ಕೃಷಿ ಸಚಿವರ ತವರೂರು ನಾಗಮಂಗಲ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಸಮಯದಲ್ಲಿ ಕಂಡುಬಂದಿರುವ ಅಕ್ರಮಗಳ ಸರಮಾಲೆ. ತಾಲೂಕು ಕಚೇರಿ ಸಿಬ್ಬಂದಿ ಸೇರಿದಂತೆ ಖಾಸಗಿ ವ್ಯಕ್ತಿಗಳೆಲ್ಲರೂ ಸೇರಿ ಕಂದಾಯ ಇಲಾಖೆಗೆ ಕನ್ನ ಹಾಕಿ ಅಸಲಿ ದಾಖಲೆ ಬುಡಮೇಲು.

- ತಾಲೂಕು ಕಚೇರಿ ೬ ಸಿಬ್ಬಂದಿ ಸೇರಿ ೧೦ ಜನರ ವಿರುದ್ಧ ಎಫ್‌ಐಆರ್

- ಐವರು ಪೊಲೀಸರ ವಶಕ್ಕೆ, ಉಳಿದವರಿಗಾಗಿ ಪೊಲೀಸರಿಂದ ಶೋಧ

- ನಕಲಿ ದಾಖಲೆಗಳ ಸೃಷ್ಟಿ, ಸರ್ಕಾರಿ ದಾಖಲೆಗಳ ತಿದ್ದುಪಡಿ

- ಲೋಕಾಯುಕ್ತ ತನಿಖಾಧಿಕಾರಿಗಳಿಂದ ಸಮಗ್ರ ಪರಿಶೀಲನೆ

- ರೆಕಾರ್ಡ್ ರೂಂನಲ್ಲಿರಬೇಕಾದ ದಾಖಲೆಗಳು ಹೊರಗೆ

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಗುವಳಿ ವಿತರಣಾ ವಹಿಗಳಲ್ಲಿ ತಿದ್ದುಪಡಿ, ಬೇರೆ ಬೇರೆ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ದಾಖಲೆಗಳ ತಿದ್ದುಪಡಿ, ಹೆಚ್ಚುವರಿ ಫಲಾನುಭವಿಗಳ ಹೆಸರುಗಳ ಅಕ್ರಮ ಸೇರ್ಪಡೆ, ಅಕ್ರಮವಾಗಿ ಸರ್ಕಾರಿ ಜಮೀನು ಮಂಜೂರು, ನಾಗಮಂಗಲ ತಾಲೂಕು ಕಚೇರಿಯ ದಾಖಲೆಗಳ ಕೊಠಡಿಗಳಲ್ಲಿರಬೇಕಾದ ಅಸಲು ಹಕ್ಕು ಬದಲಾವಣೆ ರಿಜಿಸ್ಟರ್‌ಗಳು ತಾಲೂಕು ಕಚೇರಿ ಸಿಬ್ಬಂದಿ ಮನೆಯಲ್ಲಿ ಪತ್ತೆ, ನಕಲಿ ಸಾಗುವಳಿ ಚೀಟಿಗಳ ಸೃಷ್ಟಿ, ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳ ನಕಲಿ ಸೀಲ್, ಸಹಿಗಳು, ತಾಲೂಕು ಕಚೇರಿಗೆ ಸಂಬಂಧಿಸಿದ ದಾಖಲೆಗಳು ಮೈಸೂರಿನ ಹೋಟಲ್‌ನ ಕ್ಯಾಶ್‌ಕೌಂಟರ್ ಟೇಬಲ್‌ಗಳ ಮೇಲೆ ಪತ್ತೆ.

- ಇವು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತವರೂರು ನಾಗಮಂಗಲ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಸಮಯದಲ್ಲಿ ಕಂಡುಬಂದಿರುವ ಅಕ್ರಮಗಳ ಸರಮಾಲೆ. ತಾಲೂಕು ಕಚೇರಿ ಸಿಬ್ಬಂದಿ ಸೇರಿದಂತೆ ಖಾಸಗಿ ವ್ಯಕ್ತಿಗಳೆಲ್ಲರೂ ಸೇರಿ ಕಂದಾಯ ಇಲಾಖೆಗೆ ಕನ್ನ ಹಾಕಿ ಅಸಲಿ ದಾಖಲೆಗಳನ್ನು ಬುಡಮೇಲು ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದರ ಕರ್ಮಕಾಂಡ.

ಜ.೧೩ರಂದು ಕೊಡಗು ಜಿಲ್ಲೆ ಡಿವೈಎಸ್ಪಿ ದಿನಕರ್‌ಶೆಟ್ಟಿ, ಮೈಸೂರು ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಶಿಕುಮಾರ್, ಮಂಡ್ಯ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆರ್.ಜಿ.ಲೇಪಾಕ್ಷಮೂರ್ತಿ ಸೇರಿದಂತೆ ಇತರ ಅಧಿಕಾರಿಗಳ ತಂಡ ನಾಗಮಂಗಲ ತಾಲೂಕು ಕಚೇರಿ ಸೇರಿದಂತೆ ಇತರೆ ಕಡೆಗಳಲ್ಲಿ ಸಮಗ್ರ ಪರಿಶೀಲನೆ ನಡೆಸಿ ತಾಲೂಕು ಕಚೇರಿಯಯ ೬ ಮಂದಿ ಸಿಬ್ಬಂದಿ ಸೇರಿ ೧೦ ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳ ಪೈಕಿ ಐವರನ್ನು ನಾಗಮಂಗಲ ಪೊಲೀಸರ ವಶಕ್ಕೆ ನೀಡಿದ್ದಾರೆ.

ಯಾರ ಮೇಲೆ ಎಫ್‌ಐಆರ್?

ನಾಗಮಂಗಲ ತಾಲೂಕು ಕಚೇರಿ ಭೂಮಿ ಮತ್ತು ದರಖಾಸ್ತು ಶಾಖೆಯ ದ್ವಿತೀಯ ದರ್ಜೆ ಸಹಾಯಕ ಎಚ್.ವಿ.ಸತೀಶ್, ಶಿರಸ್ತೇದಾರ್ ರವಿಶಂಕರ್, ಕಾಂತಾಪುರ ವೃತ್ತದ ಗ್ರಾಮ ಸಹಾಯಕ ಎಸ್.ಯೋಗೇಶ್, ರೆಕಾರ್ಡ್‌ರೂಂನ ದ್ವಿತೀಯ ದರ್ಜೆ ಸಹಾಯಕ ಯೋಗೇಶ್, ರೆಕಾರ್ಡ್‌ರೂಂ ಶಿರಸ್ತೇದಾರ್ ಉಮೇಶ್, ರೆಕಾರ್ಡ್‌ರೂಂ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ, ನಾಗಮಂಗಲ ಟಿ.ಬಿ.ಬಡಾವಣೆಯ ಯಶವಂತ್, ಮೈಸೂರಿನ ಪತ್ರ ಬರಹಗಾರ ಚಿನ್ನಸ್ವಾಮಿ, ಹಿಂದಿನ ಭೂಮಿ ಮತ್ತು ದರಖಾಸ್ತು ಶಾಖೆಯ ದ್ವಿತೀಯ ದರ್ಜೆ ಸಹಾಯಕ ವಿಜಯಕುಮಾರ್, ನಾಗಮಂಗಲ ಪಟ್ಟಣದ ಮಹಮದ್ ವಾಸಿಕುಲ್ಲಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪೊಲೀಸರ ವಶಕ್ಕೆ ಯಾರ್‍ಯಾರು?

ನಾಗಮಂಗಲ ತಾಲೂಕು ಕಚೇರಿ ಭೂಮಿ ಮತ್ತು ದರಖಾಸ್ತು ಶಾಖೆಯ ದ್ವಿತೀಯ ದರ್ಜೆ ಸಹಾಯಕ ಎಚ್.ವಿ.ಸತೀಶ್, ಶಿರಸ್ತೇದಾರ್ ರವಿಶಂಕರ್, ಕಾಂತಾಪುರ ವೃತ್ತದ ಗ್ರಾಮ ಸಹಾಯಕ ಎಸ್.ಯೋಗೇಶ್, ರೆಕಾರ್ಡ್‌ರೂಂ ಶಿರಸ್ತೇದಾರ್ ಉಮೇಶ್, ರೆಕಾರ್ಡ್‌ರೂಂ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ ಅವರನ್ನು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕೊಡಗು ಜಿಲ್ಲೆ ಲೋಕಾಯುಕ್ತ ಡಿವೈಎಸ್ಪಿ ದಿನಕರ್‌ಶೆಟ್ಟಿ, ಮೈಸೂರಿನ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಶಶಿಕುಮಾರ್, ಮಂಡ್ಯ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಜಿ.ಲೇಪಾಕ್ಷಮೂರ್ತಿ ಅವರು ದಾಳಿ ನಡೆಸಿ ನಡೆದಿರುವ ಅಕ್ರಮಗಳನ್ನೆಲ್ಲಾ ಪತ್ತೆ ಹಚ್ಚಿ ೧೦ ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ ಐವರನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.ನಡೆದಿರುವ ಅಕ್ರಮಗಳು ಏನೇನು?

ಜ.೧೩ರಂದು ನಾಗಮಂಗಲ ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆಗಿಳಿದರು. ಮೊದಲಿಗೆ ತಾಲೂಕು ಕಚೇರಿಯ ಭೂಮಿ ದರಖಾಸ್ತು ಶಾಖೆ (ಎಲ್‌ಎನ್‌ಡಿ), ರೆಕಾರ್ಡ್‌ರೂಮ್‌ನ್ನು ಶೋಧನೆ ಮಾಡಿದರು. ಆ ವೇಳೆ ಎಲ್‌ಎನ್‌ಡಿ ಶಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ ಎಚ್.ವಿ.ಸತೀಶ್‌ರವರ ಮೊಬೈಲ್‌ಗಳನ್ನು ಪರಿಶೀಲಿಸಿದರು.

ಯಶ್‌ವಂತ್ ಎಂಬುವರ ಮೊಬೈಲ್ (೯೮೮೦೪೫೯೪೦೭)ನಿಂದ ಮೊಬೈಲ್ ವಾಟ್ಯಾಪ್‌ನಲ್ಲಿ ತಾಲೂಕು ಕಚೇರಿಗೆ ಸಲ್ಲಿಸಬೇಕಿದ್ದ ಅರ್ಜಿಯನ್ನು ಕಳುಹಿಸಿರುವುದು ಕಂಡುಬಂದಿತು. ಅಲ್ಲದೇ, ಕಾಂತಾಪುರ ಗ್ರಾಮದ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗೇಶ್‌ರವರ ಮೊಬೈಲ್‌ಗೆ ಸರ್ಕಾರಿ ದಾಖಲಾತಿಗಳನ್ನು ಕಳುಹಿಸಿರುವುದು ಬೆಳಕಿಗೆ ಬಂದಿತು. ಶೋಧನಾ ಕಾಲದಲ್ಲಿ ಸಾಗುವಳಿ ವಿತರಣಾ ವಹಿಗಳಲ್ಲಿ ತಿದ್ದುಪಡಿ ಮಾಡಿರುವುದು ಹಾಗೂ ಬೇರೆ ಬೇರೆ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ದಾಖಲೆಗಳನ್ನು ತಿದ್ದಿರುವುದು ಬಹಿರಂಗಗೊಂಡಿದೆ.

೧೯೭೮-೭೯ನೇ ಸಾಲಿನ ಸಾಗುವಳಿ ವಹಿಯಲ್ಲಿ ನಸೀಮ್ ಕೋಂ.ಪ್ರಕೃಲ್‌ಖಾನ್‌ರವರಿಗೆ ದೇವಲಾಪುರ ಹೋಬಳಿ ಹೆಚ್.ಎನ್.ಕಾವಲು ಗ್ರಾಮದ ಸರ್ವೆ ನಂ.೪೬ರ ಮೈಲಾರ ಪಟ್ಟಣ ಗ್ರಾಮದ ಸರ್ವೆ ನಂ.೪೬ಕ್ಕೆ ಸಂಬಂಧಿಸಿದಂತೆ ನಮೂದು ಮಾಡಿರುವ ಬರವಣಿಗೆಗೂ ರಿಜಿಸ್ಟರ್‌ನಲ್ಲಿ ನಮೂದು ಮಾಡಿರುವ ಬರವಣಿಗೆಗೂ ವ್ಯತ್ಯಾಸವಿರುವುದು ಪತ್ತೆಯಾಗಿದೆ. ನಸೀಮ್ ಕೋಂ. ಪ್ರಕೃಲ್‌ಖಾನ್‌ರವರ ಕುಟುಂಬಕ್ಕೆ ಹಲವಾರು ಬಾರಿ ಜಮೀನುಗಳನ್ನು ಮಂಜೂರು ಮಾಡಲು ಉದ್ದೇಶಪೂರ್ವಕವಾಗಿ ದಾಖಲೆಗಳನ್ನು ತಿದ್ದಿರುವುದು ಕಂಡುಬಂದಿತು.

ಕಲೀಂಮುಲ್ಲಾ ಬಿನ್ ಅಹಮದ್ ಹುಸೇನ್‌ರವರಿಗೂ ಸಹ ಹಲವಾರು ಬಾರಿ ಜಮೀನುಗಳನ್ನು ಮಂಜೂರು ಮಾಡುವ ದುರುದ್ದೇಶದಿಂದ ದಾಖಲೆಗಳನ್ನು ತಿದ್ದಿರುವುದು. ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ವಿತರಣಾ ವಹಿ ಮಧ್ಯದಲ್ಲಿ ಬರೆದು ಅಕ್ರಮವಾಗಿ ಸೇರ್ಪಡೆ ಮಾಡಿರುವುದು. ಅನುಚಿತ ಲಾಭ ಪಡೆದುಕೊಳ್ಳುವ ಸಲುವಾಗಿ ಸರ್ಕಾರಿ ದಾಖಲೆಗಳನ್ನು ತಿದ್ದಿ ಫಲಾನುಭವಿಗಳಿಗೆ ಅಕ್ರಮವಾಗಿ ಸರ್ಕಾರಿ ಜಮೀನು ಮಂಜೂರು ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವುದು ಕಂಡುಬಂದಿತು.ಸಿಬ್ಬಂದಿ ಮನೆಯಲ್ಲಿ ರೆಕಾರ್ಡ್‌ರೂಂ ದಾಖಲೆಗಳು

ಹೊಣಕೆರೆ ವೃತ್ತದ ಗ್ರಾಮ ಸಹಾಯಕ ಕಾಂತಾಪುರ ಗ್ರಾಮದ ಯೋಗೇಶ್‌ರವರ ಮನೆಯನ್ನು ಶೋಧನೆ ಮಾಡಿದಾಗ ನಾಗಮಂಗಲ ಶಾಖೆಯ ಅಭಿಲೇಖಾಲಯದ ದಾಖಲೆಗಳು, ವಿವಿಧ ಸಾರ್ವಜನಿಕರ ಹೆಸರಿನಲ್ಲಿ ಸೃಜಿಸಲಾಗಿರುವ ಚಲನ್‌ಗಳು, ತಿಳುವಳಿಕೆ ನೋಟೀಸ್‌ಗಳು, ಖಾಲಿ ಚೆಕ್‌ಗಳು ಹಾಗೂ ತಾಲೂಕು ಕಚೇರಿಯ ದಾಖಲೆ ರೂಮ್‌ನಲ್ಲಿರಬೇಕಾದ ಅಸಲು ಹಕ್ಕು ಬದಲಾವಣೆಯ ರಿಜಿಸ್ಟರ್‌ಗಳನ್ನು ಯೋಗೇಶ್ ಅವರಿಂದ ವಶಕ್ಕೆ ಪಡೆಯಲಾಯಿತು.

ಈ ವಿಚಾರವಾಗಿ ಯೋಗೇಶ್‌ರವರನ್ನು ವಿಚಾರಣೆ ಮಾಡಿದಾಗ ಭೂಮಿ ಮತ್ತು ದರಖಾಸ್ತು ಶಾಖೆಯ ಪ್ರಥಮ ದರ್ಜೆ ಸಹಾಯಕ ಸತೀಶ್ ಹಾಗೂ ನಾಗಮಂಗಲ ಟಿ.ಬಿ.ಬಡಾವಣೆಯ ಯಶವಂತ್, ಮೈಸೂರಿನ ಪತ್ರ ಬರಹಗಾರ ಚಿನ್ನಸ್ವಾಮಿ ಹಾಗೂ ಹಿಂದೆ ನಾಗಮಂಗಲ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಕುಮಾರ್ ಸೇರಿ ೨೦೨೦ನೇ ಸಾಲಿನಿಂದ ಈವರೆಗಿನ ಅವಧಿಯಲ್ಲಿ ಸರ್ಕಾರಿ ಜಮೀನು ಮತ್ತು ಗೋಮಾಳ ಮಂಜೂರು ಮಾಡಿಸಿಕೊಡುವ ಉದ್ದೇಶದಿಂದ ನಕಲಿ ಸಾಗುವಳಿ ಚೀಟಿಗಳನ್ನು ಸೃಷ್ಟಿಸಿ ತಾಲೂಕು ಕಚೇರಿಯ ಅಭಿಲೇಖಾಲಯದ ದಾಖಲೆಗಳೊಂದಿಗೆ ಸೇರಿಸುತ್ತಿದ್ದುದಾಗಿ ತಿಳಿಸಿದ್ದಾರೆ. ಅಲ್ಲದೆ, ಭೂಮಿ ಮತ್ತು ದರಖಾಸ್ತು ಶಾಖೆಯ ಸತೀಶ್, ಅಭಿಲೇಖಾಲಯದ ದ್ವಿತೀಯ ದರ್ಜೆ ಸಹಾಯಕ ಯೋಗೇಶ್ ಸೇರಿ ಖಾಲಿ ಫಾರಂಗಳನ್ನು ಭರ್ತಿ ಮಾಡಿ ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳ ನಕಲಿ ಸೀಲ್ ಮತ್ತು ನಕಲಿ ಸಹಿ ಮಾಡಿ ಮತ್ತೆ ಅಭಿಲೇಖಾಲಯಕ್ಕೆ ದಾಖಲೆಗಳೊಂದಿಗೆ ಸೇರಿಸುತ್ತಿದ್ದುದಾಗಿ ತಿಳಿಸಿದ್ದಾರೆ. ಮೈಸೂರಿನ ಹೋಟೆಲ್‌ನಲ್ಲಿ ತಾಲೂಕು ಕಚೇರಿ ದಾಖಲೆಗಳು

ಮೈಸೂರು ನಗರದ ಅಗ್ರಹಾರದಲ್ಲಿರುವ ಹೋಟೆಲ್ ರಾಜರತ್ನದಲ್ಲಿ ಶೋಧನೆ ನಡೆಸಿದಾಗ ಹೋಟೆಲ್ ಕ್ಯಾಶ್‌ಕೌಂಟರ್‌ನ ಟೇಬಲ್‌ನಲ್ಲಿ ನಾಗಮಂಗಲ ತಾಲೂಕು ಕಚೇರಿಗೆ ಸಂಬಂಧಿಸಿದ ದಾಖಲೆಗಳು, ಸರ್ಕಾರಿ ಜಮೀನು ಮಂಜೂರಾತಿಗೆ ಸಂಬಂಧಿಸಿದ ಖಾಲಿ ನಮೂನೆಗಳು, ಬ್ರಹ್ಮದೇವರಹಳ್ಳಿ ವೃತ್ತ, ಬ್ಯಾಡರಹಳ್ಳಿ ಗ್ರಾಮಲೆಕ್ಕಾಧಿಕಾರಿ, ಕಸಬಾ, ಹೊಣಕೆರೆ, ದೇವಲಾಪುರ ಹೋಬಳಿಗಳ ರಾಜಸ್ವ ನಿರೀಕ್ಷಕರು, ತಹಸೀಲ್ದಾರ್ ನಾಗಮಂಗಲ ಎಂದು ಕಪ್ಪು ಬಣ್ಣದ ಪೆನ್‌ನಿಂದ ರಬ್ಬರ್‌ಸೀಲ್ ಮಾಡಿಸುವ ಸಲುವಾಗಿ ಬರೆದಿರುವ ಹಾಳೆ ದೊರಕಿದೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಿದ್ದಾರೆ.ಸರ್ಕಾರಕ್ಕೆ 200 ಕೋಟಿ ರು. ಆರ್ಥಿಕ ನಷ್ಟ

ಕನ್ನಡಪ್ರಭ ವಾರ್ತೆ ಮಂಡ್ಯ

ಭೂಮಿ ಮತ್ತು ದರಕಾಸ್ತು ಶಾಖೆ ಹಾಗೂ ರೆಕಾರ್ಡ್‌ ರೂಂನಲ್ಲಿದ್ದ ಸಾರ್ವಜನಿಕ ದಾಖಲೆಗಳನ್ನು ತಿದ್ದಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಆರೋಪಿಗಳು ಸರ್ಕಾರಕ್ಕೆ ಅಂದಾಜು 200 ಕೋಟಿ ರು. ಆರ್ಥಿಕ ನಷ್ಟ ಉಂಟುಮಾಡಿರುವುದು ಕಂಡುಬಂದಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕೃತ್ಯವು ಭಾರತೀಯ ನಾಗರೀಕ ಸಂಹಿತೆ ಕಲಂ 61(2), 38 (4), 335, 336 (3), 340(2), 303(2), 316(5)ಡಿಯಲ್ಲಿ ಬರುವುದರಿಂದ ನಾಗಮಂಗಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸರ್ಕಾರಿ ಜಮೀನಿನ ದಾಖಲೆಗಳನ್ನು ಅಕ್ರಮ ಲಾಭಕ್ಕಾಗಿ ಸೃಷ್ಟಿಸಿರುವುದು, ತಿದ್ದುಪಡಿ ಮಾಡಿರುವುದು ಪ್ರಾಧಿಕಾರದ ಪ್ರಜ್ಞೆಯನ್ನೇ ಆಘಾತಗೊಳಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಗರ್‌ಹುಕುಂ ಸಮಿತಿಯಲ್ಲಿ ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕೆ ಗರಿಷ್ಠ 4 ಎಕರೆ 38 ಗುಂಟೆ ಜಮೀನು ಸಕ್ರಮ ಮಾಡಲು ಅವಕಾಶವಿದೆ. ಆದರೆ, ನಸೀಮ್‌ ಕೋಂ.ಪ್ರಕೃಲ್‌ಖಾನ್‌ ಹೆಸರಿಗೆ ಒಟ್ಟು 9 ಎಕರೆ 27 ಗುಂಟೆ, ಕಲೀಂಮುಲ್ಲಾ ಹೆಸರಿಗೆ ಒಟ್ಟು 11 ಎಕರೆ 23 ಗುಂಟೆ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿರುವುದನ್ನು ಗುರುತಿಸಲಾಗಿದೆ.

ನಾಗಮಂಗಲ ತಾಲೂಕು ಕಚೇರಿ ಕಡತಗಳು ಸರ್ಕಾರಿ ಅಧಿಕಾರಿಗಳ ಮನೆ, ಸರ್ಕಾರಿ ವಸತಿಗೃಹ, ಜೆರಾಕ್ಸ್‌ ಅಂಗಡಿ, ಇತರೆ ಖಾಸಗಿ ಅಂಗಡಿಗಳು, ಹೋಟೆಲ್‌ಗಳಲ್ಲಿ ಪತ್ತೆಯಾಗಿರುವುದು ತಾಲೂಕು ಆಡಳಿತದ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ.

ನಾಗಮಂಗಲ ತಾಲೂಕು ಭೂಮಿ ದರಖಾಸ್ತು ಶಾಖೆ ಮತ್ತು ರೆಕಾರ್ಡ್‌ ರೂಂನಲ್ಲಿ ನಾಗಮಂಗಲ ತಾಲೂಕಿನ ಗ್ರಾಮಗಳಾದ ಎಚ್‌.ಎನ್‌.ಕಾವಲು, ಚಿಕ್ಕಜಟಕ, ದೊಡ್ಡಜಟಕ, ಕರಡಹಳ್ಳಿ ಇನ್ನಿತರೆ ಗ್ರಾಮಗಳಲ್ಲಿನ ಸರ್ಕಾರಿ ಭೂಮಿಯ ದರಖಾಸ್ತು ಮಂಜೂರಾತಿ ದಾಖಲಾತಿಗಳಾದ ಸಾಗುವಳಿ ಚೀಟಿ, ವಿತರಣಾ ವಹಿ, ಅಧಿಕೃತ ಜ್ಞಾಪನ, ಕಿಮ್ಮತ್ತು ಮತ್ತು ನೋಟಿಸ್‌ ಇತ್ಯಾದಿ ದಾಖಲೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಕಲಿಯಾಗಿ ಸೃಷ್ಟಿಸಿಕೊಂಡು, ದಾಖಲೆಗಳನ್ನು ತಿದ್ದಿ ಅಕ್ರಮವಾಗಿ ಸರ್ಕಾರಿ ಭೂಮಿ ಮಂಜೂರು ಮಾಡಿರುವ ಬಗ್ಗೆ ಸಾರ್ವಜನಿಕರಿಂದ ಉಪಲೋಕಾಯುಕ್ತ ಬಿ.ಶಿವಪ್ಪ ಅವರಿಗೆ ಬಂದ ದೂರುಗಳನ್ನು ಆಧರಿಸಿ ಶೋಧನೆ ನಡೆಸಲಾಯಿತು.