ಮೇ 4ರಂದು ನಾಗನಗೌಡರ ಸಹಸ್ರ ಚಂದ್ರ ದರ್ಶನ ಅಭಿನಂದನಾ ಸಮಾರಂಭ

| Published : Apr 30 2025, 12:33 AM IST

ಮೇ 4ರಂದು ನಾಗನಗೌಡರ ಸಹಸ್ರ ಚಂದ್ರ ದರ್ಶನ ಅಭಿನಂದನಾ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಮೇ 4ರಂದು ಧುರೀಣ ಎನ್.ಜಿ.ನಾಗನಗೌಡ ಅವರ ಸಹಸ್ರ ಚಂದ್ರದರ್ಶನ, ಅಭಿನಂದನಾ ಸಮಾರಂಭ ಹಾಗೂ ಜನ ಮುಖಿ ಸೇವಾ ಸುಖಿ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಜಿ. ನಾಗನಗೌಡರ ಅಭಿಮಾನಿ ಬಳಗ ಅಧ್ಯಕ್ಷ ಜಿ. ನಂದಿಗೌಡ್ರು ಹೇಳಿದ್ದಾರೆ.

- ಅಭಿಮಾನಿ ಬಳಗ ಅಧ್ಯಕ್ಷ ಜಿ. ನಂದಿಗೌಡ್ರು ಮಾಹಿತಿ । ಜನ ಮುಖಿ ಸೇವಾ ಸುಖಿ ಗ್ರಂಥ ಬಿಡುಗಡೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಮೇ 4ರಂದು ಧುರೀಣ ಎನ್.ಜಿ.ನಾಗನಗೌಡ ಅವರ ಸಹಸ್ರ ಚಂದ್ರದರ್ಶನ, ಅಭಿನಂದನಾ ಸಮಾರಂಭ ಹಾಗೂ ಜನ ಮುಖಿ ಸೇವಾ ಸುಖಿ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಜಿ. ನಾಗನಗೌಡರ ಅಭಿಮಾನಿ ಬಳಗ ಅಧ್ಯಕ್ಷ ಜಿ. ನಂದಿಗೌಡ್ರು ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿರುವ ಮುಖಂಡ ಚಂದ್ರಶೇಖರ್ ಪೂಜಾರ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಹರಿಹರ ತಾಲೂಕಿನ ಧೀಮಂತ ನಾಯಕ, ಸೇವಾ ಧುರೀಣ, ಅಜಾತಶತ್ರು ಎಂದೇ ಖ್ಯಾತಿ ಹೊಂದಿರುವ ಹಿರಿಯ ನಾಯಕ ಎನ್.ಜಿ.ನಾಗನಗೌಡ ಅವರಿಗೆ 83 ವರ್ಷ ತುಂಬಿ, 84ನೇ ವರ್ಷಕ್ಕೆ ಕಾಲಿಡುತ್ತಿರುವ ಸುಸಂದರ್ಭದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮೇ 4ರಂದು ಬೆಳಗ್ಗೆ 10:30 ಗಂಟೆಗೆ ತಾಲೂಕಿನ ಹೊಳೆಸಿರಿಗೇರೆ ಗ್ರಾಮದ ಶ್ರೀ ಕಲ್ಲೇಶ್ವರ ಸಮುದಾಯ ಭವನದಲ್ಲಿ ಅಭಿಮಾನಿ ಬಳಗದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಬಡವರು ದೀನದಲಿತರಿಗೆ ತೊಂದರೆಯಾದಾಗ ತ್ಯಾಗ ಮನೋಭಾವದಿಂದ ಎಲ್ಲರನ್ನೂ ಬೆಳೆಸುವ ಕೆಲಸ ಮಾಡಿರುವ ಧೀಮಂತ ನಾಯಕ ನಾಗನಗೌಡ ಅವರಿಗೆ ಗೌರವ ತೋರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

ಕಾರ್ಯಕ್ರಮಕ್ಕೆ 13 ಸಾವಿರಕ್ಕೂ ಹೆಚ್ಚು ಆಹ್ವಾನ ಪತ್ರಿಕೆಗಳನ್ನು ತಾಲೂಕು ಹಾಗೂ ಜಿಲ್ಲಾದ್ಯಂತ ಹಂಚಿಕೆ ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ. ಊಟದ ವ್ಯವಸ್ಥೆ ಮಾಡಲಾಗಿದೆ. ಬಹಳಷ್ಟು ಜನ ಸೇರುವ ಕಾರಣಕ್ಕಾಗಿ ಕಾರ್ಯಕ್ರಮ ನಡೆಯುವ ಸಮುದಾಯ ಭವನದ ಸುತ್ತಲೂ ಪೆಂಡಾಲ್ ವ್ಯವಸ್ಥೆ, ಎಲ್‍ಇಡಿ ಟಿ.ವಿ.ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಬಳಗದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಪೂಜಾರ್ ಮಾತನಾಡಿ, ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಸಾಗರ ತಾಲೂಕು ವೀರಾಪುರ ಹಿರೇಮಠದ ಡಾ.ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಕನಕ ಗುರುಪೀಠದ ಡಾ. ನಿರಂಜನಾನಂದಪುರಿ ಶ್ರೀ, ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಡಾ.ವಾಲ್ಮೀಕಿ ಪ್ರಸನ್ನಾನಂದ ಶ್ರೀ, ನಂದಿಗುಡಿ, ಶ್ರೀ ವೃಷಭಪುರಿ ಸಂಸ್ಥಾನ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀ, ಸುಕ್ಷೇತ್ರ ಎರೇಹೊಸಹಳ್ಳಿ, ಮಹಾಯೋಗಿ ವೇಮನ ಗುರು ಪೀಠದ ವೇಮನಾನಂದ ಶ್ರೀ, ರಟ್ಟಿಹಳ್ಳಿ, ಕಬ್ಬಿಣ ಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀ, ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಶ್ರೀ, ಹರಿಹರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶಾರದೇಶಾನಂದ ಶ್ರೀ, ಯಲವಟ್ಟಿ ಶ್ರೀಗುರುಸಿದ್ಧಾಶ್ರಮದ ಯೋಗಾನಂದ ಶ್ರೀ, ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಜಿ. ನಂದಿಗೌಡ್ರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೆರವೇರಿಸಲಿದ್ದಾರೆ ಎಂದರು.

ಇದೇ ವೇಳೆ ಎನ್.ಜಿ. ನಾಗನಗೌಡರ ಅಭಿನಂದನಾ ಗ್ರಂಥ "ಜನ ಮುಖಿ ಸೇವಾ ಸುಖಿ " ಕೃತಿಯನ್ನು ಹರಿಹರದ ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಬಿ.ಪಿ. ಹರೀಶ್, ಡಿ.ಜಿ.ಶಾಂತನಗೌಡ, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಎಸ್.ರಾಮಪ್ಪ, ಮಾಡಾಳ್ ವಿರೂಪಾಕ್ಷಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ದಾವಣಗೆರೆಯ ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಮುಂತಾದವರು ಆಗಮಿಸಲಿದ್ದಾರೆ ಎಂದರು.

ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಗ್ರಂಥದ ಕುರಿತು ಮಾತನಾಡುವರು. ಕಾರ್ಯಕ್ರಮದ ಪ್ರಸ್ತಾವನೆಯನ್ನು ಸಂಪಾದಕ ಪ್ರೊ. ಸಿ.ವಿ.ಪಾಟೀಲ್ ಮಾಡಲಿದ್ದಾರೆ. ಅಭಿನಂದನಾ ನುಡಿ ಸಮರ್ಪಣೆಯನ್ನು ಸಂಚಾಲಕ ಎಸ್.ಎಚ್. ಹೂಗಾರ್ ಮಾಡುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರೊ, ಎಚ್.ಎ.ಭಿಕ್ಷಾವರ್ತಿಮಠ, ಪ್ರೊ, ಸಿ.ವಿ. ಪಾಟೀಲ್, ಸಂಚಾಲಕ ಎಸ್.ಎಚ್. ಹೂಗಾರ್, ಪತ್ರಕರ್ತ ಜಿಗಳಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

- - -

-28ಎಚ್‍ಆರ್‍ಆರ್ 02:

ಹರಿಹರದಲ್ಲಿ ಎನ್.ಜಿ. ನಾಗನಗೌಡ ಅವರ ಸಹಸ್ರ ಚಂದ್ರ ದರ್ಶನ, ಅಭಿನಂದನಾ ಸಮಾರಂಭ ಹಾಗೂ ವಿವಿಧ ಕಾರ್ಯಕ್ರಮ ಹಿನ್ನೆಲೆ ಎನ್.ಜಿ. ನಾಗನಗೌಡರ ಅಭಿಮಾನಿ ಬಳಗದ ಅಧ್ಯಕ್ಷ ಜಿ. ನಂದಿಗೌಡ್ರು, ಚಂದ್ರಶೇಖರ್ ಪೂಜಾರ್ ಮಾತನಾಡಿದರು.