ಸಾರಾಂಶ
ನಡಿಪಟ್ಣ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಕಡಲು ಕೊರೆತ ತೀವ್ರಗೊಂಡಿದೆ. ಮೀನುಗಾರ ಕುಟುಂಬಗಳು ಆತಂಕಕ್ಕೀಡಾಗಿದೆ. ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಕನ್ನಡಪ್ರಭ ವಾರ್ತೆ ಪಡುಬಿದ್ರಿ
ಇಲ್ಲಿನ ನಡಿಪಟ್ಣ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಕಡಲುಕೊರೆತ ತೀವ್ರಗೊಂಡಿದೆ. ಇಲ್ಲಿನ ಉಮಾಮಹೇಶ್ವರಿ ಡಿಸ್ಕೋ ಫಂಡಿನ ಕಟ್ಟಡವು ಅಪಾಯಕ್ಕೆ ಸಿಲುಕಿದೆ. ಸುಮಾರು 50ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳು ಜೀವನೋಪಾಯಕ್ಕೆ ಈ ಫಂಡನ್ನು ಅವಲಂಬಿಸಿದ್ದು, ಅವರೀಗ ಆತಂಕಕ್ಕೊಳಗಾಗಿದ್ದಾರೆ.ಈ ಪ್ರದೇಶಕ್ಕೆ ಬುಧವಾರ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಭೇಟಿ ನೀಡಿ ಪರಿಸ್ಥಿಯನ್ನು ಅವಲೋಕಿಸಿದರು ಮತ್ತು ತಾತ್ಕಾಲಿಕ ಪರಿಹಾರವಾಗಿ ಸಮುದ್ರ ತಟಕ್ಕೆ ಕಲ್ಲು ಹಾಕುವ ಬಗ್ಗೆ ಭರವಸೆ ನೀಡಿದರು.
ಅಪಾಯದಂಚಿನಲ್ಲಿರುವ ಮೀನುಗಾರಿಕಾ ಪರಿಕರಗಳ ಶೇಖರಣ ಕೊಠಡಿ ಸಮುದ್ರ ಪಾಲಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿಯವರ ಸೂಚನೆಯಂತೆ ಸುಮಾರು 60 ಲಕ್ಷ ರು.ಗಳ ಬಲೆ ಇತ್ಯಾದಿ ಪರಿಕರಗಳನ್ನು ಸ್ಥಳಾಂತರ ಮಾಡಲಾಯಿತು.ತಾತ್ಕಾಲಿಕವಾಗಿ ಬಂಡೆಕಲ್ಲು ಹಾಕುವ ಕಾರ್ಯ ತಕ್ಷಣ ಪ್ರಾರಂಭಿಸಲಾಗುವುದು, ಅದು ಈ ಕಡಲ ಅಬ್ಬರದ ಮಧ್ಯೆ ಎಷ್ಟು ಪರಿಣಾಮಕಾರಿ ಎಂಬುದು ತಿಳಿಯದು, ಈ ಪ್ರದೇಶಕ್ಕೆ ಯಾರೂ ಬಾರದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಸಂದರ್ಭ ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಕಾಪು ತಹಸೀಲ್ದಾರ್ ಪ್ರತಿಭಾ ಆರ್., ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೋಭಾ ಹಾಗೂ ಸ್ಥಳೀಯ ಮೀನುಗಾರ ಪ್ರಮುಖರು ಉಪಸ್ಥಿತರಿದ್ದರು.