ನಾಗಮಂಗಲ: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ತಟ್ಟಹಳ್ಳಿ ನರಸಿಂಹಮೂರ್ತಿ ಆಯ್ಕೆ

| Published : Jun 27 2024, 01:07 AM IST

ನಾಗಮಂಗಲ: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ತಟ್ಟಹಳ್ಳಿ ನರಸಿಂಹಮೂರ್ತಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಥೆ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚು ಮಾಡುವ ಜೊತೆಗೆ, ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಮತ್ತು ಹಿರಿಯ ಸಹಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಬ್ಯಾಂಕ್‌ನ ಅಭಿವೃದ್ಧಿಗೆ ಪೂರಕವಾಗಿ ಕ್ರಮವಹಿಸಲಾಗುವುದು. ಈ ಸಂಸ್ಥೆಯ ಅಧ್ಯಕ್ಷನನ್ನಾಗಿ ಮಾಡಿರುವ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರಿಗೆ ಅಭಿನಂದನೆ.

ಕನ್ನಡಪ್ರಭವಾರ್ತೆ ನಾಗಮಂಗಲ

ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ)ಬ್ಯಾಂಕ್‌ನ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿತ ತಟ್ಟಹಳ್ಳಿ ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಎ.ಆರ್.ಸತೀಶ್‌ಚಂದ್ರ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದು ತಟ್ಟಹಳ್ಳಿ ನರಸಿಂಹಮೂರ್ತಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿ ಉಳಿದ ಅವಧಿಗೆ ನೂತನ ಅಧ್ಯಕ್ಷರಾಗಿ ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಭರತ್‌ಕುಮಾರ್ ಪ್ರಕಟಿಸಿದರು.

ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿರುವ ತಾಲೂಕಿನ ರೈತರಿಗೆ ಪಿಎಲ್‌ಡಿ ಬ್ಯಾಂಕ್ ಮೂಲಕ ಸಿಗಬಹುದಾದ ಸರ್ಕಾರದ ವಿವಿಧ ಬಗೆಯ ಸಾಲ ಸವಲತ್ತು ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಸಂಸ್ಥೆ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚು ಮಾಡುವ ಜೊತೆಗೆ, ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಮತ್ತು ಹಿರಿಯ ಸಹಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಬ್ಯಾಂಕ್‌ನ ಅಭಿವೃದ್ಧಿಗೆ ಪೂರಕವಾಗಿ ಕ್ರಮವಹಿಸಲಾಗುವುದು. ಈ ಸಂಸ್ಥೆಯ ಅಧ್ಯಕ್ಷನನ್ನಾಗಿ ಮಾಡಿರುವ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ಅವಿರೋಧ ಆಯ್ಕೆಯಾಗುತ್ತಿದ್ದಂತೆ ಬ್ಯಾಂಕ್‌ನ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ಎಸ್‌ಎಲ್‌ಬಿ ನಿರ್ದೇಶಕ ತಿಮ್ಮರಾಯಿಗೌಡ, ಬ್ಯಾಂಕ್‌ನ ಉಪಾಧ್ಯಕ್ಷ ಬಿ.ಕೆ.ರಘುಸ್ವಾಮಿ, ನಿರ್ದೇಶಕರಾದ ಎ.ಆರ್.ಸತೀಶ್‌ಚಂದ್ರ, ಸಿ.ಕೆ.ಮಂಜುನಾಥ, ಎಂ.ಎ.ತಮ್ಮಣ್ಣಗೌಡ, ಎಸ್.ಎನ್.ಲಕ್ಷ್ಮೀನಾರಾಯಣ, ಸಿ.ಎ.ನಾರಾಯಣಪ್ಪ, ಎಸ್.ಟಿ.ಗಿರೀಶ್, ನಿಂಗೇಗೌಡ, ವಸಂತಮ್ಮ, ಜಯಮ್ಮ, ಶಿವರಾಮು, ಕೆ.ಕೃಷ್ಣೇಗೌಡ, ಕುಮಾರ್, ಪ್ರಭಾರ ವ್ಯವಸ್ಥಾಪಕ ಸೀತಾರಾಮು, ಹಿರಿಯ ಕ್ಷೇತ್ರಾಧಿಕಾರಿ ಡಿ.ಬಿ.ಪರಶಿವ, ಟಿಎಪಿಸಿಎಂಎಸ್ ಅಧ್ಯಕ್ಷ ಹಾಲ್ತಿ ಗಿರಿಶ್, ಮಾಜಿ ಅಧ್ಯಕ್ಷ ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಕಾಂಗ್ರೆಸ್ ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಆರ್.ಕೃಷ್ಣೇಗೌಡ, ಹನುಮಂತು, ಚೇತನ್‌ಕುಮಾರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಬೋಗಾದಿ ಗ್ರಾಪಂ ಅಧ್ಯಕ್ಷರಾಗಿ ಬಿ.ಸುಮಲತಾ ಆಯ್ಕೆ

ನಾಗಮಂಗಲ ತಾಲೂಕಿನ ಬೋಗಾದಿ ಗ್ರಾಪಂ ಅಧ್ಯಕ್ಷರಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿತ ಸದಸ್ಯೆ ಕಳ್ಳಿಗುಂದಿ ಗ್ರಾಮದ ಬಿ.ಸುಮಲತಾ ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾದರು.17 ಮಂದಿ ಸದಸ್ಯ ಬಲ ಹೊಂದಿರುವ ಗ್ರಾಪಂನ ಹಿಂದಿನ ಅಧ್ಯಕ್ಷೆ ಜಿ.ಎಸ್.ಶೃತಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದು ಬಿ.ಸುಮಲತಾ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ ತಾಪಂ ಇಒ ಚಂದ್ರಮೌಳಿ ಘೋಷಿಸಿದರು.ಅವಿರೋಧ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಗ್ರಾಪಂ ಮುಂಭಾಗ ಮತ್ತು ಮಾಗಡಿ ಜಲಸೂರು ರಾಜ್ಯಹೆದ್ದಾರಿಯ ಬೋಗಾದಿ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ಸಚಿವ ಎನ್.ಚಲುವರಾಯಸ್ವಾಮಿ ಪರ ಜಯಘೋಷ ಮೊಳಗಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣಗೌಡ, ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮಿ, ಸದಸ್ಯರಾದ ಕೆ.ಪಿ.ಹರೀಶ್, ತಿಮ್ಮೇಗೌಡ, ವರಲಕ್ಷ್ಮಮ್ಮ, ಎಸ್.ಎಸ್.ತಿಲಕ್‌ಕುಮಾರ್, ಜಯಮ್ಮ, ಸಂಪತ್ತು, ಪಿಡಿಓ ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.