ನಾಟಕೋತ್ಸವ ನಡೆಯುವ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಗಾನಕೋಗಿಲೆ ಎಸ್.ಜಾನಕಿ ಪ್ರವೇಶದ್ವಾರ ನಿರ್ಮಿಸಲಾಗಿದೆ. ಕಾಲೇಜು ಕಟ್ಟಡ ಮತ್ತು ಆವರಣವು ಕನ್ನಡದ ಬಾವುಟ ಬಂಟಿಂಗ್ಸ್‌ಗಳು ರಾರಾಜಿಸುತ್ತಿದ್ದು, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ 18ನೇ ವರ್ಷದ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವಕ್ಕೆ ಭಾನುವಾರ ಸಂಜೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಖ್ಯಾತ ರಂಗಕರ್ಮಿ ಮತ್ತು ಸಾಂಸ್ಕೃತಿಕ ಚಿಂತಕ ದಿ.ಚಿದಂಬರರಾವ್ ಜಂಬೆ ಅವರ ನೆನಪಿನ ವೇದಿಕೆಯಲ್ಲಿ ಖ್ಯಾತ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ನಾಡೋಜ ಡಾ.ಹಂ.ಪ.ನಾಗರಾಜಯ್ಯ ಅವರಿಗೆ ನುಡಿಗೌರವ ಹಾಗೂ ಚಿತ್ರನಟ, ನಿರ್ದೇಶಕ ಪ್ರಶಾಂತ ಹಿರೇಮಠ ಅವರಿಗೆ ರಂಗಗೌರವ ಸಲ್ಲಿಸಲಾಯಿತು.

ಕನ್ನಡ ಸಂಘದ ಅಧ್ಯಕ್ಷ ಎನ್.ಟಿ.ಅಶೋಕ್ ನಾಟಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಲನಚಿತ್ರ ನಟ ರಾಮಕೃಷ್ಣ ಅತಿಥಿಯಾಗಿ ಪಾಲ್ಗೊಂಡಿದ್ದರು. ಪಟ್ಟಣದ ಮಾದರಿ ಉನ್ನತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಚ್ಚೇವು ಕನ್ನಡದ ದೀಪ ಹಾಡಿಗೆ ಸ್ವಾಗತ ನೃತ್ಯ ಪ್ರದರ್ಶಿಸಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ನಾ.ಸು.ನಾಗೇಶ ವಿರಚಿತ ನಿತ್ಯದ ಆಟಕೆ ಸಜ್ಜಾಗಿದೆ ಧರೆ ಎಂಬ ಕವನ ಸಂಕಲನ ಲೋಕಾರ್ಪಣೆಗೊಳಿಸಲಾಯಿತು. ನಂತರ ಮೈಸೂರಿನ ಶಿವತಂಡ ಪ್ರಸ್ತುತಿ ಪಡಿಸುವ ಪ್ರಶಾಂತ್ ಹಿರೇಮಠ ನಿರ್ದೇಶನದ ಅಮೃತಬಳ್ಳಿ ಕಷಾಯ ಎಂಬ ನಾಟಕ ಪ್ರದರ್ಶನಗೊಂಡಿತು.

ಕಂಗೊಳಿಸುತ್ತಿರುವ ಕಾಲೇಜು ಕಟ್ಟಡ:

ನಾಟಕೋತ್ಸವ ನಡೆಯುವ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಗಾನಕೋಗಿಲೆ ಎಸ್.ಜಾನಕಿ ಪ್ರವೇಶದ್ವಾರ ನಿರ್ಮಿಸಲಾಗಿದೆ. ಕಾಲೇಜು ಕಟ್ಟಡ ಮತ್ತು ಆವರಣವು ಕನ್ನಡದ ಬಾವುಟ ಬಂಟಿಂಗ್ಸ್‌ಗಳು ರಾರಾಜಿಸುತ್ತಿದ್ದು, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಸಿದ್ಧ ಉಡುಪುಗಳು, ಅಲಂಕಾರಿಕಾ ವಸ್ತುಗಳು, ಉತ್ತರ ಕರ್ನಾಟಕ ಶೈಲಿಯ ತಿಂಡಿ ತಿನಿಸು, ಪುಸ್ತಕ ಮಳಿಗೆ, ಆಹಾರ ಮಳಿಗೆ ಸೇರಿದಂತೆ ೨೦ಕ್ಕೂ ಹೆಚ್ಚು ವಿವಿಧ ಬಗೆಯ ಅಂಗಡಿ ಮಳಿಗೆಗಳು ಕಾಲೇಜು ಮುಂಭಾಗದಲ್ಲಿ ತೆರೆದುಕೊಂಡು ನಾಟಕೋತ್ಸವಕ್ಕೆ ಮೆರಗು ನೀಡುತ್ತಿವೆ. ಒಟ್ಟಾರೆ ನಾಗಮಂಗಲ ಪಟ್ಟಣದಲ್ಲಿ ಒಂದು ವಾರಕಾಲ ನಾಟಕಗಳ ಜಾತ್ರೆಯ ಸಂಭ್ರಮ ಮನೆಮಾಡಿದೆ.

ಇಂದು ಎತ್ತ ಹಾರಿದ ಹಂಸ ನಾಟಕ ಪ್ರದರ್ಶನ:

ನ.23ರ ಸೋಮವಾರ ಸಂಜೆ 6.15ಕ್ಕೆ ಬೆಂಗಳೂರಿನ ಸಮಾಜಮುಖಿ ರಂಗಬಳಗ ಪ್ರಸ್ತುತಿಯ ಮಂಜುನಾಥ್ ಎಲ್.ಬಡಿಗೇರ್ ನಿರ್ದೇಶನದ ಎತ್ತ ಹಾರಿದ ಹಂಸ ನಾಟಕ ಪ್ರದರ್ಶನಗೊಳ್ಳಲಿದೆ.