ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ನಾಡಪ್ರಭು ಕೆಂಪೇಗೌಡರು ಅಪರೂಪದ ದೂರದೃಷ್ಟಿಯ ನಾಯಕರಾಗಿದ್ದು ಅದರ ನೀಡಿದ ಆಡಳಿತ ಇಡೀ ವ್ಯವಸ್ಥೆಗೆ ಮಾದರಿಯಾಗಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಅಭಿಪ್ರಾಯಿಸಿದರು.ಕೆಂಪೇಗೌಡರು ಕೇವಲ ನಾಡಪ್ರಭು ಮಾತ್ರವಲ್ಲದೇ, ಅಪೂರ್ವ ಕನಸುಗಾರರು, ಸಮರ್ಥ ಆಡಳಿತಗಾರರು ಹಾಗೂ ಧರ್ಮ ಪ್ರಭುಗಳಾಗಿದ್ದರು ಮತ್ತು ಬೆಂಗಳೂರು ಜಾಗತಿಕ ನಗರವಾಗಲು ಮೂಲ ಕಾರಣಕರ್ತರೆಂದು ಸಂಸದ ಶ್ರೇಯಸ್ ಎಂ.ಪಟೇಲ್ ಮನದಾಳದಿಂದ ನುಡಿದರು. ಪಟ್ಟಣದ ಶಿಕ್ಷಕರ ಭವನದಲ್ಲಿ ಒಕ್ಕಲಿಗ ನೌಕರರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ 516ನೇ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಂಪೇಗೌಡರ ಆತ್ಮಸ್ಥೈರ್ಯ, ಪರಿಶ್ರಮ ಬದ್ಧತೆ, ನೈತಿಕತೆ, ಸ್ವಾಭಿಮಾನ, ಜನಹಿತ ಇಚ್ಛಾಶಕ್ತಿ, ಅನುಪಮ ವ್ಯಕ್ತಿತ್ವದ ನಾಯಕತ್ವದ ಒಳನೋಟಗಳು ಎಲ್ಲರಿಗೂ ಆದರ್ಶವಾಗಿದ್ದು, ಕೆಂಪೇಗೌಡರ ಆದರ್ಶ, ತತ್ವ ಹಾಗೂ ಅವರು ಸಮಾಜಕ್ಕೆ ಹಾಕಿಕೊಟ್ಟ ಮಾರ್ಗದರ್ಶನವನ್ನು ಉಳಿಸಿ ಬೆಳೆಸುವ ಕೆಲಸ ಮಾಡುವ ಜತೆಗೆ ಅವುಗಳ ಪಾಲನೆ ಅಗತ್ಯವಾಗಿದೆ. ಕೆಂಪೇಗೌಡರು ವೃತ್ತಿಯ ಹೆಸರಿನಲ್ಲಿ ವಿವಿಧ ಪೇಟೆಗಳನ್ನು ನಿರ್ಮಿಸಿದ್ದರು, ಬೆಂಗಳೂರಿನ ರಕ್ಷಣೆಗಾಗಿ ಕೋಟೆ ಕೊತ್ತಲುಗಳನ್ನು ನಿರ್ಮಿಸಿ ಹಲವು ಪೇಟೆಗಳನ್ನು ಕಟ್ಟಿದರು. ಈ ಪೇಟೆಗಳೆಲ್ಲವೂ ಪ್ರಸ್ತುತ ಇಂಡಸ್ಟ್ರಿಯಲ್ ಏರಿಯಾಗಳಾಗಿವೆ ಮತ್ತು ನಾವುಗಳೆಲ್ಲರೂ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಅವಲಂಬಿತರಾಗಿದ್ದು, ಅವರಿಗೆ ಕೃತಾರ್ಥರಾಗಬೇಕು ಎಂದರು. 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಉತ್ತೇಜಿಸುವ ಕಾರ್ಯವು ಸಂತೋಷದ ವಿಚಾರ ಎಂದರು.ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಗೋಪಾಲ್ ಪಿ.ಆರ್. ಪ್ರಧಾನ ಭಾಷಣ ಮಾಡುತ್ತ ಕೆಂಪೇಗೌಡರು ಧೀರೋದಾತ್ತ ನಾಯಕ, ದೂರದರ್ಶಿತ್ವವುಳ್ಳ ರಾಜಕೀಯ ಮುತ್ಸದ್ಧಿ ಹಾಗೂ ಆರ್ಥಿಕ ಚಿಂತಕರೂ ಹೌದು. 16ನೇ ಶತಮಾನದಲ್ಲಿ ಅತ್ಯುನ್ನತ ಮಾದರಿಯ ಯೋಜನಾ ಬದ್ಧ ಶೈಲಿ ನಗರವಾಗಿ ಬೆಂಗಳೂರನ್ನು ವಿಸ್ತರಣೆ ಮಾಡಿದರು. ನಾಡು ಮತ್ತು ಜನರ ಹಿತರಕ್ಷಣೆಗಾಗಿ ಕೆರೆ, ಕೋಟೆ ಮತ್ತು ಗುಡಿಗೋಪುರಗಳ ನಿರ್ಮಾಣದ ಜೊತೆಗೆ ನಗರ ಹಾಗೂ ಕೃಷಿ ನೀರಿನ ಸಂಪನ್ಮೂಲ ವ್ಯವಸ್ಥೆ ಮತ್ತು ವಾಣಿಜ್ಯ ನಗರವಾಗಿ ಅಭಿವೃದ್ಧಿ ಮಾಡಿದರು. ಬೆಂಗಳೂರು ಎಲ್ಲ ಧರ್ಮ, ಭಾಷಿಕರಿಗೆ ಸುರಕ್ಷಿತ ಸ್ಥಳ, ಹಾಗಾಗಿ ಬೆಂಗಳೂರು ಶೈಕ್ಷಣಿಕ, ಔದ್ಯೋಗಿಕ, ಆರೋಗ್ಯ ಸೇರಿದಂತೆ ಎಲ್ಲ ವಲಯಗಳಲ್ಲಿಯೂ ತನ್ನದೇ ಆದ ಭಾವು ಮೂಡಿಸಿದ್ದು, ಜಗತ್ತಿಗೆ ಸಿಲಿಕಾನ್ ವ್ಯಾಲಿಯಾಗಿದೆ ಎಂದು, ತಿಳಿಸಿ, ಸುದೀರ್ಘವಾಗಿ ಮಾತನಾಡಿದರು.
ಒಕ್ಕಲಿಗ ನೌಕರರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ರಮೇಶ್ ಆರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು ಹಾಗೂ ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಅರುಣ್ ಕುಮಾರ್ ವಿದ್ಯಾರ್ಥಿಗಳ ಕುರಿತು ಹಿತನುಡಿಗಳನ್ನಾಡಿದರು.ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣಗೌಡ, ತಾ. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಕಾರ್ಯದರ್ಶಿ ಮಂಜೇಗೌಡ, ಹಾಸನ ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್, ಕೆಂಪೇಗೌಡ ಬ್ರಿಗೇಡ್‌ನ ತಾ. ಅಧ್ಯಕ್ಷ ಕೆ.ಬಿ.ಲೋಕೇಶ್, ನಿ. ಪ್ರಾಂಶುಪಾಲ ಕುಮಾರಸ್ವಾಮಿ, ತಾ. ಕಾರ್ಯಕಾರಿ ಸಮಿತಿಯ ಗೌ.ಅಧ್ಯಕ್ಷ ಕಾಳೇಗೌಡ, ಉಪಾಧ್ಯಕ್ಷರಾದ ಶೇಖರ್ ಎಚ್.ಪಿ., ಭೋಗೇಶ್ ಎಚ್.ಎನ್., ಹಾಗೂ ಕೆ.ಟಿ.ರವಿಕುಮಾರ್, ಕಾರ್ಯದರ್ಶಿ ಜವರೇಗೌಡ ಇತರರು ಇದ್ದರು.