ಎಂ. ಪ್ರಹ್ಲಾದ್ ಕನಕಗಿರಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೈತನ ಮಗ 625ಕ್ಕೆ 621 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ.ಯಲಬುರ್ಗಾ ತಾಲೂಕಿನ ಕಲಕಬಂಡಿ ಗ್ರಾಮದ ನಿವಾಸಿ ಶಿವಶಂಕರಗೌಡ ಮಾಲಿಪಾಟೀಲ್ ಪುತ್ರ ನಾಗರಾಜ ಮಾಲಿ ಪಾಟೀಲ್ ಕನಕಗಿರಿಯ ಹಿಂದುಳಿದ ವರ್ಗಗಳ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದ. ಈ ವಿದ್ಯಾರ್ಥಿಯು ಜಿಲ್ಲೆಯ ಟಾಪರ್ ಪಟ್ಟಿಯಲ್ಲಿ 2ನೇ ಸ್ಥಾನ ತನ್ನದಾಗಿಸಿಕೊಂಡಿದ್ದಾನೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಈ ಶಾಲೆಯು ನಾನಾ ಸೌಲಭ್ಯಗಳಿಂದ ವಂಚಿತವಾಗಿದೆ. ಆದರೆ ನಾಗರಾಜ ಯಾವುದಕ್ಕೂ ನೆಪ ಹುಡುಕದೇ ಸತತ ಅಧ್ಯಯನ ಕೈಗೊಂಡಿದ್ದಾನೆ.
ಕನ್ನಡ, ಸಮಾಜ ವಿಜ್ಞಾನ, ಹಿಂದಿ ಹಾಗೂ ಗಣಿತ ವಿಷಯದಲ್ಲಿ ನೂರರಷ್ಟು ಅಂಕ ಗಳಿಸಿದ್ದು, ಇನ್ನುಳಿದ ಇಂಗ್ಲಿಷ್ 99 ಮತ್ತು ವಿಜ್ಞಾನ ವಿಷಯಕ್ಕೆ 97 ಅಂಕ ಪಡೆದಿದ್ದಾನೆ. 625 ಅಂಕಗಳ ಪೈಕಿ 621 ಅಂಕ ಪಡೆದಿದ್ದು, 99.36ರಷ್ಟು ಫಲಿತಾಂಶ ಬಂದಿದೆ.ಕೈ ಹಿಡಿದ ಕನ್ನಡಪ್ರಭ: ರಜೆ ದಿನ ಹೊರತುಪಡಿಸಿ ಉಳಿದೆಲ್ಲ ದಿನವೂ ಕನ್ನಡಪ್ರಭ ಯುವ ಆವೃತ್ತಿಯು ಈ ಶಾಲೆಯ ವಿದ್ಯಾರ್ಥಿಗಳ ಕೈ ಹಿಡಿದಿದೆ. ಪ್ರತಿನಿತ್ಯವೂ ಶಾಲೆಯ ಗೇಟಿನ ಬಳಿಗೆ ಪತ್ರಿಕೆ ಹೋಗುತ್ತಿದ್ದಂತೆ 10ನೇ ತರಗತಿ ವಿದ್ಯಾರ್ಥಿಗಳು ಸಾಲಿ ಸಾಲಾಗಿ ಬಂದು ಯುವ ಆವೃತ್ತಿಯಲ್ಲಿ ಪ್ರಕಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೋತ್ತರ ಗಮನಿಸುತ್ತಿದ್ದರು. ಹೀಗೆ ಪರೀಕ್ಷಾ ದಿನಗಳು ಸಮೀಪಿಸುತ್ತಿದ್ದಂತೆ ಪಠ್ಯದ ಜತೆಗೆ ಪತ್ರಿಕೆ ಓದಿರುವ ಮಕ್ಕಳು ಜಿಲ್ಲೆಗೆ ಮಾದರಿಯಾಗುವ ಫಲಿತಾಂಶ ಪಡೆಯಲು ಸಾಧ್ಯವಾಗಿದೆ.
ಬೆಳಗಿನ ಜಾವ 4 ಗಂಟೆಯಿಂದ ರಾತ್ರಿ 12ರ ವರೆಗೆ ಓದುತ್ತಿದ್ದೆ. ಪ್ರಾಂಶುಪಾಲರು, ಶಿಕ್ಷಕರು ಮಾಡುವ ಪಾಠಗಳತ್ತ ಹೆಚ್ಚು ಗಮನ ನೀಡುತ್ತಿದ್ದೆ. ಜತೆಗೆ ಕನ್ನಡಪ್ರಭ ಯುವ ಆವೃತ್ತಿಯಲ್ಲಿ ಪ್ರಕಟಗೊಳ್ಳುವ ವಿಷಯವಾರು ಪ್ರಶ್ನೋತ್ತರಗಳು ನನ್ನ ಈ ಸಾಧನೆಗೆ ಮೆಟ್ಟಿಲಾಗಿವೆ ಎಂದು ವಿದ್ಯಾರ್ಥಿ ನಾಗರಾಜ ಹೇಳಿದ್ದಾರೆ.
ಶಿಕ್ಷಕರು ವಿಷಯವಾರು ಸರಿಯಾಗಿ ಪಾಠ ಬೋಧನೆ ಮಾಡಿದ್ದರಿಂದ ನಮ್ಮ ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ ಬರಲು ಕಾರಣವಾಗಿದೆ. ಮಕ್ಕಳು ಪಠ್ಯದ ಜತೆಗೆ ಪತ್ರಿಕೆ ಓದುತ್ತಿದ್ದರು. ನಮ್ಮದೇ ಶಾಲೆಯ ವಿದ್ಯಾರ್ಥಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುವುದು ಖುಷಿ ತಂದಿದೆ ಎಂದು ಪ್ರಾಂಶುಪಾಲ ಸಿದ್ದಲಿಂಗಪ್ಪ ದೇವಣ್ಣವರ್ ತಿಳಿಸಿದ್ದಾರೆ.