ಜೂನ್ ಅಂತ್ಯಕ್ಕೆ ಮೈಷುಗರ್ ಆರಂಭ: ಸಿ.ಡಿ.ಗಂಗಾಧರ್

| Published : Apr 13 2025, 02:10 AM IST

ಸಾರಾಂಶ

ಕಾರ್ಖಾನೆ ಆರಂಭಿಸುವುದಕ್ಕೆ ಆರ್ಥಿಕ ಸಮಸ್ಯೆ ಇಲ್ಲ. ಈ ಬಾರಿಯೂ ಸರ್ಕಾರದ ಹಣಕಾಸಿನ ನೆರವಿಲ್ಲದೆ ಕಾರ್ಖಾನೆಯನ್ನು ಮುನ್ನಡೆಸುವ ವಿಶ್ವಾಸ ಸಿ.ಡಿ.ಗಂಗಾಧರ್ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯಮುಂದಿನ ಜೂನ್ ಅಂತ್ಯದ ವೇಳೆಗೆ ಮೈಷುಗರ್ ಕಾರ್ಖಾನೆಯನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಭರವಸೆ ನೀಡಿದರು.ಕಾರ್ಖಾನೆಯ ಅತಿಥಿಗೃಹದಲ್ಲಿ ಶನಿವಾರ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ ಮಾತನಾಡಿ, ಇದುವರೆಗೆ ಕಬ್ಬು ಬೆಳೆಯುವ ರೈತರಿಂದ 4.50 ಲಕ್ಷ ಟನ್ ಕಬ್ಬನ್ನು ಒಪ್ಪಿಗೆ ಪಡೆಯಲಾಗಿದೆ. ಜೇಷ್ಠತೆ ಆಧಾರದ ಮೇಲೆ ಕಬ್ಬು ಕಟಾವು ಮಾಡಲಾಗುವುದು. ಕಾರ್ಖಾನೆ ಆರಂಭಿಸುವುದಕ್ಕೆ ಆರ್ಥಿಕ ಸಮಸ್ಯೆ ಇಲ್ಲ. ಈ ಬಾರಿಯೂ ಸರ್ಕಾರದ ಹಣಕಾಸಿನ ನೆರವಿಲ್ಲದೆ ಕಾರ್ಖಾನೆಯನ್ನು ಮುನ್ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು.ಆರ್.ಬಿ.ಟೆಕ್ ಕಂಪನಿಯಿಂದ ನಷ್ಟ:ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆ ಹೊಣೆ ಹೊತ್ತಿರುವ ಆರ್.ಬಿ.ಟೆಕ್ ಕಂಪನಿ ಎರಡು ಸಾಲಿನಲ್ಲಿ ಸಮರ್ಥವಾಗಿ ಕಾರ್ಯಾಚರಣೆ ನಡೆಸುವಲ್ಲಿ ವಿಫಲವಾಗಿದೆ. ಇದರಿಂದ ಕಾರ್ಖಾನೆಗೆ ನಷ್ಟವಾಗಿದೆ. ಈ ಬಾರಿಯೂ ಸರ್ಕಾರ ಅದೇ ಕಂಪನಿಗೆ ಗುತ್ತಿಗೆ ಅನುಮತಿ ನೀಡಿದೆ. ಹಾಗಾಗಿ ಆ ಕಂಪನಿಯನ್ನು ಉತ್ಸವ ಮೂರ್ತಿಯಂತೆ ಕೂರಿಸಿ ಉಳಿದ ಕೆಲಸಗಳನ್ನು ನಾವೇ ನಿಭಾಯಿಸುವುದಾಗಿ ಹೇಳಿದರು. ಸರ್ಕಾರ ಆರ್.ಬಿ.ಟೆಕ್ ಕಂಪನಿಗೆ ಈಗಾಗಲೇ 3.80 ಕೋಟಿ ರು. ನೀಡುವಂತೆ ಸೂಚನೆ ನೀಡಿದ್ದರ ಮೇರೆಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿದರು.ಆರ್.ಬಿ.ಟೆಕ್ ಕಂಪನಿಯ ಠೇವಣಿ ಹಣ ನಮ್ಮಲ್ಲಿಯೇ ಇರುವುದರಿಂದ ನಾವು ಆ ಕಂಪನಿಗೆ ಹಣ ನೀಡುವ ಸಮಯದಲ್ಲಿ ಕಾರ್ಖಾನೆಗೆ ಆಗಿರುವ ನಷ್ಟದ ಬಾಬ್ತನ್ನು ಕಟಾವು ಮಾಡಿ ನೀಡಲಾಗುವುದು. ಈಗ ಆ ಹಣವನ್ನು ಕಟಾವು ಮಾಡಲು ಮುಂದಾದರೆ ನ್ಯಾಯಾಲಯದ ಮೊರೆ ಹೋಗಬಹುದು, ಕಾರ್ಖಾನೆ ನಡೆಯದಂತೆ ತಡೆಯಾಜ್ಞೆ ತರಲು ಅವಕಾಶವಿದೆ. ಇದರಿಂದ ಕಾರ್ಖಾನೆ ವ್ಯಾಪ್ತಿಯ ರೈತರಿಗೆ ತೊಂದರೆಯಾಗಲಿದೆ ಎಂದು ರೈತ ಮುಖಂಡರಿಗೆ ತಿಳಿಸಿದರು.ಬಾಯ್ಲಿಂಗ್ ಹೌಸ್‌ಗೆ 60 ಕೋಟಿ ರು. ಪ್ರಸ್ತಾವನೆ:ಈಗಿರುವ ಬಾಯ್ಲಿಂಗ್ ಹೌಸ್‌ನ್ನು ನಿತ್ಯ 5,000 ಟನ್ ಸಾಮರ್ಥ್ಯ ಅರೆಯುವಂತೆ ಮಾಡಬೇಕಾದರೆ 60 ಕೋಟಿ ರು. ಅಗತ್ಯವಿದೆ. ಹಣಕಾಸನ್ನು ಒದಗಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಕಾರ್ಯಾಚರಣೆಗೆ 2 ರಿಂದ 3 ಕೋಟಿ ರು. ವೆಚ್ಚ ಮಾಡಿ ಬಾಯ್ಲಿಂಗ್ ಹೌಸ್‌ನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.ಬಾಯ್ಲಿಂಗ್ ಹೌಸ್‌ಗೆ 60 ಕೋಟಿ ರೂ. ಹಾಗೂ ಎಥೆನಾಲ್ ಘಟಕ ಸ್ಥಾಪನೆಗೆ 120 ಕೋಟಿ ರು.ಗಳನ್ನು ಸರ್ಕಾರದ ಬಳಿ ಕೋರಲಾಗಿದೆ. ಸರ್ಕಾರ ಕಾರ್ಖಾನೆ ಪುನಶ್ಚೇತನದ ಬಗ್ಗೆ ಆಸಕ್ತಿ ವಹಿಸಿ ಹಣ ನೀಡಿದಲ್ಲಿ ಅಭಿವೃದ್ಧಿಗೆ ಹೊಸ ರೂಪ ದೊರಕಲಿದೆ ಎಂದು ನುಡಿದರು.ನಿತ್ಯ 3500 ಟನ್ ಅರೆಯುವ ಸಾಮರ್ಥ್ಯ:ಕಾರ್ಖಾನೆಯಲ್ಲಿ ನಿತ್ಯ 3500 ಟನ್ ಕಬ್ಬು ಅರೆಯುವಂತೆ ಮಿಲ್‌ನ್ನು ಸಿದ್ಧಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.8 ಇಳುವರಿ ತೆಗೆಯುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಕಳೆದ ಸಾಲಿನಲ್ಲಿ ಉತ್ತಮ ಗುಣಟ್ಟದ ಸಕ್ಕರೆಯನ್ನು ಉತ್ಪಾದಿಸಲಾಗಿದೆ. ಬಾಯ್ಲರ್ ಹೌಸ್ ಉನ್ನತೀಕರಣಗೊಂಡರೆ ಉತ್ಕೃಷ್ಟ ಗುಣಮಟ್ಟದ ಸಕ್ಕರೆ ಉತ್ಪಾದನೆ ಮಾಡುಲು ಸಾಧ್ಯವಿದೆ ಎಂದು ವಿಶ್ವಾಸದಿಂದ ಹೇಳಿದರು.ಸಭೆಯಲ್ಲಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್, ವ್ಯವಸ್ಥಾಪಕ ಅಪ್ಪಾಸಾಹೇಬ್ ಪಾಟೀಲ, ರೈತ ಮುಖಂಡರಾದ ಸುನಂದಾ ಜಯರಾಂ, ಕೆ.ಬೋರಯ್ಯ, ಡಿಸಿಸಿಬ್ಯಾಂಕ್ ಮಾಜಿ ಅಧ್ಯಕ್ಷ ಕೀಲಾರ ಕೃಷ್ಣ, ಇಂಡುವಾಳು ಚಂದ್ರಶೇಖರ್, ಹೆಮ್ಮಿಗೆ ಚಂದ್ರಶೇಖರ್, ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಜೈ ಕರ್ನಾಟಕ ಸಂಘಟನೆಯ ನಾರಾಯಣ್, ದಸಂಸ ಎಂ.ವಿ.ಕೃಷ್ಣ ಇತರರಿದ್ದರು..--------ಮೈಷುಗರ್ ವಸ್ತುಸ್ಥಿತಿ ಸ್ಪಷ್ಟ ಚಿತ್ರಣವಿಲ್ಲ..!

- ಕಾರ್ಖಾನೆಯೊಳಗಿನ ಸಿದ್ಧತೆ ಬಗ್ಗೆ ಯಾರಿಂದಲೂ ವಿವರಣೆ ಇಲ್ಲ

- ದುಡಿಮೆ ಬಂಡವಾಳದ ಬಗ್ಗೆ ಮಾಹಿತಿ ಇಲ್ಲ- ನೌಕರರನ್ನು ಎಲ್ಲಿಂದ ಕರೆತರುವರೆಂಬ ಬಗ್ಗೆ ನಿಖರತೆಯೇ ಇಲ್ಲ

ಕನ್ನಡಪ್ರಭ ವಾರ್ತೆ, ಮಂಡ್ಯ

ಜೂನ್ ಅಂತ್ಯದ ವೇಳೆಗೆ ಮೈಷುಗರ್ ಕಾರ್ಖಾನೆಯನ್ನು ಕಾರ್ಯಾರಂಭ ಮಾಡುವುದಾಗಿ ನಿರ್ಭಯವಾಗಿ ಹೇಳುವ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಕಾರ್ಖಾನೆಯೊಳಗಿನ ವಸ್ತುಸ್ಥಿತಿಯ ಸ್ಪಷ್ಟ ಚಿತ್ರಣವನ್ನು ಮುಂದಿಡದೆ ಮರೆಮಾಚುವ ಪ್ರಯತ್ನ ನಡೆಸಿದಂತೆ ಕಂಡುಬಂದಿತು.ಆರ್.ಬಿ.ಟೆಕ್ ಕಂಪನಿಯವರನ್ನು ಉತ್ಸವ ಮೂರ್ತಿಯಂತೆ ಕೂರಿಸುವುದಾಗಿ ಹೇಳುವ ಅಧ್ಯಕ್ಷರು, ಕಾರ್ಖಾನೆ ನೌಕರರನ್ನು ಎಲ್ಲಿಂದ ಕರೆತರುತ್ತಾರೆ. ನಿವೃತ್ತ ನೌಕರರನ್ನು ಸೇರಿಸಿಕೊಂಡು ಕಬ್ಬು ನುರಿಸುವರೋ, ಪರ್ಯಾಯ ನೌಕರರ ತಂಡವನ್ನು ಹೊರಗಿನಿಂದ ಕರೆಸುವರೋ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಬಾಯ್ಲಿಂಗ್ ಹೌಸ್ ಕಳೆದ ಮೂರು ಸಾಲಿನಿಂದಲೂ ಸಮರ್ಥವಾಗಿಲ್ಲ. ಪ್ರತಿ ವರ್ಷ ರೆಡಿ ಮಾಡಿದರೂ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈಗಲೂ ಮೂರು ಸಾಲಿನಲ್ಲಿ ಖರ್ಚು ಮಾಡಿದಷ್ಟೇ ಹಣವನ್ನು ಖರ್ಚು ಮಾಡಿ ಮುನ್ನಡೆಸಲು ಮುಂದಾಗಿದ್ದಾರೆ. ಬಾಯ್ಲಿಂಗ್ ಹೌಸ್ ಸಮರ್ಥವಾಗಿಲ್ಲದಿದ್ದರೆ ಗುಣಮಟ್ಟದ ಸಕ್ಕರೆ ಉತ್ಪಾದನೆಯಾಗುವುದಿಲ್ಲ ಎನ್ನುವ ಇವರೇ ತಾತ್ಕಾಲಿಕವಾಗಿ ಅದನ್ನು ರೆಡಿಮಾಡುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ಎಷ್ಟರಮಟ್ಟಿಗೆ ಯಶಸ್ಸು ಕಾಣಲು ಸಾಧ್ಯ ಎನ್ನುವುದು ರೈತಮುಖಂಡರ ಪ್ರಶ್ನೆಯಾಗಿದೆ.ಪ್ರಸ್ತುತ ಕಾರ್ಖಾನೆಯ ದುಡಿಯುವ ಬಂಡವಾಳ ಎಷ್ಟಿದೆ ಎಂಬ ಬಗ್ಗೆ ನಿಖರತೆ ಇಲ್ಲ. ಅದನ್ನು ಬಹಿರಂಗಪಡಿಸುತ್ತಲೂ ಇಲ್ಲ. ಕಾರ್ಖಾನೆಯೊಳಗೆ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಹೇಗೆ ನಡೆಯುತ್ತಿದೆ. ಯಾವಾಗ ಅದು ಪೂರ್ಣಗೊಳ್ಳಲಿದೆ. ದುರಸ್ತಿಗೆ ಖರ್ಚಾದ ಹಣವೆಷ್ಟು ಈ ಯಾವುದೇ ಮಾಹಿತಿಯನ್ನು ರೈತರ ಮುಖಂಡರ ಸಭೆಯ ಮುಂದಿಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಕಾರ್ಖಾನೆಯ ವ್ಯವಸ್ಥಾಪಕರನ್ನು ಹೊರತುಪಡಿಸಿದಂತೆ ಉಳಿದಂತೆ ವಿವಿಧ ವಿಭಾಗಗಳ ತಾಂತ್ರಿಕ ತಜ್ಞರು ಕಾರ್ಖಾನೆಯೊಳಗೆ ಪರಿಸ್ಥಿತಿಯನ್ನು ವಿವರಿಸಲೇ ಇಲ್ಲ. ಎರಡನೇ ಶನಿವಾರದ ನೆಪದಲ್ಲಿ ಅವರೆಲ್ಲರೂ ರಜೆಯಲ್ಲಿದ್ದರು. ಇನ್ನು ವ್ಯವಸ್ಥಾಪಕ ಅಪ್ಪಾಸಾಹೇಬ್ ಪಾಟೀಲರು ಕಾರ್ಖಾನೆ ವಸ್ತುಸ್ಥಿತಿ ವಿವರಣೆ ಕೇಳಿದರೆ, ಕೋ-ಜನ್ ಇತಿಹಾಸ, ಇನ್ನೂ ಸ್ಥಾಪನೆಯಾಗದ ಎಥೆನಾಲ್ ಪ್ಲಾಂಟ್ ಬಗ್ಗೆ ವಿವರಣೆ, ಅದರ ಮೌಲ್ಯ, ಉಪಯೋಗ ಸೇರಿದಂತೆ ಬೇಡದ ಮಾತುಗಳಿಗೆ ಮಹತ್ವ ನೀಡಿದರು.----------ಹಾವು ಹರಿದಾಡಿದ್ದಕ್ಕೆ ಮರಗಳ ಕಟಾವು: ಸಿ.ಡಿ.ಗಂಗಾಧರ್ಕನ್ನಡಪ್ರಭ ವಾರ್ತೆ, ಮಂಡ್ಯಹಾವು ಹರಿದಾಡಿತೆಂಬ ಕಾರಣಕ್ಕೆ ಕಾರ್ಖಾನೆ ವ್ಯಾಪ್ತಿಯೊಳಗಿದ್ದ ಮರಗಳನ್ನು ಕಡಿದಿದ್ದಾರೆ. ಈ ಮರಗಳನ್ನು ಕಡಿಯುವುದಕ್ಕೆ ಅಧಿಕಾರಿಗಳು ಅರಣ್ಯ ಇಲಾಖೆ ಅನುಮತಿಯನ್ನು ಪಡೆಯದಿರುವುದು ತಪ್ಪು ಎಂದು ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.ಮರಗಳನ್ನು ಕಡಿದು ಅಧ್ಯಕ್ಷರು ತೆಗೆದುಕೊಂಡು ಹೋಗಿದ್ದಾರೆಂಬ ಆರೋಪವಿದೆ. ನನಗೆ ಅಂತಹ ದುರ್ಗತಿ ಬಂದಿಲ್ಲ. ೬ ಬೇವಿನ ಮರಗಳನ್ನು ೭೩ ಸಾವಿರ ರು.ಗಳಿಗೆ ಹರಾಜು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.ಕಾರ್ಖಾನೆಯೊಳಗಿನ ವಸ್ತುಗಳು ಕಳುವಾಗುತ್ತಿರುವ ಸಂಗತಿಯೂ ಇತ್ತೀಚೆಗೆ ಬೆಳಕಿಗೆ ಬಂದಿದೆ. ಅದರ ಬಗ್ಗೆಯೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದರು.

೧೨ಕೆಎಂಎನ್‌ಡಿ-೧ಮೈಷುಗರ್ ಕಾರ್ಖಾನೆ ಆವರಣದಲ್ಲಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ರೈತಸಂಘ ಹಾಗೂ ಇತರೆ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಸಿದರು.