ಚನ್ನಪಟ್ಟಣ: ಹಲವು ನಾಟಕೀಯ ಬೆಳವಣಿಗಳ ನಡುವೆ ಇಲ್ಲಿನ ನಗರಸಭೆಗೆ ನೂತನ ಅಧ್ಯಕ್ಷರಾಗಿ ೧೧ನೇ ವಾರ್ಡ್ ಸದಸ್ಯ ಬಿ.ಎಂ.ನಾಗೇಶ್ ಅವಿರೋಧವಾಗಿ ಆಯ್ಕೆಯಾದರು.
ನಗರಸಭೆ ಹಿಂದಿನ ಅಧ್ಯಕ್ಷ ವಾಸೀಲ್ ಅಲಿಖಾನ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ೫ನೇ ವಾರ್ಡ್ ನಗರಸಭೆ ಕಾಂಗ್ರೆಸ್ ಸದಸ್ಯ ರೇವಣ್ಣ ಹಾಗೂ ೧೧ನೇ ವಾರ್ಡ್ ಕಾಂಗ್ರೆಸ್ ಸದಸ್ಯ ನಾಗೇಶ್ ನಾಮಪತ್ರ ಸಲ್ಲಿಸಿದ್ದರು. ಆದರೆ ಕಾಂಗ್ರೆಸ್ ಮುಖಂಡರ ಮನವೊಲಿಕೆ ನಂತರ ರೇವಣ್ಣ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದರು. ಕಣದಲ್ಲಿ ಉಳಿದ ನಾಗೇಶ್ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪವಿಭಾಗಾಧಿಕಾರಿ ಬಿನೋಯ್ ಘೋಷಿಸಿದರು.೩೧ ಸದಸ್ಯ ಬಲದ ಚನ್ನಪಟ್ಟಣ ನಗರಭೆಯಲ್ಲಿ ಕಾಂಗ್ರೆಸ್‌ನ ೨೭ ಹಾಗೂ ಓರ್ವ ಪಕ್ಷೇತರ ಸದಸ್ಯ ಬೆಂಬಲದೊಂದಿಗೆ ೨೮ ಸದಸ್ಯರ ಸಂಖ್ಯಾಬಲವನ್ನು ಕಾಂಗ್ರೆಸ್ ಹೊಂದಿದೆ. ಜೆಡಿಎಸ್‌ನ ಮೂವರು ಹಾಗೂ ಒಬ್ಬರು ಬಿಜೆಪಿ ಸದಸ್ಯರಿದ್ದಾರೆ. ಬಿಸಿಎಂಬಿ ಸ್ಥಾನಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ೫ನೇ ವಾರ್ಡಿನ ರೇವಣ್ಣ, ೮ನೇ ವಾರ್ಡಿನ ಸರ್ವಮಂಗಳ, ೧೧ನೇ ವಾರ್ಡಿನ ನಾಗೇಶ್ ಹಾಗೂ ೨೧ನೇ ವಾರ್ಡಿನ ಶಾಬೀರ್ ಆಕಾಂಕ್ಷಿಗಳಾಗಿದ್ದರು. ನಾಗೇಶ್ ಮತ್ತು ರೇವಣ್ಣ ನಡುಗೆ ಪ್ರಬಲ ಸ್ಪರ್ಧೆ ಏರ್ಪಟ್ಟಿದ್ದು, ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಆದರೆ, ಕೊನೆ ಘಳಿಗೆಯಲ್ಲಿ ವರಿಷ್ಠರ ಮಾತಿಗೆ ಕಟ್ಟುಬಿದ್ದು, ರೇವಣ್ಣ ನಾಮಪತ್ರ ಹಿಂಪಡೆದ ಕಾರಣ ನಾಗೇಶ್ ಹಾದಿ ಸುಗಮವಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಗೇಶ್ ಅವರನ್ನು ಪೌರಾಯುಕ್ತ ಮಹೇಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷಎಸ್. ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್ ಇತರರು ಅಭಿನಂದಿಸಿದರು.ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಹಲವು ಹೈಡ್ರಾಮಗಳಿಗೆ ಸಾಕ್ಷಿಯಾಯಿತು. ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರವೇ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಸಿ.ಪಿ.ಯೋಗೇಶ್ವರ್ ಸಭೆ ನಡೆಸಿದ್ದರು. ಶುಕ್ರವಾರ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೆಸರು ಘೋಷಿಸುವುದಾಗಿ ತಿಳಿಸಿದ್ದರು. ಶುಕ್ರವಾರ ಬೆಳಗ್ಗೆ ನಗರದ ಹೊರವಲಯದ ದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ನಾಗೇಶ್ ಹೆಸರು ಘೋಷಿಸುತ್ತಿದ್ದಂತೆ ರೇವಣ್ಣ ಸೇರಿದಂತೆ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲಿಂದ ನಗರಸಭೆಗೆ ಬಂದ ಇಬ್ಬರೂ ಪ್ರತ್ಯೇಕವಾಗಿ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದರು. ನಗರಸಭೆಯಲ್ಲಿ ಮಾತುಕತೆ ನಡೆಸಿದ ಕಾಂಗ್ರೆಸ್ ಮುಖಂಡರು, ನಾಮಪತ್ರ ಹಿಂಪಡೆಯುವಂತೆ ರೇವಣ್ಣ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.
ಜಿಲ್ಲಾಧ್ಯಕ್ಷರಿಗೆ ಘೇರಾವ್:
ಗುರುವಾರ ಸಂಜೆವರೆಗೆ ಅಧ್ಯಕ್ಷ ಸ್ಥಾನಕ್ಕೆ ರೇವಣ್ಣ ಹೆಸರೇ ಪ್ರಬಲವಾಗಿ ಕೇಳಿಬರುತ್ತಿದ್ದು, ರೇವಣ್ಣ ಹೆಸರು ಫೈನಲ್ ಆಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಕಡೇ ಕ್ಷಣದಲ್ಲಿ ವರಿಷ್ಠರು ನಾಗೇಶ್‌ಗೆ ಮಣೆ ಹಾಕಿದರು. ಈ ಹಿನ್ನೆಲೆಯಲ್ಲಿ ರೇವಣ್ಣ ಬೆಂಬಲಿಗರು ಹಾಗೂ ಕುರುಬ ಸಮುದಾಯದ ಮುಖಂಡರು ಆಕ್ರೋಶಗೊಂಡರು. ನಗರಸಭೆ ಬಳಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್‌ಗೆ ಘೇರಾವ್ ಹಾಕಿ ರೇವಣ್ಣಗೆ ಅಧ್ಯಕ್ಷ ಸ್ಥಾನ ತಪ್ಪಲು ಕಾರಣವೇನೆಂದು ತಿಳಿಸಲು ಒತ್ತಾಯಿಸಿದರು.ನಗರದ ಅಭಿವೃದ್ಧಿಗೆ ಶ್ರಮಿಸುವೆ:
ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಪಕ್ಷದ ಎಲ್ಲ ಮುಖಂಡರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ನಗರಸಭೆ ಅಧ್ಯಕ್ಷ ನಾಗೇಶ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಸಿ.ಪಿ. ಯೋಗೇಶ್ವರ್ ಸೇರಿದಂತೆ ಪಕ್ಷದ ವರಿಷ್ಠರು, ಹಾಗೂ ನಗರಸಭೆ ಸದಸ್ಯರು ನನ್ನ ಮೇಲೆ ನಂಬಿಕೆಯಿಟ್ಟಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ದೊರತೆ ಅವಕಾಶ ಬಳಸಿಕೊಂಡು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಪೊಟೋ೧೩ಸಿಪಿಟಿ1:ಚನ್ನಪಟ್ಟಣ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ನಾಗೇಶ್ ಅವರನ್ನು ಕಾಂಗ್ರೆಸ್ ಮುಖಂಡರು ಹಾಗೂ ನಗರಸಭೆ ಸದಸ್ಯರು ಅಭಿನಂದಿಸಿದರು.