ಮೈಷುಗರ್ ಕಾರ್ಖಾನೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ನಾಗರಾಜಪ್ಪ ನಡೆಸಿರುವ ನೂರಾರು ಕೋಟಿ ರು. ಅವ್ಯವಹಾರ ಪ್ರಕರಣದಲ್ಲಿ ಚರ-ಸ್ಥಿರಾಸ್ತಿ ಜಪ್ತಿಗೆ ಲೋಕಾಯುಕ್ತ ಆದೇಶಕ್ಕೆ ನೀಡುತ್ತು. ಈ ಪ್ರಕರಣದ ವಜಾ ಕೋರಿ ನಾಗರಾಜಪ್ಪ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋಟ್‌ ಲೋಕಾಯುಕ್ತರ ಆದೇಶ ಸರಿ ಇದೆ ಎಂದು ಅರ್ಜಿ ವಜಾ ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್‌ನಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಾಗರಾಜಪ್ಪನವರ ಆಸ್ತಿ ಜಪ್ತಿಗೆ ಹೈಕೋರ್ಟ್‌ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಕ್ರಮ ವಹಿಸಬೇಕು ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಮನವಿ ಮಾಡಿದರು.

ಮೈಷುಗರ್ ಕಾರ್ಖಾನೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ನಾಗರಾಜಪ್ಪ ನಡೆಸಿರುವ ನೂರಾರು ಕೋಟಿ ರು. ಅವ್ಯವಹಾರ ಪ್ರಕರಣದಲ್ಲಿ ಚರ-ಸ್ಥಿರಾಸ್ತಿ ಜಪ್ತಿಗೆ ಲೋಕಾಯುಕ್ತ ಆದೇಶಕ್ಕೆ ನೀಡುತ್ತು. ಈ ಪ್ರಕರಣದ ವಜಾ ಕೋರಿ ನಾಗರಾಜಪ್ಪ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋಟ್‌ ಲೋಕಾಯುಕ್ತರ ಆದೇಶ ಸರಿ ಇದೆ ಎಂದು ಅರ್ಜಿ ವಜಾ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾಗರಾಜಪ್ಪ ಮೇಲಿನ ಅವ್ಯವಹಾರದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಉಂಟಾಗಿರುವ ನಷ್ಟವನ್ನು ಮರುಪಾವತಿಸಿಕೊಳ್ಳುವಂತೆ ಸೂಚಿಸಿದೆ. ಅದರಂತೆ ೧೨೭ ಕೋಟಿ ರು. ವಸೂಲಿಗೆ ಉಪ ಲೋಕಾಯುಕ್ತರಾಗಿದ್ದ ಬಿ.ಎಸ್.ಪಾಟೀಲ್ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದರಿಂದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಆಸ್ತಿ ಜಪ್ತಿ ಸಂಬಂಧ ತುರ್ತು ಕ್ರಮ ವಹಿಸುವಂತೆ ಮನವಿ ಮಾಡಿದರು.

ನಾಗರಾಜಪ್ಪರ ಆಸ್ತಿಯನ್ನು ವಶಕ್ಕೆ ಪಡೆಯುವ ಅಧಿಕಾರ ಮೈಷುಗರ್ ಕಾರ್ಖಾನೆ ಆಡಳಿತ ಮಂಡಳಿಗೆ ಇಲ್ಲ. ಅದು ಸರ್ಕಾರದಿಂದಲೇ ನಡೆಸಬೇಕಿರುವ ಪ್ರಕ್ರಿಯೆ ಆಗಿರುವುದರಿಂದ ತ್ವರಿತ ಕ್ರಮ ವಹಿಸಿ ಕಾರ್ಖಾನೆಗೆ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು. ಇದರಿಂದ ಕಾರ್ಖಾನೆಗೂ ಆರ್ಥಿಕವಾಗಿ ಬಲ ಬರಲಿದೆ ಎಂದರು.

೨೦೦೮ರ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಿ ನಾಗರಾಜಪ್ಪ ಮೈಷುಗರ್ ಕಾರ್ಖಾನೆ ಅಧ್ಯಕ್ಷರಾಗಿದ್ದರು. ನಾಗರಾಜಪ್ಪ ಯಡಿಯೂರಪ್ಪ ಅವರ ಸಂಬಂಧಿ ಹಾಗೂ ಪರಮಾಪ್ತರಾಗಿದ್ದರು. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಾಗರಾಜಪ್ಪ ಅವರು ಹೊಸ ಮಿಲ್ ಖರೀದಿ, ಡಿಸ್ಟಿಲರಿ ಮಾರಾಟ-ಸೋರಿಕೆ, ಮೈ ರಮ್, ಮೈ ವಿಸ್ಕಿ, ಸಕ್ಕರೆ ಮಾರಾಟದಲ್ಲಿ ಭಾರೀ ಅಕ್ರಮ, ಭ್ರಷ್ಟಾಚಾರ ಎಸಗಿದ್ದಾರೆ. ನಾಗರಾಜಪ್ಪ ಮೈಷುಗರ್ ಅಧ್ಯಕ್ಷರಾಗಿದ್ದ ವೇಳೆ ಕಾರ್ಖಾನೆಗೆ ೧೨೭ ಕೋಟಿ ರು. ನಷ್ಟವಾಗಿತ್ತು ಎಂಬ ಆರೋಪ ಕೇಳಿಬಂದಿತ್ತು ಎಂದರು.

ಪ್ರಕರಣ ಸಂಬಂಧ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ ನೇತೃತ್ವದ ಸರ್ಕಾರ ಲೋಕಾಯುಕ್ತ ತನಿಖೆಗೆ ವಹಿಸಿತ್ತು. ಲೋಕಾಯುಕ್ತ ತನಿಖೆ ವೇಳೆ ಅಕ್ರಮ, ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಗರಾಜಪ್ಪರಿಂದ ನಷ್ಟದ ಹಣ ವಸೂಲಿ ಮಾಡಿ, ಸಿವಿಲ್ ಪ್ರಕರಣ ದಾಖಲಿಸಲು ಲೋಕಾಯುಕ್ತ ನ್ಯಾಯಾಲಯ ಆದೇಶಿಸಿತ್ತು. ಲೋಕಾಯುಕ್ತ ನ್ಯಾಯಾಧೀಶರ ಆದೇಶ ಪಾಲಿಸಲು ಈ ಹಿಂದಿನ ಸರ್ಕಾರಗಳು ಹಿಂದೇಟು ಹಾಕಿದ್ದವು. ಆನಂತರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪ್ರಕರಣ ದಾಖಲಿಸಿತ್ತು. ಆಪಾಧಿತ ಅಧ್ಯಕ್ಷ ನಾಗರಾಜಪ್ಪ ಮತ್ತು ಕುಟುಂಬದ ಆಸ್ತಿ ವಿವರದ ಪಟ್ಟಿ ಸಲ್ಲಿಸುವಂತೆ ಜನವರಿ ೨೦೨೪ರಲ್ಲಿ ಜಿಲ್ಲಾಧಿಕಾರಿಗೆ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಪತ್ರ ಬರೆದಿದ್ದರು ಎಂದರು.

ಉಚ್ಛ ನ್ಯಾಯಾಲಯದಿಂದ ನಾಗರಾಜಪ್ಪ ತಂದಿದ್ದ ತಡೆಯಾಜ್ಞೆ ತೆರವಾಗಿದೆ ಮತ್ತು ಅರ್ಜಿ ವಜಾಗೊಂಡಿರುವುದರಿಂದ ತತ್‌ಕ್ಷಣವೇ ಸರ್ಕಾರ ಕ್ರಮ ವಹಿಸಿ ಅವರ ಚರ-ಚಿರಾಸ್ತಿ ವಶಕ್ಕೆ ಪಡೆಯುವಂತೆ ಕಂದಾಯ ಇಲಾಖೆ ಮೂಲಕ ಜಿಲ್ಲಾಧಿಕಾರಿಗೆ ಸೂಚನೆ ನೀಡುವಂತೆ ಕೋರಿದರು.

ಗೋಷ್ಠಿಯಲ್ಲಿ ಚಂದಗಾಲು ವಿಜಯಕುಮಾರ್, ಸಿ.ಎಂ.ದ್ಯಾವಪ್ಪ, ವೀಣಾ, ರಾಮಕೃಷ್ಣ ಇತರರಿದ್ದರು.

೭.೪೩ ಮೆಟ್ರಿಕ್ ಟನ್ ನಷ್ಟ:

ಮೈಷುಗರ್‌ನಲ್ಲಿ ಮೊಲಾಸಸ್ ಸಂಗ್ರಹ ಟ್ಯಾಂಕ್‌ನಿಂದ ೭.೪೩ ಮೆಟ್ರಿಕ್ ಟನ್ ಸೋರಿಕೆಯಾಗಿರುವುದಾಗಿ ಅಬಕಾರಿ ನಿರೀಕ್ಷಕರು ವರದಿಯಲ್ಲಿ ತಿಳಿಸಿದ್ದಾರೆ. ನ.೧೮ರಂದು ಕಾರ್ಖಾನೆಗೆ ಭೇಟಿ ನೀಡಿದ್ದ ಅಧಿಕಾರಿ-ಸಿಬ್ಬಂದಿ ಎಲ್ಲಾ ಟ್ಯಾಂಕ್‌ಗಳಲ್ಲಿರುವ ಭೌತಿಕ ಕಾಕಂಬಿ ದಾಸ್ತಾನನ್ನು ಪರಿಶೀಲಿಸಲಾಗಿ ಟ್ಯಾಂಕ್ ಸಂಖ್ಯೆ ೬ರಲ್ಲಿ ೧೧೨೨ ಮೆ.ಟನ್, ಟ್ಯಾಂಕ್-೭ರಲ್ಲಿ ೨೫೨.೫೦ ಮೆಟ್ರಿಕ್ ಟನ್, ಟ್ಯಾಂಕ್-೮ರಲ್ಲಿ ೩೨೯ ಮೆ.ಟನ್, ಟ್ಯಾಂಕ್-೯ರಲ್ಲಿ ೬೦೦ ಮೆಟ್ರಿಕ್ ಟನ್ ಸೇರಿ ೨೨೯೪ ಮೆಟ್ರಿಕ್ ಟನ್ ದಾಸ್ತಾನಿತ್ತು. ಇದರಲ್ಲಿ ಡೆಡ್ ಸ್ಟೋರೇಜ್ ಮತ್ತು ಫೋಮ್ ಸರಾಸರಿ ೫೨.೭೭ ಮೆಟ್ರಿಕ್ ಟನ್ ಇದ್ದು ಅದನ್ನು ಹೊರತುಪಡಿಸಿ ೨೨೪೯.೧೬ ಮೆಟ್ರಿಕ್ ಟನ್ ಮೊಲಾಸಸ್ ದಾಸ್ತಾನಿದೆ. ಈ ಅಂಕಿ-ಅಂಶ ಪ್ರಕಾರ ೭.೪೩ ಮೆಟ್ರಿಕ್ ಟನ್ ಮೊಲಾಸಸ್ ಸೋರಿಕೆಯಾಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ ಎಂದರು.

ನ್ಯಾಯಾಲಯದಲ್ಲಿ ಮೊಕದ್ದಮೆ ಎಚ್ಚರಿಕೆ:

ಮೈಷುಗರ್ ಕಾರ್ಖಾನೆ ಆಸ್ತಿಯಲ್ಲಿ ಅನುಭವದಲ್ಲಿರುವವರು ತಾವು ಅನುಭವದಲ್ಲಿ ಮುಂದುವರೆಯುವುದಕ್ಕೆ ಹಿಂಬಾಕಿ ಪಾವತಿಸಬೇಕು. ಇಲ್ಲದಿದ್ದರೆ ತೆರವುಗೊಳಿಸಬೇಕು. ಅಕ್ರಮವಾಗಿ ಮುಂದುವರೆದರೆ ನ್ಯಾಯಾಲಯದಲ್ಲಿ ರಿಕವರಿ ಸೂಟ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಾರ್ಖಾನೆ ಆಸ್ತಿಯ ೪ ಎಕರೆ ಪ್ರದೇಶ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಅನುಭವದಲ್ಲಿರುವವರು ಗ್ರಾಪಂ ಮಾರುಕಟ್ಟೆ ದರದನ್ವಯ ವಾರ್ಷಿಕ ಶುಲ್ಕ ನಿಗದಿಪಡಿಸಲಾಗುವುದು. ಅದರಂತೆ ಪಾವತಿಸಿದರೆ ಮುಂದುವರೆಯಬಹುದು ಎಂದು ಸ್ಪಷ್ಟಪಡಿಸಿದರು.