ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಕ್ತಿ, ಸಡಗರದ ನಾಗರಪಂಚಮಿ

| Published : Aug 10 2024, 01:44 AM IST

ಸಾರಾಂಶ

ಈ ಬಾರಿ ನಾಗರಪಂಚಮಿಯ ಸಂಭ್ರಮ ಹೆಚ್ಚಿಸಲೆಂಬಂತೆ ಮಳೆಯೂ ಬಿಡುವು ನೀಡಿ ಉತ್ತಮ ಬಿಸಿಲಿನ ವಾತಾವರಣ ಇತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶುಕ್ರವಾರ ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯ ನಾಗಬನ, ನಾಗ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜನತೆ ಭಕ್ತಿಪೂರ್ವಕವಾಗಿ ನಾಗ ದೇವರಿಗೆ ಪ್ರಾರ್ಥನೆ ಅರ್ಪಿಸಿದರು.

ಜಿಲ್ಲೆಯ ಪ್ರಮುಖ ನಾಗ ದೇವಾಲಯಗಳಲ್ಲಿ ಭಾರೀ ಜನಸಂದಣಿ ಕಂಡುಬಂತು. ರಾಜ್ಯದ ಪ್ರಮುಖ ನಾಗಾರಾಧನೆಯ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಂಜಾನೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಾತ್ರವಲ್ಲದೆ, ಮಂಗಳೂರಿನ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಪುನೀತರಾದರು.

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಾಗಕ್ಷೇತ್ರ, ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ನಾಗನಕಟ್ಟೆ, ಚಾರ್ವಾಕ ಕಪಿಲೇಶ್ವರ ದೇವಾಲಯ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ- ಮಹಾವಿಷ್ಣು ದೇವಸ್ಥಾನ, ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥೇಶ್ವರ ಸನ್ನಿಧಿ, ಪಾಂಡೇಶ್ವರ ಮಹಾಲಿಂಗೇಶ್ವರ, ಕಾರ್‌ಸ್ಟ್ರೀಟ್‌ ವೆಂಕಟರಮಣ ದೇವಸ್ಥಾನದ ನಾಗನಕಟ್ಟೆ, ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಎಲ್ಲೆಡೆಯೂ ನಾಗರ ಪಂಚಮಿಯ ಭಕ್ತಿಯ ಸಡಗರ.

ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿಯ ಮಂಜೇಶ್ವರ ಅನಂತೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾತಃ ಕಾಲ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ವಾಸುಕೀ ಪೂಜೆ, ದೇವಳದ ಮುಂಭಾಗದಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ಶ್ರೀ ನಾಗದೇವರ ಶಿಲಾ ಪ್ರತಿಮೆಗಳಿಗೆ ಪಂಚಾಮೃತ, ಕ್ಷೀರಾಭಿಷೇಕ, ಸೀಯಾಳಾಭಿಷೇಕ ನಡೆಯಿತು.

ದೇವಾಲಯಗಳಲ್ಲದೆ, ಜಿಲ್ಲಾದ್ಯಂತ ಊರೂರುಗಳಲ್ಲೂ ಇರುವ ನಾಗಬನಗಳಲ್ಲಿ ಜನರು ಕುಟುಂಬ ಸಮೇತ ತೆರಳಿ ದೇವರಿಗೆ ಎಳನೀರು ಮತ್ತು ಹಾಲಿನ ಅಭಿಷೇಕಗೈದು ಪುನೀತರಾದರು. ಹಿಂಗಾರ, ಕೇದಗೆ ಹೂಗಳನ್ನು ಸಮರ್ಪಿಸಿದರು.

ಈ ಬಾರಿ ನಾಗರಪಂಚಮಿಯ ಸಂಭ್ರಮ ಹೆಚ್ಚಿಸಲೆಂಬಂತೆ ಮಳೆಯೂ ಬಿಡುವು ನೀಡಿ ಉತ್ತಮ ಬಿಸಿಲಿನ ವಾತಾವರಣ ಇತ್ತು.

ಕುಡುಪು ಕ್ಷೇತ್ರದಲ್ಲಿ 12 ಸಾವಿರ ತಂಬಿಲ ಸೇವೆ

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧಾನೆ ಕ್ಷೇತ್ರಗಳಲ್ಲಿ ಒಂದಾದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆಗೆ ಸಹಸ್ರಾರು ಮಂದಿ ಸಾಕ್ಷಿಯಾದರು. ಮುಂಜಾನೆ 4 ಗಂಟೆಯಿಂದಲೇ ಸರತಿ ಸಾಲಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಶ್ರೀ ಅನಂತಪದ್ಮನಾಭ ದೇವರಿಗೆ ಉಷಾ ಕಾಲದ ಪೂಜೆಯೊಂದಿಗೆ ವಿಶೇಷ ಪಂಚಾಮೃತ ಅಭಿಷೇಕ, ನವಕ ಪ್ರಧಾನ ಕಲಶಾಭಿಷೇಕ, ಸಹಸ್ರನಾಮ ಅರ್ಚನೆ, ಅಷ್ಟೋತ್ತರ ಅರ್ಚನೆ, ವಿವಿಧ ಅರ್ಚನೆಗಳ ಸೇವೆಯನ್ನು ಅರ್ಪಿಸಿ ವಿಶೇಷವಾದ ಹರಿವಾಣ ನೈವೇದ್ಯ ಅರ್ಪಣೆಗೊಂಡು ಸರ್ವಾಲಂಕಾರ ಭೂಷಿತ ಶ್ರೀ ಅನಂತ ಪದ್ಮನಾಭ ದೇವರಿಗೆ ಮಹಾಪೂಜೆ ಅರ್ಪಣೆಗೊಂಡಿತು. ಕ್ಷೇತ್ರಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ದೇವರಿಗೆ ಚಿನ್ನ, ಬೆಳ್ಳಿಯ ಹರಕೆ ಅರ್ಪಿಸಿ, ಪಂಚಾಮೃತ ಹಾಗೂ ತಂಬಿಲ ಸೇವೆಯನ್ನು ಸಮರ್ಪಿಸಿದರು.

ಮಧ್ಯಾಹ್ನ 20 ಸಾವಿರದಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. 50 ಸಾವಿರ ಸೀಯಾಳ, 12000 ತಂಬಿಲ ಸೇವೆ, 2500 ಪಂಚಾಮೃತ ಅಭಿಷೇಕ ಸೇವೆ ಅರ್ಪಣೆಯಾಯಿತು.

ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ, ಅನುವಂಶಿಕ ಮೊಕ್ತೇಸರ ಹಾಗೂ ಅರ್ಚಕ ಕೆ. ಮನೋಹರ ಭಟ್‌, ಅನುವಂಶಿಕ ಮೊಕ್ತೇಸರ ಹಾಗೂ ಪವಿತ್ರಪಾಣಿ ಕೆ.ಬಾಲಕೃಷ್ಣ ಕಾರಂತ, ಮೊಕ್ತೇಸರ ಭಾಸ್ಕರ ಕೆ. ಹಾಗೂ ದೇವಳದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರವೀಣ್‌ ಮತ್ತಿತರರು ಇದ್ದರು.