ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ನಾಗರಪಂಚಮಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಬೆಳಿಗ್ಗೆಯೇ ಮಹಿಳೆಯರು, ಪುರುಷರು, ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬ ಸಮೇತರಾಗಿ ಹುತ್ತಗಳು ಹಾಗೂ ನಾಗರ ಕಲ್ಲುಗಳು ಇರುವ ಸ್ಥಳಗಳಿಗೆ ತೆರಳಿ ಹೂವುಗಳಿಂದ ಅಲಂಕಾರ ಮಾಡಿ ಹುತ್ತಕ್ಕೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಗರಪಂಚಮಿಯನ್ನು ಆಚರಿಸಿ ಭಕ್ತಿ ಸಮರ್ಪಿಸಿದರು.ನಗರದ ಕೋಡಿಬಸವಣ್ಣ ದೇವಾಲಯದ ಹಿಂಭಾಗದಲ್ಲಿರುವ ಅಮಾನಿಕೆರೆ ಏರಿ ಮೇಲಿನ ಹುತ್ತಗಳು, ನಾಗರಕಲ್ಲುಗಳಿಗೆ, ಬಾರ್‌ಲೈನ್ ರಸ್ತೆಯಲ್ಲಿರುವ ನಾಗರಕಲ್ಲುಗಳು ಸೇರಿದಂತೆ ವಿವಿಧ ಬಡಾವಣೆಗಳ ದೇವಾಲಯಗಳ ಬಳಿ ಇರುವ ಹುತ್ತಗಳು ಹಾಗೂ ನಾಗರಕಲ್ಲುಗಳಿಗೆ ಭಕ್ತಾದಿಗಳು ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ಹಾಲು ಮತ್ತು ತನಿಯೆರೆದು ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲೂ ಸಹ ಭಕ್ತರು ಬೆಳಿಗ್ಗೆಯೇ ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ಶ್ರದ್ಧಾಭಕ್ತಿಯಿಂದ ಹುತ್ತಗಳಿಗೆ ಪೂಜೆ ಸಲ್ಲಿಸಿ ನಾಗ ದೋಷಗಳಿಂದ ಮುಕ್ತರನ್ನಾಗಿ ಮಾಡುವಂತೆ ಭಕ್ತಾದಿಗಳು ಪ್ರಾರ್ಥಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಾಗಾರಾಧನೆ ಭಾರತದ ಸಂಸ್ಕೃತಿಯ ಭಾಗವಾಗಿದ್ದು, ನಾಗರ ಪಂಚಮಿಯು ನಾಗದೇವರ ಅಸ್ತಿತ್ವವನ್ನು ಸ್ಮರಿಸುವ ಸಲುವಾಗಿ ಆಚರಿಸಲಾಗುವ ಭಾರತದಲ್ಲಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಈ ಹಬ್ಬವನ್ನು ಶ್ರಾವಣ ಮಾಸದ ಚಂದ್ರನ-ಹದಿನೈದು ದಿನಗಳ ಐದನೇ ದಿನದಂದು ಆಚರಿಸಲಾಗುತ್ತದೆ. ಶ್ರಾವಣಮಾಸದಲ್ಲಿ ಬರುವ ಈ ಹಬ್ಬವನ್ನು ನಗರ ಪ್ರದೇಶ, ಗ್ರಾಮೀಣ ಪ್ರದೇಶಗಳಲ್ಲೂ ಸಹ ಜನರು ನಾಗರಕಲ್ಲುಗಳಿಗೆ, ಹುತ್ತಗಳಿಗೆ ವಿಶೇಷ ಪೂಜೆಯೊಂದಿಗೆ ಭಕ್ತಿಭಾವದಿಂದ ಆಚರಿಸುವುದು ವಿಶೇಷವಾಗಿದೆ.