ಸಾರಾಂಶ
ಜೆಎಸ್‌ಡಬ್ಲ್ಯೂ ಸಮುದಾಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆಕನ್ನಡಪ್ರಭ ವಾರ್ತೆ ಸಂಡೂರುನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೋ ಶನಿವಾರ ತಾಲೂಕಿನ ತೋರಣಗಲ್ಲಲ್ಲಿರುವ ಓಪಿಜೆ ಕೇಂದ್ರಕ್ಕೆ ಭೇಟಿ ನೀಡಿ, ಜೆಎಸ್‌ಡಬ್ಲ್ಯೂನ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯ ವೀಕ್ಷಿಸಿದರು. ಜೆಎಸ್‌ಡಬ್ಲ್ಯೂನ ಉತ್ತರ ಕರ್ನಾಟಕದ ಅತಿದೊಡ್ಡ ಮಹಿಳಾ ಬಿಪಿಓ, ಜೆಎಸ್‌ಡಬ್ಲ್ಯೂ ಶಕ್ತಿ ಮತ್ತು ಸಖಿ, ಬುಂಕೈ ಹಾಗೂ ಸುರಕ್ಷತಾ ಕೇಂದ್ರ ವೀಕ್ಷಿಸಿ, ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಪಡೆದರು.ಕೇಂದ್ರ ವೀಕ್ಷಣೆಯ ನಂತರ ಮಾತನಾಡಿದ ನಾಗಾಲ್ಯಾಂಡ್ ಮುಖ್ಯಮಂತ್ರಿ, ಜೆಎಸ್‌ಡಬ್ಲ್ಯೂ ಸಂಸ್ಥೆಯು ಉತ್ಪಾದನೆ ಮತ್ತು ವ್ಯವಹಾರದ ಜೊತೆಗೆ ಸುತ್ತಲಿನ ಸಮುದಾಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಸಂಸ್ಕೃತಿ, ಕಲೆ ಮತ್ತು ಪರಂಪರೆಯ ನಾಡಾದ ನಾಗಾಲ್ಯಾಂಡನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸುವುದು, ಲಭ್ಯವಿರುವ ಮಾರ್ಗಗಳನ್ನು ಬಳಸಿಕೊಳ್ಳುವುದು ನಮ್ಮ ಭೇಟಿಯ ಉದ್ದೇಶವಾಗಿದೆ. ಈಗಾಗಲೇ ನಾಗಾಲ್ಯಾಂಡ್ ಸಾಕ್ಷರತೆ, ಲಿಂಗ ಸಮಾನತೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಹಲವು ಸವಾಲುಗಳ ನಡುವೆ ಸಮೃದ್ಧ ನಾಗಾಲ್ಯಾಂಡ್ ರೂಪಿಸುವುದೇ ನಮ್ಮ ಗುರಿಯಾಗಿದೆ. ಇದಕ್ಕೆ ಜೆಎಸ್‌ಡಬ್ಲ್ಯೂ ಬೆಂಬಲ ನೀಡಲಿದೆ ಎಂದು ತಿಳಿಸಿದರು. ಜೆಎಸ್‌ಡಬ್ಲ್ಯೂ ಫೌಂಡೇಶನ್ ಸಿಎಸ್‌ಆರ್ ದಕ್ಷಿಣ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬೀಡಾಲ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಬಿಪಿಓ ಮುಖ್ಯಸ್ಥ ರಾಹುಲ್ ನಾಗಾಲ್ಯಾಂಡ್‌ನಲ್ಲಿ ಜೆಎಸ್‌ಡಬ್ಲ್ಯೂ ವತಿಯಿಂದ ಬಿಪಿಓ ಸ್ಥಾಪನೆ ಮಾಡುವ ಕುರಿತ ನೀಲನಕ್ಷೆ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್, ಸಿಎಸ್‌ಆರ್ ಸಿಬ್ಬಂದಿ, ಬಳ್ಳಾರಿ ಜಿಲ್ಲಾಡಳಿತ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.