ಬಸವಣ್ಣ ಮಾನವೀಯ ನೆಲೆಯಲ್ಲಿ ಅರಳಿದ ಜೀವ

| Published : May 08 2025, 12:31 AM IST

ಸಾರಾಂಶ

ಬಸವಣ್ಣನವರು ಶರಣರ ಅಂತಃಕರಣ ಉಳ್ಳ ಹಾಗೂ ಜೀವಪರವಾದ ಮಾನವೀಯ ಮೌಲ್ಯಗಳನ್ನು ಹೂಂದಿದವರು.

ಕನ್ನಡಪ್ರಭ ವಾರ್ತೆ ಮೈಸೂರುಬಸವಣ್ಣನವರು ಮಾನವೀಯ ನೆಲೆಯಲ್ಲಿ ಧಾರ್ಮಿಕ ಸಂಸ್ಕೃತಿ ನೆಲೆಗಟ್ಟಿನಲ್ಲಿ ಅರಳಿದ ಜೀವ ಎಂದು ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಬಣ್ಣಿಸಿದರು.ಮೈಸೂರು ವಿವಿ ಪ್ರಸಾರಾಂಗವು ಕುವೆಂಪು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಸವಣ್ಣನವರು ಶರಣರ ಅಂತಃಕರಣ ಉಳ್ಳ ಹಾಗೂ ಜೀವಪರವಾದ ಮಾನವೀಯ ಮೌಲ್ಯಗಳನ್ನು ಹೂಂದಿದವರು. ಹಾಗೆಯೇ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಕುವೆಂಪು ಇವರೆಲ್ಲರೂ ಒಂದೇ ಚೇತನದ ಐದು ಮುಖಗಳು ಎಂದು ಅಭಿಪ್ರಾಯಪಟ್ಟರು.ಶರಣರ ಪರಿಕಲ್ಪನೆಯಲ್ಲಿ ಗುರು ಲಿಂಗ ಜಂಗಮ ಅಂಶಗಳನ್ನು ಕಾಣಬಹುದು. ಅಲ್ಲದೇ ಬಸವಣ್ಣನವರು ಮಾನವೀಯ ನೆಲೆಯಲ್ಲಿ ಧಾರ್ಮಿಕ ಸಂಸ್ಕೃತಿ ನೆಲೆಗಟ್ಟಿನಲ್ಲಿ ಅರಳಿದ ಜೀವ. ಬಸವಣ್ಣನವರ ಆಂದೋಲನ ಸೀಮೋಲ್ಲಂಘನ ಆಂದೋಲನ. ಇವು ಕೂಡಲ ಸಂಗಮದ ಸಂಸ್ಕೃತಿಯಾಗಿತ್ತು ಇವುಗಳನ್ನು ವರ್ತಮಾನಕ್ಕೆ ಅಳವಡಿಸಿಕೊಳ್ಳಬೇಕು ಎಂದರು.ಬದುಕಿನ ಹೊರೆ ಕೋರೆಗಳಿಗೆ ಉತ್ತರವನ್ನು ಕಂಡು ಕೊಂಡು, ಉಪನಯನ ಧಾರ್ಮಿಕ ಸಂಸ್ಕೃತಿಯನ್ನು ಧಿಕ್ಕರಿಸಿ ಕೂಡಲ ಸಂಗಮಕ್ಕೆ ನಡೆದ ಪರಿಪಾಲಕ ನಮ್ಮ ಬಸವಣ್ಣ. ಶರಣರು ತಮ್ಮನ್ನು ಪ್ರಶ್ನಿಸಿ ತಿದ್ದು ಕೊಂಡವರು. ಹಾಗೆಯೇ ಸಕಲ ಜೀವಾತ್ಮರ ಲೇಸನ್ನು ಬಯಸಿದವರು. ಅಂದು ಸೂಳೆ ಸಂಕವ್ವಗೆ ಅವಕಾಶ ಕೊಟ್ಟ ಮಹಾನ್ ಚೇತನ ಬಸವಣ್ಣ. ಆದರೆ ಇಂದಿನ ಜನರು ಗೌರವ ನೀಡುತ್ತಿದ್ದರಾ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ವಿಷಾದಿಸಿದರು.ಸಂಸ್ಕೃತಿ ಚಿಂತಕ ಶಂಕರ ದೇವನೂರು ಮಾತನಾಡಿ, ಈ ನೆಲದ ಜಲವ ಕುಡಿದು ಮಾನವೀಯ ಬದುಕಿಗೆ ಮೆರಗು ನೀಡಿದ ಶರಣ ಸಂಸ್ಕೃತಿ ನಮ್ಮದು ಎಂದರು.12ನೇ ಶತಮಾನದ ಶರಣ ಚಿಂತನೆ ಮಾನವೀಯ ಮೌಲ್ಯದ ಜೀವಕೇಂದ್ರವಾಗಿತ್ತು. ಇಂದು ವಿಜ್ಞಾನ ಎಷ್ಟೇ ಮುಂದೆ ಹೋದರು ನಾವು ನೈತಿಕವಾಗಿ ಇಂದೇ ಉಳಿದಿದ್ದೇವೆ ಎಂಬುದನ್ನು ಮನಗಾಣಬೇಕು. 12ನೇ ಶತಮಾನದಲ್ಲಿ ಶರಣರು ಒಳಗೊಳ್ಳುವ ಸಂಘವಿತ್ತು ಇಂದು ಹೊರಗಿಡುವ ಸಂಘಗಳು ಹುಟ್ಟಿ ಕೊಂಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.ನಾವು ಮನುಷ್ಯರಾಗಿ ಹುಟ್ಟಿಲ್ಲ ಮನುಷ್ಯರಾಗಲೂ ಹುಟ್ಟಿದ್ದೇವೆ ಎನ್ನುವ ಬಸವ ಚಿಂತನೆ ಮೂಡಬೇಕು ಸ್ವರ್ಗ ನರಕಗಳ ಮೌಢ್ಯತೆಯ ಅಲೋಚನೆಯನ್ನು ಕಿತ್ತು ಹಾಕಿ ಸನ್ಮಾರ್ಗದ ಕಡೆ ಸಾಗಿ ಎಂದು ಹೇಳಿದ ವ್ಯಕ್ತಿ ನಮ್ಮ ಶರಣರು. ಶ್ರೇಷ್ಟ ಕನಿಷ್ಠ ಎನ್ನುವ ಕೆಟ್ಟ ಚಿಂತನೆಯೇ ನಿಜವಾದ ಸಾವು. ಇವುಗಳಿಂದ ಮನುಷ್ಯ ಹೊರಬರಬೇಕು. ಆಗ ಮಾತ್ರ ಮನುಷ್ಯ ಜೀವಂತ ಎಂದು ಅವರು ತಿಳಿಸಿದರು.ಮೈಸೂರು ವಿವಿ ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಮಾತನಾಡಿ, ವಚನ ಸಾಹಿತ್ಯ ಪ್ರಪಂಚದ ಯಾವ ಮೂಲೆಯಲ್ಲೂ ಸಿಗುವುದಿಲ್ಲ. ಇದು ನಮ್ಮ ಹೆಮ್ಮೆಯ ಸಂಗತಿ. ಮೇಲು, ಕೀಳು, ಗಂಡು, ಹೆಣ್ಣು ಎನ್ನುವ ತಾರತಮ್ಯವನ್ನು ಕಿತ್ತು ಎಸೆದು ಎಲ್ಲರನ್ನೂ ಅಪ್ಪಿಕೊಂಡವರು ಬಸವಣ್ಣ ಎಂದರು.ಇಂದು ನಾವು ಬಿಜ್ಜಳ ರಾಜನನ್ನು ನೆನಪು ಮಾಡಿಕೊಳ್ಳುತ್ತೇವೆ. ಎಂದರೆ ಅದಕ್ಕೆ ಕಾರಣ ಬಸವಣ್ಣನವರು. ಇಂದಿನ ಲಿಂಗಾಯತ ಸಮುದಾಯಕ್ಕೂ ಅಂದಿನ ಅನುಭವ ಮಂಟಪಕ್ಕೂ ಬಹಳ ವ್ಯತ್ಯಾಸವಿದೆ. ಬಸವಣ್ಣನವರು ಇದ್ದಿದ್ದರೆ ಆತ್ಮಾಹುತಿ ಮಾಡಿಕೊಳ್ಳುತ್ತಿದ್ದರು ಎಂದು ಹೇಳಿದರು.ವಿದ್ಯಾ ಕಲಿಯುವುದನ್ನೇ ಒಂದು ಕಾಲದವರೆಗೆ ತಳ ಸಮುದಾಯದ ಜನರನ್ನು ದೂರ ಇಟ್ಟಿದ್ದಾಗಿ ಹೇಳಿದರು.ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಮಾತನಾಡಿ, ನಮ್ಮ ನಡುವಿನ ವಚನ ಚಳವಳಿಯನ್ನು ಶಿವ ಸಂಸ್ಕೃತಿಯ ಚಳುವಳಿ ಎಂದು ಕರೆಯಬಹುದು. 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ ಆ ಕಾಲದ ಒಂದು ಪ್ರಜಾಪ್ರಭುತ್ವದ ವ್ಯವಸ್ಥೆಯಾಗಿತ್ತು. ಇಂದಿನ ಸಂಸತ್ತಿಗೆ ಪೂರಕವಾಗಿದೆ ಎಂದು ಹೇಳಿದರು.ಸಹಾಯಕ ನಿರ್ದೇಶಕ ಅನಿಲ್‌ ಕುಮಾರ್‌, ಅಧೀಕ್ಷಕ ಚನ್ನಬಸಪ್ಪ, ಹಿರಿಯ ಸಹಾಯಕ ನಟೇಶ್, ಇದ್ದರು.