ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಜನಾಂಗ ಬಾಂಧವರು ಒಗ್ಗೂಡಲು ಕ್ರೀಡಾಕೂಟಗಳು ಸಹಕಾರಿ ಎಂದು ಕೊಳಕೇರಿ ಗ್ರಾಮದ ಕಾಫಿ ಬೆಳೆಗಾರ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಹೇಳಿದ್ದಾರೆ.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕುಂಜಿಲ ಗ್ರಾಮದ ನಾಲ್ನಾಡು ಶಿವಾಜಿ ಯೂತ್ಸ್ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಯುವಕರು ದೇಹ ಮತ್ತು ಮನಸ್ಸನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದ ಅವರು, ಕುಡಿತದ ದಾಸರಾಗದೆ ಉತ್ತಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಹಿರಿಯರು-ಕಿರಿಯರು ಎಂಬ ಭೇದ ಭಾವವಿಲ್ಲದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಹಕಾರ ನೀಡಿದರೆ ಕ್ರೀಡಾಕೂಟ ಯಶಸ್ವಿಯಾಗಲು ಸಾಧ್ಯ ಎಂದರು.
ಕುಂಜಿಲ ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಮಾತನಾಡಿ, ಕೊಡಗಿನ ಮೂಲ ನಿವಾಸಿಗಳಾದ ಕೆಂಬಟ್ಟಿ ಜನಾಂಗದ ಸಂಸ್ಕೃತಿ ಉತ್ತಮವಾಗಿದೆ. ಮೂಲ ಸಂಸ್ಕೃತಿ ಮರೆಯುವುದು ಸರಿಯಲ್ಲ. ಸಂಸ್ಕೃತಿ ವಿಶೇಷವಾದದ್ದಾಗಿದ್ದು ಮುಂದಿನ ಪೀಳಿಗೆಗೂ ಪರಿಚಯಿಸಬೇಕಿದೆ ಎಂದರು.ದಿ ತಾಮರ ರೆಸಾರ್ಟ್ ನ ಸೀನಿಯರ್ ಮ್ಯಾನೇಜರ್ ಕಲ್ಯಾಟಂಡ ಗಿರೀಶ್ ಸುಬ್ಬಯ್ಯ ಮಾತನಾಡಿ, ಕ್ರೀಡಾಕೂಟಗಳು ಕುಟುಂಬಗಳ ನಡುವೆ ಸಾಮರಸ್ಯ ಬೆಸೆಯುತ್ತದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟ ಪ್ರತಿ ವರ್ಷ ನಡೆಯುವಂತಾಗಲಿ. ಜನಾಂಗ ಬಾಂಧವರು ಪ್ರತಿಭೆಯನ್ನು ವ್ಯಕ್ತಪಡಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದರು.
ಕಕ್ಕಬ್ಬೆ-ಕುಂಜಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೊಂಗೇರ ಶಿಲ್ಪಾ ಲೋಕೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಅನಿಸಿಕೆ ವ್ಯಕ್ತಪಡಿಸಿದರು.ಕುಂಜಿಲ- ಕಕ್ಕಬೆ ನಾಲ್ನಾಡು ಶಿವಾಜಿ ಯೂತ್ ಕ್ಲಬ್ ಅಧ್ಯಕ್ಷ ಉತ್ತುಕುಟ್ಟಡ ನಿತಿನ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಂದಾಯ ನಿರೀಕ್ಷಕ ಆರ್. ರವಿಕುಮಾರ್ , ಕಕ್ಕಬ್ಬೆ ಪ್ರೌಢಶಾಲೆಯ ಬಾತ್ಮಿದಾರ ಕಲಿಯಾಟಂಡ ಸುಧಾ ಗಣಪತಿ, ಗ್ರಾಮ ಆಡಳಿತಾಧಿಕಾರಿ ಜನಾರ್ದನ್, ಕಾಫಿ ಬೆಳೆಗಾರ ಕಲಿಯಾಟಂಡ ಅರುಣ್, ಜನಪದ ತಜ್ಙ ಉತ್ತುಕುಟ್ಟಡ ತಿಮ್ಮಯ್ಯ , ನಮ್ಮುಡುಮಂಡ ಅಯ್ಯಪ್ಪ, ಶರತ್ , ದಿನು ಕುಟ್ಟಪ್ಪ, ಕಂದಾಯ ಇಲಾಖೆಯ ಸಿಬ್ಬಂದಿ ತಿಮ್ಮಣ್ಣ, ಎಮ್ಮೆ ಮಾಡು ಗ್ರಾಮ ಪಂಚಾಯತಿ ಸಿಬ್ಬಂದಿ ಪಾರ್ವತಿ, ಕಾಮಿನಿ, ಮನು ಬಿದ್ದಪ್ಪ, ಶಂಭು ಶಿವಾಜಿ ಯೂತ್ಸ್ ಪದಾಧಿಕಾರಿಗಳು ಹಾಜರಿದ್ದರು. ರಾಹುಲ್ ನಿರೂಪಿಸಿದರು.
ಬಳಿಕ ಕ್ರಿಕೆಟ್ ಪಂದ್ಯಾಟವನ್ನು ಅತಿಥಿಗಳು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡ ಬ್ಯಾಟಿನಿಂದ ಚೆಂಡು ಹೊಡೆಯುವುದರ ಮೂಲಕ ಉದ್ಘಾಟಿಸಿದರು.ಮಹಿಳೆಯರಿಗಾಗಿ ಹಗ್ಗ ಜಗ್ಗಾಟ್ಟ ಸ್ಪರ್ಧೆ ಆಯೋಜಿಸಲಾಗಿದ್ದು ಸ್ಪರ್ಧೆಗಳು ನಾಲ್ಕು ದಿನಗಳ ಕಾಲ ಇಲ್ಲಿನ ಕ್ರೀಡಾಂಗಣದಲ್ಲಿ ಜರುಗಿ 21ರಂದು ಸಮಾರೋಪ ಸಮಾರಂಭ ಜರುಗಲಿದೆ.