ಹಳೆ ಮೌಲ್ಯ ಹೊಸ ಪೀಳಿಗೆ ಮೇಲೆ ಹೇರದಿರಿ: ಡಾ. ಮಹದೇವ ಸಲಹೆ

| Published : Mar 25 2024, 12:49 AM IST

ಸಾರಾಂಶ

ಇಂದು ಬಹುತೇಕರು ನಾವೆಲ್ಲರೂ ಒಂದೇ ಎಂಬ ಮೌಲ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಒಬ್ಬೊಬ್ಬರ ಚಿಂತನಾ ಶೈಲಿ, ಆಚಾರ, ವಿಚಾರಗಳು ಬದಲಾವಣೆ ಕಾಣುತ್ತಿವೆ ಎಂದರು.ಹಳೆ ಪೀಳಿಗೆಯ ಮೌಲ್ಯಗಳಿಗೆ ಹೊಸ ಪೀಳಿಗೆಯ ಮೌಲ್ಯಗಳು ಬೆರೆತಾಗ ದುರಂತಗಳು ಸಂಭವಿಸುತ್ತವೆ. ಸಮಾನತೆಗೆ ಒಂದು ಹೊಸ ಅರ್ಥವನ್ನು ನೀಡಬೇಕಿದೆ ಎಂಬುದನ್ನು ಈ ಕಾದಂಬರಿಯಲ್ಲಿ ವಿಭಿನ್ನ ಶೈಲಿಯೊಂದಿಗೆ, ಅಚ್ಚುಕಟ್ಟಾಗಿ ಪದ ಜೋಡನೆ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಹಳೆ ಪೀಳಿಗೆಯ ಮೌಲ್ಯಗಳನ್ನು ಹೊಸ ಪೀಳಿಗೆಯ ಮೇಲೆ, ಹೊಸ ಪೀಳಿಗೆಯ ಮೌಲ್ಯಗಳನ್ನು ಹಳೆಯ ಪೀಳಿಗೆಯ ಮೇಲೆ ಹೇರಿದರೆ ದುರಂತ ಸೃಷ್ಟಿಯಾಗುತ್ತದೆ ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಮಹದೇವ ತಿಳಿಸಿದರು.

ನಗರದ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷ್ಣ ಜನಮನ ಅವರ ‘ಚಾವಡಿ’ ಎಂಬ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದು ಬಹುತೇಕರು ನಾವೆಲ್ಲರೂ ಒಂದೇ ಎಂಬ ಮೌಲ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಒಬ್ಬೊಬ್ಬರ ಚಿಂತನಾ ಶೈಲಿ, ಆಚಾರ, ವಿಚಾರಗಳು ಬದಲಾವಣೆ ಕಾಣುತ್ತಿವೆ ಎಂದರು.

ಹಳೆ ಪೀಳಿಗೆಯ ಮೌಲ್ಯಗಳಿಗೆ ಹೊಸ ಪೀಳಿಗೆಯ ಮೌಲ್ಯಗಳು ಬೆರೆತಾಗ ದುರಂತಗಳು ಸಂಭವಿಸುತ್ತವೆ. ಸಮಾನತೆಗೆ ಒಂದು ಹೊಸ ಅರ್ಥವನ್ನು ನೀಡಬೇಕಿದೆ ಎಂಬುದನ್ನು ಈ ಕಾದಂಬರಿಯಲ್ಲಿ ವಿಭಿನ್ನ ಶೈಲಿಯೊಂದಿಗೆ, ಅಚ್ಚುಕಟ್ಟಾಗಿ ಪದ ಜೋಡನೆ ಮಾಡಲಾಗಿದೆ ಎಂದು ಅವರು ಶ್ಲಾಘಿಸಿದರು.

ಹಳ್ಳಿಯ ವ್ಯವಸ್ಥೆಗಳ ಕುರಿತು ಬರೆದಂತಹ ಕಾದಂಬರಿ ಇದಾಗಿದ್ದು, ಭಾಷೆಗೆ ಹೊಸ ಚೌಕಟನ್ನು ನೀಡುವಂತಹ ಹೊಸ ಆಯಾಮ ಹೊಂದಿದೆ. ಹಳ್ಳಿಯ ಜನ ಅವರ ಕಲ್ಪನೆ, ನಂಬಿಕೆಗಳನ್ನು ಅವರದ್ದೇ ಮಾನ ದಂಡದಲ್ಲಿ ಅಳೆಯುತ್ತಾರೆ. ಹಳ್ಳಿಗಳಲ್ಲಿರುವ ಕೆಲವು ಆಚರಣೆಗಳು, ನಂಬಿಕೆಗಳು ಹಳ್ಳಿಗಳು ಹಿಂದುಳಿಯುವುದಕ್ಕೂ ಕಾರಣವಾಗಿದೆ ಎಂದು ಅವರು ವಿಷಾದಿಸಿದರು.

ಈ ಕಾದಂಬರಿಯನ್ನು ಒಂದೆರಡು ಗಂಟೆಗಳಲ್ಲಿ ಕುಳಿತು ಓದಬಹುದು. ಆದರೆ, ಇದರಲ್ಲಿ ಅಡಕವಾಗಿರುವ ವಿಷಯ ವಿಚಾರಗಳು ವಿಭಿನ್ನವಾಗಿವೆ. ಇಲ್ಲಿ ಲೇಖಕರ ಭಾವನೆಗೆ ಭಾಷೆ ಒದಗಿ ಬಂದಿದೆ. ಕಾದಂಬರಿಯಲ್ಲಿ ಸಮುದಾಯ ಹಾಗೂ ವ್ಯಕ್ತಿಗಳ ಘಟನೆಗಳು ಎಂಬ ಎರಡು ಅಂಶಗಳಿರುತ್ತವೆ. ಮೊದಲೆರಡು ಅಧ್ಯಾಯದಲ್ಲಿ ಗ್ರಾಮಗಳ ಗುಣ ಏನಿದೆ ಎಂಬ ಅಗೋಚರ ಸಂಬಂಧಗಳನ್ನು ಇಲ್ಲಿ ತೋರ್ಪಡಿಸಲಾಗಿದೆ ಎಂದು ಅವರು ಹೇಳಿದರು.

ಚಾವಡಿ ಕಾದಂಬರಿ ಕುರಿತು ನಾಗರಾಜು ಎಸ್. ಗುಂಡೇಗಾಲ, ನಾಗರಾಜು ತಲಕಾಡು, ಡಾ.ಹ.ರಾ. ಮಹೇಶ್, ಎಚ್.ಎಂ. ಮಂಜುನಾಥ, ಡಾ. ಕೆಂಪೇಗೌಡ ಮೊದಲಾದವರು ಮಾತನಾಡಿದರು. ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಭಾಷಾ ಅತ್ಯುನ್ನತ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ. ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ಬುಕ್ ಏಜೆನ್ಸಿ ಪ್ರಕಾಶಕ ಸಂಸ್ಕೃತಿ ಸುಬ್ರಮಣ್ಯ ಇದ್ದರು. ಲೇಖಕ ಕೃಷ್ಣ ಜನಮನ ಸ್ವಾಗತಿಸಿದರು. ಡಾ. ದಿನಮಣಿ ನಿರೂಪಿಸಿದರು.

ಕನ್ನಡ ಮಾಧ್ಯಮ ಶಾಲೆಗಳು ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡುವಂತಹ ಕಾರ್ಯ ಮಾಡುತ್ತಿವೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದಾಗ ಸಮಾನತೆಯ ಭಾವ ಬರುತ್ತದೆ. ಮುಖ್ಯಮಂತ್ರಿ, ಯಾವುದೇ ಉನ್ನತ ಸ್ಥಾನದವರ ಮಕ್ಕಳಾಗಲಿ, ಸರ್ಕಾರಿ ಶಾಲೆಯಲ್ಲೇ ಎಲ್ಲರೊಂದಿಗೆ ಬೆರೆತು ಓದಬೇಕು. ಇದರಿಂದ ಸಮಾಜದಲ್ಲಿ ಅಸಮಾನತೆ ದೂರ ಆಗುತ್ತದೆ. ಹೀಗಾಗಿ, ಖಾಸಗಿ ಶಾಲೆಗಳನ್ನು ಮುಚ್ಚಬೇಕು. ಆಗ ಸರ್ಕಾರಿ ಶಾಲೆಗಳಿಗೆ ಒಂದು ಉನ್ನತ ಗೌರವ ಲಭಿಸುತ್ತದೆ.

- ಸಂಸ್ಕೃತಿ ಸುಬ್ರಹ್ಮಣ್ಯ, ಪ್ರಕಾಶಕ