ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ.ಕೋಟೆ
ಗುರು ಶಿಷ್ಯರ ನಡುವಿನ ಸಂಬಂಧ ಭಕ್ತಿಯಂತೆ ಪವಿತ್ರವಾದದ್ದು ಎಂದು ಹುಣಸೂರು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ನಂಜುಂಡಸ್ವಾಮಿ ಹರದನಹಳ್ಳಿ ಅಭಿಪ್ರಾಯಪಟ್ಟರು.ಇಲ್ಲಿನ ಎನ್. ಬೆಳೆತ್ತೂರು ಗ್ರಾಮದ ಹಳೆಯ ವಿದ್ಯಾರ್ಥಿಗಳು ಗುರುವಂದನ ಹಾಗೂ ಸ್ನೇಹ ಸ್ಪಂದನ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಮಾನವನ ಸಂಬಂಧವನ್ನು ಸ್ನೇಹ ಪ್ರೀತಿ ಪ್ರೇಮ ಮಮತೆ ಹೀಗೆ ಕರೆಯುವಾಗ ಗುರು ಶಿಷ್ಯರ ನಡುವಿನ ಸಂಬಂಧ ಭಕ್ತಿಯಿಂದ ತುಂಬಿರುತ್ತದೆ. ಹರಿಹರ ಕವಿಯ ಭಕ್ತಿ ಹೇಗೆ ನಂಬಿದ ದೇವರ ಮೇಲೆ ಇತ್ತು. ಹಾಗೆ ಇಂದಿನ ಕಾರ್ಯಕ್ರಮ ನಡೆಯುತ್ತಿದೆ. ಜಿ.ಎಸ್. ಶಿವರುದ್ರಪ್ಪ - ವ್ಯಾಸರಾವ್ ರಾಮಕೃಷ್ಣ ಪರಮಹಂಸ- ಸ್ವಾಮಿ ವಿವೇಕಾನಂದ ಗೋವಿಂದ ಭಟ್ಟ -ಸಂತ ಶಿಶುನಾಳ ಶರೀಫ್ ಕುವೆಂಪು- ವೆಂಕಣ್ಣಯ್ಯ ಪ್ಲೇಟೋ - ಅರಿಸ್ಟಾಟಲ್ ಇವರ ನಡುವಿನ ಗುರು ಭಕ್ತಿಯನ್ನು ತಿಳಿಸಿ ಭಕ್ತಿ ಭಂಡಾರಿ ಬಸವಣ್ಣ ಮಾದರ ಚೆನ್ನಯ್ಯನ ಮನೆಯ ಮಗ ನಾನು ಎಂದು ಹೇಳುವ ಮೂಲಕ ಭಕ್ತಿಯನ್ನು ಮೆರೆದಿದ್ದಾನೆ ಎಂದರು.ಬೇಡರ ಕಣ್ಣಪ್ಪ ಮತ್ತು ಏಕಲವ್ಯರ ಭಕ್ತಿ ಇಂದಿಗೂ ಸಾಹಿತ್ಯದ ಸಂದರ್ಭದಲ್ಲಿ ಸಮಾಜದ ಸಂದರ್ಭದಲ್ಲಿ ಹೇಳುತ್ತೇವೆ. ಗುರು ಭಕ್ತಿಗೆ ಜಾತಿ ಮತ ಧರ್ಮ ಲಿಂಗ ಯಾವುದೇ ತಾರತಮ್ಯ ಇರುವುದಿಲ್ಲ. ಹಸು ಹುಲ್ಲು ತಿಂದು ಹಾಲು ಕೊಡುವಂತೆ ಅವಿದ್ಯಾವಂತ ಮಗುವಿಗೆ ಜ್ಞಾನ ಕೊಡುವವರೇ ಗುರು. ಇಂದು ಬದಲಾದ ಸಮಾಜದ ಆಧುನಿಕತೆಯಲ್ಲಿ ಕೆಲವು ದುಶ್ಚಟದಿಂದ ಪೆನ್ನು ಪುಸ್ತಕ ಹಿಡಿಯುವ ಕೈಗಳು ಖಡ್ಗ, ಬಾಂಬ್, ಗನ್ ಗಳನ್ನು ಹಿಡಿಯುವಂತ ಕೆಟ್ಟ ವ್ಯವಸ್ಥೆ ಇದೆ. ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಪೆನ್ನು ಪುಸ್ತಕ ಕೊಡಿ ಎಂದು ಹೇಳಿದರು.
ಉದ್ಯಮಿ ನಿಂಗರಾಜು ಮಾತನಾಡಿ, ಗುರುವಿನ ಶಿಕ್ಷಣದಿಂದ ನಾವು ನಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಂಡಿದ್ದೇವೆ. ಓದುವಾಗ ನಮಗೆ ತಂದೆ ತಾಯಿಯಂತೆ ಸಹಕಾರ, ಸಹಾಯ ನೀಡಿದ್ದು ಹಾಡು - ಅಭಿನಯವನ್ನು ಕಲಿಸಿದವರು ಗುರುಗಳು ಎಂದರು.ಕಾರ್ಯಕ್ರಮದಲ್ಲಿ ಗುರು ವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕ ಸ್ವಾಮಿ ನಾಯಕ, ವರದನಾಯಕ, ಬಸವರಾಜ, ಸುಂದರಮ್ಮಣಿ, ತಮ್ಮ ಶಿಕ್ಷಕ ವೃತ್ತಿಯಲ್ಲಿನ ಅನುಭವವನ್ನು ಹಂಚಿಕೊಂಡರು.
ಸಂದರ್ಭದಲ್ಲಿ ಸಾಧಕರಾದ ವೈದ್ಯಕೀಯ ಆಡಳಿತ ಅಧಿಕಾರಿ ಡಾ. ಪುಟ್ಟರಾಜು, ಉದ್ಯಮಿ ನಿಂಗರಾಜು, ವಕೀಲ ಮಹೇಶ್, ಶಿವಕುಮಾರ್ ಭೀಮರಾಜ್, ಕೆಂಪರಾಜ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನೂರಾರು ಹಳೆಯ ವಿದ್ಯಾರ್ಥಿಗಳು ಸೇರಿದ್ದರು. ಭೀಮರಾಜ್ ನಿರೂಪಿಸಿದರೆ, ಬಸವರಾಜ್ ಸ್ವಾಗತಿಸಿದರು. ನಿಂಗರಾಜು ವಂದಿಸಿದರು.