ನಾಗಮಂಗಲ ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮನಹಳ್ಳಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಹಕ್ಕು ಹೊಂದಿರುವ 12 ತತ್ತಿನ ಗ್ರಾಮಗಳ ಗ್ರಾಮಸ್ಥರಿಂದ ಶನಿವಾರ ನಡೆದ ವೈಭವದ ಬಿಸಿಲು ಕೊಂಡೋತ್ಸವಕ್ಕೆ ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮನಹಳ್ಳಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಹಕ್ಕು ಹೊಂದಿರುವ 12 ತತ್ತಿನ ಗ್ರಾಮಗಳ ಗ್ರಾಮಸ್ಥರಿಂದ ಶನಿವಾರ ನಡೆದ ವೈಭವದ ಬಿಸಿಲು ಕೊಂಡೋತ್ಸವಕ್ಕೆ ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು.ಚಿಣ್ಯ ಗ್ರಾಮದ ಮೂಲ ದೇವಸ್ಥಾನದಲ್ಲಿ ಸೋಮನಳಮ್ಮದೇವಿಯ ಸರ್ವಾಲಂಕೃತ ಅಶ್ವಾರೋಹಣ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದ ನಂತರ, ಮಂಗಳವಾದ್ಯ, ಪೂಜಾ ಕುಣಿತ, ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಉತ್ಸವ ಮೂರ್ತಿಯನ್ನು ಸೋಮನಹಳ್ಳಿ ಕ್ಷೇತ್ರಕ್ಕೆ ಕರೆತರಲಾಯಿತು.
ಇದೇ ವೇಳೆ ದೇವಾಲಯದ ಹಕ್ಕು ಹೊಂದಿರುವ ವಡ್ಡರಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ, ಜೋಡಿ ಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ, ಕುಪ್ಪಹಳ್ಳಿ, ಕೆಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲ 12 ಗ್ರಾಮಗಳಲ್ಲಿ ದೇವಿಯರ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ತಂಬಿಟ್ಟಿನ ಆರತಿಯೊಂದಿಗೆ ಎಲ್ಲ ದೇವತೆಗಳನ್ನು ಕ್ಷೇತ್ರಕ್ಕೆ ಕರೆತಂದು ದೇವಾಲಯದ ಸುತ್ತ ಪ್ರದಕ್ಷಣೆ ನಡೆಸಿದ ನಂತರ ಸರತಿಯಂತೆ ಆಯಾ ಗ್ರಾಮಗಳ ದೇವಿಯ ಪೂಜೆ ಹೊತ್ತಿದ್ದ ದೇವರ ಗುಡ್ಡಪ್ಪನವರು ಕೊಂಡ ಹಾಯ್ದರು.ಅಲ್ಪಹಳ್ಳಿ ಮತ್ತು ಗಂಗನಹಳ್ಳಿ ಗ್ರಾಮದಿಂದ ಆಗಮಿಸಿದ್ದ ಕುರ್ಜುಬಂಡಿ ಉತ್ಸವವು ನೆರೆದಿದ್ದ ಸಹಸ್ರಾರು ಭಕ್ತರ ಗಮನ ಸೆಳೆಯಿತು. ದೇವಿಗೆ ಹರಕೆ ಹೊತ್ತ ಭಕ್ತರು ಬಾಯಿ ಬೀಗದೊಂದಿಗೆ ಪಾಲ್ಗೊಂಡು ತಮ್ಮ ಹರಕೆ ತೀರಿಸಿಕೊಂಡರು. ಕೊಂಡೋತ್ಸವಕ್ಕೆ ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಂತರ ಕ್ಷೇತ್ರದ ಓಕಳಿ ಮಂಟಪದಲ್ಲಿ ಉತ್ಸವಮೂರ್ತಿ ಮುಂದೆ ನಡೆದ ಅರಿಶಿಣ, ಕುಂಕುಮ ಬೆರೆಸಿದ ಬಣ್ಣದ ನೀರಿನ ಓಕುಳಿಯಾಟ ಮನಮೋಹಕವಾಗಿತ್ತು.
ಮಧ್ಯಾಹ್ನದ ವೇಳೆಯಲ್ಲಿ ನಡೆಯುವ ಸೋಮನಳಮ್ಮದೇವಿಯ ಬಿಸಿಲು ಕೊಂಡೋತ್ಸವವನ್ನು ನೋಡಿ ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯ ಭಕ್ತ ಸಮೂಹವೇ ಸೋಮನಹಳ್ಳಿ ಕ್ಷೇತ್ರಕ್ಕೆ ಹರಿದು ಬಂದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿಯೇ ಒಂದು ಆಂಬ್ಯುಲೆನ್ಸ್ ವಾಹನ ನಿಯೋಜಿಸಲಾಗಿತ್ತು.ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಸೋಂಕು ಹರಡಬಾರದೆಂಬ ಉದ್ದೇಶದಿಂದ ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆರೋಗ್ಯ ಹೊರಕೇಂದ್ರವನ್ನು ತೆರೆಯಲಾಗಿತ್ತು. ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಧ್ವನಿರ್ವರ್ದಕದ ಮೂಲಕ ಪ್ರಚಾರ ನಡೆಸಿದರು.
ಜಾತ್ರಾ ಮಹೋತ್ಸವದ ಪ್ರಯುಕ್ತ ಸುತ್ತಮುತ್ತಲ 12 ಗ್ರಾಮಗಳಿಂದ ಕೊಂಡೋತ್ಸವ ನಡೆದ ಹಿನ್ನಲೆಯಲ್ಲಿ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಬಿ.ರಾಜೇಂದ್ರ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಲಕ್ಷ್ಮಣ ಕಾಮಣ್ಣವರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.ಶುಕ್ರವಾರ ಹೊಣಕೆರೆ ಗ್ರಾಮಸ್ಥರಿಂದ ಬಿಸಿಲುಕೊಂಡೋತ್ಸವ ಅದ್ದೂರಿಯಾಗಿ ಜರುಗಿತ್ತು.ಇಂದು, ನಾಳೆ ಶ್ರೀ ಬಸವೇಶ್ವರ ದೇವಸ್ಥಾನ ವಿಮಾನ ಗೋಪುರ ಪುನರ್ ಪ್ರತಿಷ್ಠಾಪನೆ
ಹಲಗೂರು: ಹುಲ್ಲೇಗಾಲ ಗ್ರಾಮದಲ್ಲಿ ಫೆ.8 ಮತ್ತು 9ರಂದು ಶ್ರೀಬಸವೇಶ್ವರ ದೇವಸ್ಥಾನ ವಿಮಾನ ಗೋಪುರ ಪುನರ್ ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ಧಾರ ಕಾರ್ಯಕ್ರಮ ನಡೆಯಲಿದೆ.ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದ ವಿಮಾನ ಗೋಪುರ ಪುನಸ್ಥಾಪನೆ ಹಾಗೂ ನೂತನ ಜೀರ್ಣೋದ್ಧಾರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಫೆ.8ರ ಸಂಜೆ 6 ಗಂಟೆಗೆ ಪುಣ್ಯಾಹ ಗಣಪತಿ ಪೂಜೆ, ಹೋಮ-ಹವನ, ಅಂಕುರಾರ್ಪಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.
ಫೆ.9ರ ಬೆಳಗ್ಗೆ 6.30ಕ್ಕೆ ಗಂಗೆ ತಡೆಯಿಂದ ಗಂಗೆ ತರುವುದು, ಶ್ರೀಬಸವೇಶ್ವರ ದೇವಸ್ಥಾನ ಗೋಪುರದ ಕಳಸ ಪೂಜೆ, ನವಕ್ರಮ ಹೋಮ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ.ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸಿದ್ಧಾಗಂಗಾ ಮಠ, ತುಮಕೂರುನ ಶ್ರೀಶಿವಸಿದ್ಧಲಿಂಗೇಶ್ವರ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗ ಮಠದ ನಿಶ್ಚಲಾನಂದ ಸ್ವಾಮೀಜಿ, ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಅಂಗರಾಪುರ ಮಠದ ಚನ್ನವೀರಣ್ಯ ಆರೋಗ್ಯ ಸ್ವಾಮೀಜಿ, ಡಿ.ಹಲಸಹಳ್ಳಿ ಗವಿಮಠದ ಷಡಕ್ಷರ ಸ್ವಾಮೀಜಿ, ದಬ್ಬಳ್ಳಿ ಗುರುಮಠದ ಚನ್ನವೀರಣ್ಣಾರಾಧ್ಯ ಸ್ವಾಮೀಜಿ ಹಾಗೂ ಅಗಸನಪುರದ ಚಂದ್ರಶೇಖರ ಆರಾಧ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿವೆ.