ಕನ್ನಡಪ್ರಭ ವಾರ್ತೆ ಮೈಸೂರು

ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಮನಸ್ಸು ಮತ್ತು ದೇಹದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಜಯಲಕ್ಷ್ಮೀಪುರಂ ಪೊಲೀಸ್‌ ಠಾಣೆ ಎಸ್‌ಐ ರೂಪೇಶ್‌ ಹೇಳಿದರು.

ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆ ಸಹಯೋಗದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು - ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಾದಕ ವಸ್ತುಗಳೆಂದರೆ ಧೂಮಪಾನ, ಅಫೀಮು, ತಂಬಾಕು, ಮದ್ಯಪಾನ, ಗುಟ್ಕಾ, ಗಾಂಜಾ, ಪಾನ್‌ ಪರಾಗ್ ಮತ್ತು ಅತಿಯಾದ ಔಷಧಿಗಳ ಸೇವನೆ ಅಪಾಯಕಾರಿ. ಬಹುತೇಕ ಯುವ ಜನಾಂಗ ಮದ್ಯಸೇವಿಸಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿ ಮರಣ ಹೊಂದುತ್ತಿರುವ ಸಾಕಷ್ಟು ನಿದರ್ಶನಗಳಿವೆ. ಇದರಿಂದಾಗಿ ಜೀವನಕ್ಕೆ ಆಧಾರವಾದ ತಮ್ಮ ಮಕ್ಕಳನ್ನು ಕಳೆದುಕೊಂಡು ತಂದೆ- ತಾಯಿಗಳು ಬದುಕುವಂತಾಗಿದೆ ಎಂದರು.

ದೇಶದ ಪ್ರಜ್ಞಾವಂತ ನಾಗರಿಕರಾಗಬೇಕಿದ್ದ ಯುವ ಜನಾಂಗ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳದೇ, ಜೀವ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದರೆ ಆತಂಕ ಉಂಟಾಗುತ್ತದೆ. ಯುವಕರು ಶಿಸ್ತು, ಸಂಯಮ, ರಸ್ತೆಯ ಸುರಕ್ಷತಾ ಕ್ರಮ ಅನುಸರಿಸುವುದು ಸೂಕ್ತ ಎಂದು ಕಿವಿಮಾತು ಹೇಳಿದರು.


ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಪರಿಶ್ರಮದಿಂದ ಕೂಡಿದ ಅಧ್ಯಯನದಿಂದ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆ ಹೊಂದಬಹುದು. ಆದ್ದರಿಂದ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು ಎಂದು ಮನವರಿಕೆ ಮಾಡಿಕೊಟ್ಟರು.

ಮುಖ್ಯಪೇದೆ ಶ್ರೀನಿವಾಸ್‌ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಕ್ರೀಡೆ ಹಾಗೂ ಅಂಗಸಾಧನೆಗಳ ಮೂಲಕ ಸದೃಢವಾದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೊಂದಬೇಕು. ಏಕೆಂದರೆ, ಇಂದಿನ ವೈದ್ಯಕೀಯ ವ್ಯವಸ್ಥೆ ವಾಣಿಜ್ಜೀಕರಣ ಹೊಂದಿರುವ ಹಿನ್ನೆಲೆಯಲ್ಲಿ ಸಮಾಜದಲ್ಲಿರುವ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಅತ್ಯಾವಶ್ಯಕ ಎಂದರು.

ಕಾಲೇಜಿನ ಪ್ರಾಶುಪಾಲೆ ಡಾ.ಬಿ.ಆರ್. ಜಯಕುಮಾರಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳೆ ನಿಮ್ಮ ಬದುಕಿಗೆ ನೀವೇ ಜವಾಬ್ದಾರರು. ನಿಮ್ಮ ಸಂತೋಷ ನಿಮ್ಮ ಕೈಯಲ್ಲಿದೆ ಇದನ್ನು ಕಾಪಾಡಿಕೊಳ್ಳಬೇಕೆಂದರೆ ನಿಮ್ಮ ಸುತ್ತಮುತ್ತಲಿರುವ ಇಂತಹ ದುಶ್ಚಟಗಳಿಂದ ದೂರವಿರಬೇಕಾದುದು ನಿಮ್ಮ ಆದ್ಯ ಕರ್ತವ್ಯ ಎಂದರು.

ಪೊಲೀಸ್ ಸಿಬ್ಬಂದಿ ಸುಮಾ, ಅಮೃತಾ, ದೇವರಾಜು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಸಹ ಪ್ರಾಧ್ಯಾಪಕಿ ಡಾ. ವಿನೋದಮ್ಮ, ಸಹಾಯಕ ಪ್ರಾಧ್ಯಾಪಕರಾದ ನಾಗೇಶ್, ಜೆ. ಮನೋಜ್‌ ಕುಮಾರ್ ಮತ್ತು ವಿದ್ಯಾರ್ಥಿಗಳು ಇದ್ದರು. ನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸಿದರು.

ಎಂ.ಸಿ. ಚೇತನ್ ಪ್ರಾರ್ಥಿಸಿದರು. ಡಾ.ಎಚ್.ಆರ್. ತಿಮ್ಮೇಗೌಡ ಸ್ವಾಗತಿಸಿ ನಿರ್ವಹಿಸಿದರು.