ನಾಡಪ್ರಭು ಕೆಂಪೇಗೌಡ ದೂರದೃಷ್ಟಿತ್ವದ ಆಡಳಿತಗಾರ: ಶಾಸಕ ಡಿ.ಜಿ.ಶಾಂತನಗೌಡ

| Published : Jun 28 2024, 12:55 AM IST

ನಾಡಪ್ರಭು ಕೆಂಪೇಗೌಡ ದೂರದೃಷ್ಟಿತ್ವದ ಆಡಳಿತಗಾರ: ಶಾಸಕ ಡಿ.ಜಿ.ಶಾಂತನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

16ನೇ ಶತಮಾನದಲ್ಲಿದ್ದ ಕೆಂಪೇಗೌಡರು ಮುಂದಿನ 2 ಸಾವಿರ ವರ್ಷಗಳಲ್ಲಿನ ಸ್ಥಿತಿಗತಿ ಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಿದ್ದರು

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿ ಅನೇಕ ಕ್ಷೇತ್ರಗಳ ಬಗ್ಗೆ ನಾಡಪ್ರ ಭು ಕೆಂಪೇಗೌಡ ಅವರಿಗಿದ್ದ ದೂರದೃಷ್ಟಿತ್ವ ಆಡಳಿತದ ಪರಿಕಲ್ಪನೆಗಳು ಇಂದಿನ ಮತ್ತು ಮುಂದಿನ ಎಲ್ಲಾ ತಲೆಮಾರುಗಳಿಗೆ ಉತ್ತಮವಾದ ದಾರಿದೀಪವಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಅವರ 515ನೇ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿ, ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನಾಡಿನ ಇತಿಹಾಸದಲ್ಲಿ ಬಂದುಹೋದ ಎಲ್ಲಾ ಮಹಾನೀಯರ ವಿಷಯಗಳು ಪಠ್ಯಪುಸ್ತಕಗಳಲ್ಲಿ ಇರುತ್ತಿದ್ದವು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇವು ಕಣ್ಮರೆಯಾಗಿ ಇಂದಿನ ಮಕ್ಕಳಿಗೆ ಮಹಾನ್ ಪುರುಷರ ಬಗ್ಗೆ ಮಾಹಿತಿ ಸಿಗುವುದು ಕಡಿಮೆಯಾಗಿದೆ ಎಂದರು.

ಇಂದಿನ ಸರ್ಕಾರಗಳು ಯೋಜನೆ ರೂಪಿಸುವಾಗ ಮುಂದಿನ 25 ವರ್ಷಗಳ ಸ್ಥಿತಿಗತಿ ಗಮನದಲ್ಲಿಟ್ಟುಕೂಂಡು ತಯಾರಿಸುತ್ತವೆ. ಆದರೆ 16ನೇ ಶತಮಾನದಲ್ಲಿದ್ದ ಕೆಂಪೇಗೌಡರು ಮುಂದಿನ 2 ಸಾವಿರ ವರ್ಷಗಳಲ್ಲಿನ ಸ್ಥಿತಿಗತಿ ಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಿದ್ದರು ಈ ಕಾರಣಕ್ಕಾಗಿಯೇ ಇಂದಿಗೂ ಬೆಂಗಳೂರು ಜನವಾಸ ಯೋಗ್ಯ ನಗರವಾಗಿ ಮುಂದುವರೆಯುತ್ತಿದೆ ಎಂದು ಹೇಳಿದ ಅವರು, ಯಾವುದೇ ಮಹಾಪುರಷರ ಆಚರಣೆಗಳು ಕಾಟಾಚಾರದ ಆಚರಣೆಗಳಾಗದೆ ಶಿಷ್ಟಾಚಾರದ ಆಚರಣೆಗಳಾಗಬೇಕು ಎಂದು ಹೇಳಿದರು.

ನಂತರ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಆಯೋಜಿಸಲಾಗಿದ್ದ ವಿವಿಧ ರೀತಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಶಾಸಕರು ಬಹುಮಾನ ನೀಡಿ ಪುರಸ್ಕರಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ಅಭಿವೃದ್ಧಿ ಎಂದರೆ ಉಚಿತ ನೀಡಿ ಜನರನ್ನು ಖುಷಿಪಡಿಸುವುದಲ್ಲ. ಬದಲಿಗೆ ಆರ್ಥಿಕ ಶಕ್ತಿ ನೀಡಿ ಜನರು ಅವರ ಕಾಲ ಮೇಲೆ ಅವರು ನಿಲ್ಲುವಂತೆ ಮಾಡುವುದು. ಇಂತಹ ಕಾರ್ಯವನ್ನು ಅಂದಿನ ಕಾಲದಲ್ಲೇ ನಾಡ ಪ್ರಭು ಕೆಂಪೇಗೌಡರು ಮಾಡಿದ್ದರು, ಈಗಲೂ ಕೂಡ ಅಂತಹ ಆಭಿವೃದ್ಧಿ ಮಾದರಿಯನ್ನು ಜನರಿಗೆ ನೀಡಬೇಕಾಗಿದೆ ಎಂದು ಹೇಳಿದರು.

ಬೆಂಗಳೂರಿಗೆ ಸೂಕ್ತವಾದ ಜಲ ಮೂಲ ಇಲ್ಲ ಎಂಬುದನ್ನು ಆರಿತ್ತಿದ್ದ ಕೆಂಪೇಗೌಡರು ಸುಮಾರು 347 ದೊಡ್ಡ ಕೆರೆಗಳು, 1200ಕ್ಕೂ ಹೆಚ್ಚು ಸಣ್ಣ ಕೆರೆ-ಕಟ್ಟೆ ನಿರ್ಮಿಸಿದ್ದರು. ಇದು ಅವರ ಕಾರ್ಯ ಕ್ಷಮತೆಗೆ ದೊಡ್ಡ ಉದಾಹರಣೆಯಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪವಿಭಾಗಾಧಿಕಾರಿ ವಿ.ಆಬಿಷೇಕ್ ಮಾತನಾಡಿ, ಅಂದಿನ ವಿಜಯನಗರ ಅರಸರಿಗೆ ನಿಷ್ಠಾವಂತರಾಗಿ, ಜನರಿಗೆ ದಕ್ಷ ಅಡಳಿತ ನೀಡಿದ ಹೆಗ್ಗಳಿಗೆ ಕೆಂಪೇಗೌಡರದ್ದಾಗಿದೆ ಎಂದರು. ಪ್ರಭಾರಿ ಬಿ.ಇ.ಓ.ತಿಪ್ಪೇಶಪ್ಪ ಮಾತನಾಡಿ, ಕೆಂಪೇಗೌಡರ ಜಯಂತ್ಯುತ್ಸವ ಆಚರಣೆಗಾಗಿ ಸರ್ಕಾರ ಒಂದು ಲಕ್ಷ ಅನುದಾನ ನೀಡಲು ಆದೇಶ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪಟ್ಟರಾಜ ಗೌಡ, ತಾಪಂ ಇಓ ರಾಘವೇಂದ್ರ, ಪುರಸಭೆ ಅಧಿಕಾರಿ ನಿರಂಜನಿ, ಸಿಡಿಪಿಓ ಜ್ಯೋತಿ, ಕೃಷಿ ಅಧಿಕಾರಿ ಪ್ರತಿಮಾ, ತೋಟಗಾರಿಕಾ ಇಲಾಖೆ ಅಧಿಕಾರಿ ರೇಖಾ, ಅರಣ್ಯ ಇಲಾಖೆ ಅಧಿಕಾರಿ ಕಿಶೋರ್ ಸೇರಿ ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು, ಭಾಗವಹಿಸಿದ್ದರು.

ವಿವಿಧ ವೇಷಭೂಷಣ ತೊಟ್ಟ ಶಾಲಾ ಮಕ್ಕಳೊಂದಿಗೆ ಕೆಂಪೇಗೌಡರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು.