ಸಾರಾಂಶ
ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಾಲೂಕಿನ ಅರಳಕುಪ್ಪೆ- ಸೀತಾಪುರ ಗ್ರಾಮದ ಹೊರವಲಯದಲ್ಲಿ ಆ.11ರಂದು ಭತ್ತದ ನಾಟಿ ಮಾಡುವ ಹಿನ್ನೆಲೆಯಲ್ಲಿ ಸಿದ್ಧಗೊಂಡಿರುವ ಜಮೀನನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಶುಕ್ರವಾರ ಪರಿಶೀಲಿಸಿದರು.
ಪಾಂಡವಪುರ : ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಾಲೂಕಿನ ಅರಳಕುಪ್ಪೆ- ಸೀತಾಪುರ ಗ್ರಾಮದ ಹೊರವಲಯದಲ್ಲಿ ಆ.11ರಂದು ಭತ್ತದ ನಾಟಿ ಮಾಡುವ ಹಿನ್ನೆಲೆಯಲ್ಲಿ ಸಿದ್ಧಗೊಂಡಿರುವ ಜಮೀನನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಶುಕ್ರವಾರ ಪರಿಶೀಲಿಸಿದರು.
ಅರಳಕುಪ್ಪೆ- ಸೀತಾಪುರ ಹೊರವಲಯದ ಲಕ್ಷ್ಮಣ ಎಂಬ ರೈತನ ಜಮೀನಿನಲ್ಲಿ ಭತ್ತ ನಾಟಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಎಚ್ಡಿಕೆ ಭತ್ತದ ನಾಟಿ ಮಾಡಲು ಅನುಕೂಲವಾಗುವಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಸಿದ್ಧತೆ ಪರಿಶೀಲಿಸಿ ಮಾತನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕಳೆದ ಎರಡು ವರ್ಷಗಳಿಂದ ಮಳೆಯಿಲ್ಲದೆ ಬರಗಾಲ ಎದುರಾಗಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದರು. ಎಚ್.ಡಿ.ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವರಾದ ಬಳಿಕ ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕೆಆರ್‌ಎಸ್ ಅಣೆಕಟ್ಟೆ ಸಂಪೂರ್ಣವಾಗಿ ಭರ್ತಿಯಾಗಿದೆ ಎಂದರು.
ಆ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತ ಸಮುದಾಯಕ್ಕೆ ಭತ್ತದ ನಾಟಿ ಮಾಡುವ ಮೂಲಕ ಚಾಲನೆ ನೀಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭತ್ತ ನಾಟಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಭತ್ತದ ನಾಟಿ ಹಾಕುವ ಮೂಲಕ ಚಾಲನೆ ನೀಡಿದ್ದರು. ಅದರ ನೆನಪಿಗಾಗಿ ಪಾಂಡವಪುರದಿಂದ ಮೈಸೂರಿಗೆ ತೆರಳಲು ಅನುಕೂಲವಾಗುವಂತೆ ಕಾವೇರಿ ನದಿಗೆ 100 ಕೋಟಿ ರು. ವೆಚ್ಚದಲ್ಲಿ ಅರಳಕುಪ್ಪೆ- ಕಾರೇಕುರ ಸೇತುವೆಗೆ ಚಾಲನೆ ನೀಡಿದ್ದರು. ಈಗ ಸೇತುವೆ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ ಎಂದರು.
ಆ.11ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಬಳಿಕ ರಾಶಿಪೂಜೆ ಮಾಡಿ ನಂತರ ನೀರುಗದ್ದೆಗಿಳಿದು ಭತ್ತದ ನಾಟಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಎಚ್‌ಡಿಕೆ ಜತೆಯಲ್ಲಿಯೇ 100ಕ್ಕೂ ಅಧಿಕ ಮಹಿಳೆಯರು ನಾಟಿ ಮಾಡಲಿದ್ದಾರೆ ಎಂದು ತಿಳಿಸಿದರು.
ಭತ್ತದ ನಾಟಿಗೆ ಅನುಕೂಲವಾಗಲು ಈಗಾಗಲೇ 10 ಜೊತೆ ಎತ್ತುಗಳನ್ನು ಆಯೋಜಿಸಿ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದೆ. ಕಾರ್‍ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು, ರೈತರಿಗೆ ಕುಳಿತು ಕಾರ್‍ಯಕ್ರಮ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಭತ್ತದ ನಾಟಿ ಕಾರ್ಯ ವೀಕ್ಷಣೆಗೆ ಆಗಮಿಸುವ ಎಲ್ಲಾ ರೈತರು, ಸಾರ್ವಜನಿಕರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಊಟಕ್ಕಾಗಿ ಪ್ರತ್ಯೇಕವಾಗಿ 7 ಕೌಂಟರ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.
6 ಸಾವಿರ ಮಂದಿಗೆ ಊಟ:
ಭತ್ತ ನಾಟಿ ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 6 ಸಾವಿರ ಮಂದಿಗೆ ರೈತರು, ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅವರೆಕಾಳು ಕೂಟು, ರಾಗಿ ಮುದ್ದೆ, ಮೊಸೊಪ್ಪು, ಹೆಸರುಬೇಳೆ ಪಾಯಿಸ, ಅನ್ನಸಾಂಬರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಚಲುವರಾಜು, ಜಿಲ್ಲಾ ಯೂನಿಯನ್ ನಿರ್ದೇಶಕ ವಿ.ಎಸ್.ನಿಂಗೇಗೌಡ, ಅರಳಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಮಹದೇವು, ವಿಶ್ವನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಳ್ಳೇಗೌಡ, ಗವಿಗೌಡ ಪ್ರವೀಣ್, ಹರವು ಗ್ರಾಪಂ ಮಾಜಿ ಅಧ್ಯಕ್ಷ ವಿಥುನ್, ಮಂಜು, ರೇವಣ್ಣ, ದಯಾಶಂಕರ್, ಭೈರವ, ಲಕ್ಷ್ಮಣ, ಇಂದ್ರೇಶ್ ಸೇರಿ ಹಲವರು ಇದ್ದರು.
ನಾಲೆಗೆ ನೀರು ಹರಿಸಲು ಎಚ್ಡಿಕೆ ಸೂಚನೆ
ಕೆಆರ್‌ಎಸ್ ಅಣೆಕಟ್ಟೆ ಸಂರ್ಪೂಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನಾಲೆಗಳಿಗೆ ನಿರಂತರವಾಗಿ ನೀರು ಹರಿಸುವಂತೆ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದಾರೆ ಎಂದು ಪುಟ್ಟರಾಜು ತಿಳಿಸಿದರು.
ಭತ್ತದ ಬಿತ್ತನೆ ಕಾರ್ಯ ಆರಂಭವಾಗಿರುವುದರಿಂದ ನೀರು ತಪ್ಪಿಸದಂತೆ ಈಗಾಗಲೇ ನೀರಾವರಿ ಅಧಿಕಾರಿಗಳಿಗೆ ಕೇಂದ್ರ ಸಚಿವರು ಸೂಚಿಸಿದ್ದು, ಅದರಂತೆ ಅಧಿಕಾರಿಗಳು ಸಹ ಸಮರ್ಥರಿದ್ದು ನಾಲೆಗಳಿಗೆ ನೀರು ಹರಿಸಲಿದ್ದಾರೆ ಎಂದರು.
ರೈತರು ಆತಂಕ ಪಡುವುದು ಬೇಡ. ಒಂದು ವೇಳೆ ನಾಲೆಗೆ ನೀರು ತಪ್ಪಿಸಿದ ಅಧಿಕಾರಿಗಳಿಗೆ ಸಚಿವರ ನೇತೃತ್ವದಲ್ಲಿಯೇ ಬುದ್ದಿ ಕಲಿಸಬೇಕಾಗುತ್ತದೆ. ಕೊನೆ ಭಾಗದ ರೈತರಿಗೆ ನಾಲೆ ನೀರು ತಲುಪುತ್ತಿಲ್ಲ ಎನ್ನುವ ಬಗ್ಗೆ ಹಲವು ರೈತರು ನನಗೆ ದೂರವಾಣಿ ಕರೆ ಮಾಡಿ ಅಳಲು ತೊಡಿಕೊಂಡಿದ್ದಾರೆ ಎಂದು ಹೇಳಿದರು.
ಅಧಿಕಾರಿಗಳು ಕೊನೆ ಭಾಗದ ರೈತರಿಗೆ ನೀರು ತಲುಪಿಸುವ ಕೆಲಸ ಮಾಡಬೇಕು. ಇಲ್ಲವಾದರೆ ನಾವು ನೀರುಗಂಟಿಯಂತೆ ಕೆಲಸ ಮಾಡಿ ಕೊನೆ ಭಾಗದ ರೈತರಿಗೆ ನೀರು ತಲುಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.