ನಾಗರ, ಭೀಮನ ಅಮಾವಾಸ್ಯೆ ಮತ್ತು ಶ್ರಾವಣ ಮಾಸ ಆರಂಭದ ಅಮಾವಾಸ್ಯೆ ನಿಮಿತ್ತ ಇಲ್ಲಿನ ಹೆಸರಾಂತ ಕೊಟ್ಟೂರು ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆಯಲು ನಾಡಿನೆಲ್ಲೆಡೆಯಿಂದ ಸಾವಿರಾರು ಭಕ್ತರು ಪಟ್ಟಣಕ್ಕೆ ಆಗಮಿಸಿದರು.
ಕೊಟ್ಟೂರು: ನಾಗರ, ಭೀಮನ ಅಮಾವಾಸ್ಯೆ ಮತ್ತು ಶ್ರಾವಣ ಮಾಸ ಆರಂಭದ ಅಮಾವಾಸ್ಯೆ ನಿಮಿತ್ತ ಇಲ್ಲಿನ ಹೆಸರಾಂತ ಕೊಟ್ಟೂರು ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆಯಲು ನಾಡಿನೆಲ್ಲೆಡೆಯಿಂದ ಸಾವಿರಾರು ಭಕ್ತರು ಪಟ್ಟಣಕ್ಕೆ ಆಗಮಿಸಿದರು.
ಸ್ವಾಮಿಯ ದರ್ಶನ ಪಡೆಯಲು ಬೆಳಗ್ಗೆ 5.30ರಿಂದಲೇ ಭಕ್ತರ ಆಗಮನ ನಿರಂತರವಾಗಿತ್ತು. ಇಲ್ಲಿನ ಹಿರೇಮಠದ ಮುಂದೆ ಮಧ್ಯಾಹ್ನ 3 ಗಂಟೆ ವರೆಗೂ ಉದ್ದನೆಯ ಸಾಲಿತ್ತು. ಪ್ರತಿಯೊಬ್ಬರು ಶ್ರೀ ಸ್ವಾಮಿಗೆ ನಮಿಸಿ ಭಕ್ತಿ ಸಮರ್ಪಿಸಿದರು. ಶ್ರೀ ಸ್ವಾಮಿಯ ಇತರ ಮಠಗಳಾದ ಗಚ್ಚಿನ ಮಠ, ತೊಟ್ಟಿಲು ಮಠ, ಮರ‍್ಕಲ್ ಮಠ ಮತ್ತು ಮರಿಕೊಟ್ಟೂರೇಶ್ವರ ದೇವಸ್ಥಾನಗಳಿಗೆ ತೆರಳಿ ಶ್ರೀ ಸ್ವಾಮಿಯ ಮೂರ್ತಿಗೆ ನಮಿಸಿದರು.9 ಸಾವಿರ ಹೋಳಿಗೆ ವಿತರಣೆ
ಆಗಮಿಸಿದ ಭಕ್ತರಿಗಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಶ್ರೀಗುರು ಕೊಟ್ಟೂರೇಶ್ವರ ಪಾದಯಾತ್ರೆ ಸಮಿತಿಯವರು 9 ಸಾವಿರ ಹೋಳಿಗೆಗಳನ್ನು ತಯಾರಿಸಿ ಉಣಬಡಿಸುವ ಸೇವೆ ಸಲ್ಲಿಸಿದರು. ಈ ಪರಿಯ ಹೋಳಿಗೆಗಳನ್ನು ಮಾಡಲೆಂದೇ ಶಿಗ್ಲಿ ಗ್ರಾಮದಿಂದ ಅಧಿಕ ಸಂಖ್ಯೆಯ ಮಹಿಳೆಯರು ಮತ್ತು ಅಡುಗೆ ಸಿಬ್ಬಂದಿ ಮಂಗಳವಾರ ಆಗಮಿಸಿ ಹಿರೇಮಠದ ದೇವಸ್ಥಾನದ ಮುಂಭಾಗದ ಆವರಣದಲ್ಲಿ ರಾತ್ರಿ ಇಡೀ ಹೊಳಿಗೆಗಳನ್ನು ಸಿದ್ಧಪಡಿಸಿದರು. ಭೀಮನ ಅಮಾವಾಸ್ಯೆಯಿಂದಾಗಿ ಪಟ್ಟಣದ ದೇವಸ್ಥಾನಗಳು, ರಸ್ತೆಗಳು ಮತ್ತಿತರ ಪ್ರದೇಶಗಳಲ್ಲಿ ಜನದಟ್ಟಣೆ ಕಂಡು ಬಂತು.