ. ಅಲ್ಲಿ ಪ್ರಾಕೃತಿಕ ಸಂಪತ್ತು ಸಮೃದ್ಧವಾಗಿದೆ. ಅಂತಹ ನೆಲದಲ್ಲಿಯೂ ಗಲಭೆಯನ್ನು ನೋಡಿದಾಗ, ಇಲ್ಲೇಕೆ ಹೀಗೆ ಅನ್ನಿಸುತ್ತದೆ ಎಂದರು.ಸಂಬಂಜ ಅನ್ನೋದು ದೊಡ್ಡದು ಕಣ ಎಂಬ ಮಹದೇವ ಅವರ ಮಾತಿನಂತೆ ಸಂಬಂಧವೇ ಇರದ ಸಮಾಜದಲ್ಲಿ ಹೇಗೆ ಬಾಳೊದು? ಈ ಭೂಮಿಯಲ್ಲಿ ಮಹದೇಶ್ವರರು, ಮಂಟೇಸ್ವಾಮಿ ಮೊದಲಾದವರನ್ನು ಇಲ್ಲಿಯವರೆಗೆ ಉಳಿಸಿರುವುದು ಅನಕ್ಷರಸ್ಥರು. ಆದ್ದರಿಂದ ನಾವು ಗ್ರಾಮ ಭಾರತ ಸೇರುವ ದಾರಿ ಹುಡುಕದಿದ್ದರೆ ಹಾದಿ ತಪ್ಪುತ್ತೇವೆ ಎಂದರು.ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ. ನಾಗಣ್ಣ ಅವರು ಕಾದಂಬರಿ ಕುರಿತು ಮಾತನಾಡಿದರು. ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಅಧ್ಯಕ್ಷತೆ ವಹಿಸಿದ್ದರು.ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ. ಶಿವಕುಮಾರ್, ಕೃತಿಯ ಲೇಖಕ ಮಹದೇವಸ್ವಾಮಿ ಕಪ್ಪಸೋಗೆ) ಕಾರ್ಯಕ್ರಮ ಸಂಚಾಲಕ ರಸಿಕ ಎಸ್. ಯಡಕೊಳ ಇದ್ದರು. ಗಾಯಕ ಅಮ್ಮ ರಾಮಚಂದ್ರ ಪ್ರಾರ್ಥಿಸಿದರು.