ಕನ್ನಡಪ್ರಭ ವಾರ್ತೆ ಅಂಕೋಲಾ

ಐತಿಹಾಸಿಕ ಹಿನ್ನೆಲೆಯುಳ್ಳ ಕೆ.ಸಿ. ರಸ್ತೆಯ ಶ್ರೀ ನಾಗ, ಚೌಡಿ, ಮಾಸ್ತಿ ಹಾಗೂ ಜಟಕ್ ದೇವರ ಸನ್ನಿಧಿಯಲ್ಲಿ ನಾಗರ ಪಂಚಮಿ ಹಬ್ಬವು ಭಾವೈಕ್ಯತೆಯ ಸಂಗಮವಾಗಿ ವಿಜೃಂಭಣೆಯಿAದ ನಡೆಯಿತು.

ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮಾಜದವರು ಯಾವುದೇ ಭೇದಭಾವವಿಲ್ಲದೆ ಒಂದೆಡೆ ಸೇರಿ ನಾಗಾರಾಧನೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಸಮುದಾಯಗಳ ಭಕ್ತರು ಒಟ್ಟಾಗಿ ಪೂಜೆ ಸಲ್ಲಿಸುವ ಮೂಲಕ ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದರು.

ಶ್ರೀ ಭೂಮ್ತಾಯಿ (ಶಾಂತಾದುರ್ಗಾ) ದೇವಸ್ಥಾನದ ಅರ್ಚಕ ವಾಸುದೇವ ನೀಲಪ್ಪ ಗುನಗ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಾಗರ ಪಂಚಮಿ ಅಂಗವಾಗಿ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಈ ಸಂದರ್ಭ ಭಾಸ್ಕರ ನಾರ್ವೆಕರ, ದೇವಿ ಶಾಂತಾ ನಾಯ್ಕ, ಫ್ರಾನ್ಸಿಸ್ ಫರ್ನಾಂಡಿಸ್, ಮಂಜುನಾಥ ನಾರಾಯಣ ನಾಯ್ಕ, ಪ್ರಮೋದ ನಾಯ್ಕ ಕಂತ್ರಿ, ರಾಘು ಕಾಕರಮಠ, ಇರ್ಫಾನ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.


ಧರ್ಮ, ಜಾತಿ-ಮತಗಳ ಎಲ್ಲೆಗಳನ್ನು ಮೀರಿ ಭಕ್ತಿಯ ಮೂಲಕ ಜನರನ್ನು ಬೆಸೆಯುವ ಇಂತಹ ಆಚರಣೆಗಳು ಸಮಾಜದಲ್ಲಿ ಸೌಹಾರ್ದತೆ ಹಾಗೂ ಸಹಬಾಳ್ವೆಯ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು ಕಂಡು ಬಂದಿದ್ದು ವಿಶೇಷವಾಗಿತ್ತು.ಸಂಭ್ರಮದಿಂದ ನಡೆದ ಶ್ರಾವಣ ಮಾಸದ ಮೊದಲ ಹಬ್ಬ:

ಪುರಾಣ ಪ್ರಸಿದ್ಧ ಕ್ಷೇತ್ರವಾದ ಗೋಕರ್ಣದಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನ ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿನ ನಾಗಬೀದಿಯಲ್ಲಿರುವ ನಾಗೇಶ್ವರ ಮಂದಿರದಲ್ಲಿ ಮುಂಜಾನೆಯಿಂದಲೇ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಕ್ಷೀರಾಭಿಷೇಕ, ಜಲಾಭಿಷೇಕ ಸೇರಿದಂತೆ ವಿವಿಧ ಪೂಜಾ ಸೇವೆ ನೇರವೇರಿಸಿದರು. ದೇವಾಲಯದ ಆವಾರಣ ಸುತ್ತವಿರುವ ನಾಗರಮೂರ್ತಿ, ಅಶ್ವಥಕಟ್ಟೆಯಲ್ಲಿ ನಾಗದೇವತೆಗೆ ಹಾಲೆರದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ನಾಗದೋಷ ಮತ್ತಿತರ ಹರಕೆ ಹೊತ್ತವರು ಪುರೋಹಿತರ ಮುಖೇನ ವಿವಿಧ ಪೂಜೆ ಕೈಗೊಂಡರು.ಮಂದಿರವನ್ನ ವಿದ್ಯುತ್ ದೀಪಾಲಂಕಾರ, ಸಂಜೆ ದೇವರಿಗೆ ಹೂವಿನ ಅಲಂಕಾರ ಮಾಡಿರುವುದು ಭಕ್ತರನ್ನ ಆಕರ್ಷಿಸಿತು. ವಿಶೇಷ ಪೂಜೆ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಮಂದಿರದ ಅರ್ಚಕ ವೇ. ಅನಂತರಾಜ ಜೋಗಭಟ್ಟ ಪೂಜಾ ಕೈಂಕರ್ಯ ನೆರವೇರಿಸಿದರು.ಗಂಗಾವಳಿ, ನಾಡುಮಾಸ್ಕೇರಿ, ಹನೇಹಳ್ಳಿ, ಬಂಕಿಕೊಡ್ಲ, ತದಡಿ, ತೊರ್ಕೆ, ಮಾದನಗೇರಿ, ಬರ್ಗಿ ಭಾಗದಲ್ಲಿನ ನಾಗಮಂದಿರ, ನಾಗಬನದಲ್ಲಿ ಹಾಲೆರೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನೂ ಎಲ್ಲಾ ಮನೆಗಳಲ್ಲಿ ಪ್ರಥಮ ಹಬ್ಬವನ್ನ ಕುಟುಂಬಸ್ಥರು ಒಟ್ಟಾಗಿ ವಿಶೇಷ ಖಾದ್ಯ,ದ ನೈವೇದ್ಯ, ವಿಶೇಷ ಪೂಜೆ ಮನೆಯ ಅಂಗಳ, ತೋಟದಲ್ಲಿರುವ ನಾಗರ ಸಾನಿಧ್ಯದಲ್ಲಿ ಪೂಜೆ ನೆರವೇರಿಸಿದರು.