ಸಾರಾಂಶ
ಕನ್ನಡಪ್ರಭ ವಾರ್ತೆ ಬನ್ನೂರುರಾಷ್ಟ್ರಕವಿ ಕುವೆಂಪು ಅವರು ನಮ್ಮಿಂದ ಮರೆಯಾಗಿದ್ದರೂ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಂದ ಮನುಕುಲ ಇರುವವರೆಗೂ ಮರೆಯಲಾಗದ ಚೇತನವಾಗಿದ್ದಾರೆ ಎಂದು ಮಲೈ ಮಹದೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಸಿ. ರಾಜೇಶ್ ಗೌಡ ಹೇಳಿದರು.ಪಟ್ಟಣದ ಸಮೀಪದ ಎನ್.ಸಿ.ಆರ್. ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಕ್ಕಳ ಸಂತೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಚಿಕ್ಕ ಮಕ್ಕಳಿಗೂ ಸಾಹಿತ್ಯಾಭಿರುಚಿಯನ್ನು ಉಂಟು ಮಾಡುವ ನಿಟ್ಟಿನಲ್ಲಿ ಕಿಂದರಿ ಜೋಗಿಯನ್ನು ಬರೆದ ಕುವೆಂಪು ಅವರು ಶ್ರೀ ರಾಮಯಣದರ್ಶನಂ ಮಹಾಕಾವ್ಯದ ಮೂಲಕ ರಾಮಾಯಣದ ಪ್ರತಿ ಪಾತ್ರಕ್ಕೂ ತನ್ನದೇ ಆದ ಶೈಲಿಯಲ್ಲಿ ಜೀವಂತಿಕೆಯನ್ನು ತುಂಬಿ ಆ ಪಾತ್ರ ಆ ಸಮಯದಲ್ಲಿ ಸಿಲುಕಿದ ಸನ್ನಿವೇಶವನ್ನು ವಿವರಿಸಿರುವುದು ಎಲ್ಲ ಪಾತ್ರವು ಸರಿ ಎನ್ನಿಸುವಂತೆ ರೂಪಿಸಿ ಸಹೃದಯರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ಸನ್ನು ಗಳಿಸಿದರೆಂದು ಅವರು ಶ್ಲಾಘಿಸಿದರು.ಶಾಲೆಯ ಮಕ್ಕಳು ವಿವಿಧ ಪ್ರಾಣಿಗಳ ಚಿತ್ರಪಟಗಳು, ಮಗ್ಗಿಯ ಚಾರ್ಟ್, ಗುಣಿತಾಕ್ಷರ, ವರ್ಣಮಾಲೆ, ಕೆಂಪುಕೋಟೆ, ಪೈಥಾಗೋರಸ್ನ ಪ್ರಮೇಯದ ಮಾದರಿ, ಮಾನವನ ವಿವಿಧ ಭಾಗದ ಪ್ರಾತ್ಯಕ್ಷಿಕೆ, ರಂಗೋಲಿಯ ಚಿತ್ರಗಳು ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯಿತು.