ಮನೆ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಮನೆಗಳಲ್ಲಿ ಬಗೆ ಬಗೆಯ ಪುಷ್ಪ ಸಹಿತ ಒಡವೆಗಳಿಂದ ಮಹಾಲಕ್ಷ್ಮಿ ಭಾವಚಿತ್ರಗಳನ್ನು ಅಲಂಕರಿಸಲಾಗಿತ್ತು. ಲಕ್ಷ್ಮಿಗೆ ಪ್ರಿಯವಾದ ವಿವಿಧ ಬಗೆಯ ಹಣ್ಣು ಹೂವು ಅರ್ಪಿಸಿ ದೀಪ ಬೆಳಗಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾ ವಾರ್ತೆ ನಾಗಮಂಗಲ
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಶುಕ್ರವಾರ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಮಹಿಳೆಯರು ವರಮಹಾಲಕ್ಷ್ಮಿ ವ್ರತಾಚರಣೆಗೆ ಚಾಲನೆ ನೀಡಿದರು. ಲಕ್ಷ್ಮಿ ಮುಖವಾಡವಿಟ್ಟು ಕಳಸ ಪ್ರತಿಷ್ಠಾಪನೆ ಮಾಡಿ ಸೀರೆ ತೊಡಿಸಿ ಚಿನ್ನಾಭರಣ ಧರಿಸಿ ಸರ್ವಾಲಂಕೃತ ವರಮಹಾಲಕ್ಷ್ಮಿಗೆ ವಿವಿಧ ಬಗೆಯ ಹಣ್ಣು, ಖರ್ಜೂರ, ದ್ರಾಕ್ಷಿ, ಗೋಡಂಬಿ ಬಾದಾಮಿ, ಕಲ್ಲುಸಕ್ಕರೆ, ಬಗೆ ಬಗೆಯ ತಿಂಡಿ ತಿನಿಸುಗಳನ್ನಿಟ್ಟು ನೈವೇದ್ಯ ಸಮರ್ಪಣೆ ಮಾಡಿದರು.
ಮನೆ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಮನೆಗಳಲ್ಲಿ ಬಗೆ ಬಗೆಯ ಪುಷ್ಪ ಸಹಿತ ಒಡವೆಗಳಿಂದ ಮಹಾಲಕ್ಷ್ಮಿ ಭಾವಚಿತ್ರಗಳನ್ನು ಅಲಂಕರಿಸಲಾಗಿತ್ತು. ಲಕ್ಷ್ಮಿಗೆ ಪ್ರಿಯವಾದ ವಿವಿಧ ಬಗೆಯ ಹಣ್ಣು ಹೂವು ಅರ್ಪಿಸಿ ದೀಪ ಬೆಳಗಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ತಯಾರಿಸಿದ್ದ ಭೋಜನವಿಟ್ಟು ನೈವೇದ್ಯ ಅರ್ಪಿಸಿ ಲಕ್ಷ್ಮಿದೇವಿಗೆ ಕರ್ಪೂರದಾರತಿ ಬೆಳಗಿ ಭಕ್ತಿ ಭಾವ ಮೆರೆದರು.ಸಂಪ್ರದಾಯದಂತೆ ಮುತ್ತೈದೆಯರನ್ನು ಮನೆಗೆ ಕರೆದು ಅರಿಶಿನ ಕುಂಕುಮ ಎಲೆ ಅಡಿಕೆ ಹೂವು ಹಣ್ಣು ಕೊಟ್ಟು ಉಡಿ ತುಂಬಲಾಯಿತು. ಹಲವೆಡೆ ಮಹಿಳೆಯರು ಪರಸ್ಪರ ತಮ್ಮ ಮನೆಗೆ ಮುತ್ತೈದೆಯರನ್ನು ಅರಿಶಿನ ಕುಂಕುಮಕ್ಕೆ ಆಹ್ವಾನಿಸಿ ಮನೆಗೆ ಬಂದ ಅತಿಥಿಗಳಿಗೆ ಆದರದ ಆತಿಥ್ಯ ನೀಡಿದರು.
ಹೂವು ಹಣ್ಣು ಇನ್ನಿತರೆ ಪೂಜಾ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದರೂ ಕೂಡ ಜನರು ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಸಂಪತ್ತು ಕರುಣಿಸಲೆಂದು ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದರು. ಪಟ್ಟಣ ಸೇರಿದಂತೆ ತಾಲೂಕಿನ ದೇವಲಾಪುರ, ಹೊಣಕೆರೆ, ಬಿಂಡಿಗನವಿಲೆ ಹಾಗೂ ಬೆಳ್ಳೂರು ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಮಹಿಳೆಯರು ವರಮಹಾಲಕ್ಷ್ಮಿ ಪೂಜಾ ಕಾರ್ಯದಲ್ಲಿ ಮಿಂದೆದ್ದರು.ಲಕ್ಷ್ಮಿ ದೇಗುಲಗಳಲ್ಲಿ ವಿಶೇಷ ಪೂಜೆ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಕ್ತಿದೇವತೆಗಳೂ ಸೇರಿದಂತೆ ನಗರ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶುಕ್ರವಾರ ಬೆಳಗಿನ ಜಾವವೇ ದೇವರಿಗೆ ಅಭಿಷೇಕ ಮಾಡಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.