ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ನಾಡಪ್ರಭು ಕೆಂಪೇಗೌಡರು ಈ ನಾಡಿನ ಎರಡು ಕಣ್ಣುಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣಿಸಿದರು.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ದೂರ ದೃಷ್ಟಿಯಿಂದ ಬೆಂಗಳೂರು ನಗರದ ಅಡಿಪಾಯದಿಂದ ಇಂದು ಕೋಟ್ಯಂತರ ಜನಗಳಿಗೆ ನೆಲೆ ಒದಗಿಸಿದೆ ಎಂದು ಸ್ಮರಿಸಿದರು.
ಇಡೀ ಪ್ರಪಂಚದಲ್ಲೇ ಬೆಂಗಳೂರು ಗುರುತಿಸಿಕೊಳ್ಳಲು ಹಾಗೂ ರಾಜದಾನಿಯಾಗಲು ಕೆಂಪೇಗೌಡರು ಕಾರಣರು. ಅವರನ್ನು ಎಲ್ಲರೂ ಬದುಕಿರುವವರೆಗೂ ಸ್ಮರಿಸಬೇಕು. ನಾಲ್ವಡಿ ಹಳೇ ಮೈಸೂರು ಪ್ರಾಂತ್ಯ ಅಭಿವೃದ್ಧಿಯಾಗಲು ಕಾರಣರಾದರೆ, ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ಅಭಿವೃದ್ಧಿಯಾಗಲು ಮೂಲ ಕಾರಣರಾಗಿದ್ದಾರೆ ಎಂದರು.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆ.ಆರ್.ಎಸ್., ಮೈಷುಗರ್, ಬೆಳಗೊಳ ಕಾಗದ ಕಾರ್ಖಾನೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಸ್ಥಾಪಿಸಿ ಕೋಟ್ಯಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಅದೇ ರೀತಿ ಕೆಂಪೇಗೌಡ ಅವರು ನವ ಬೆಂಗಳೂರು ಸ್ಥಾಪಿಸಿ, ನೂರಾರು ಕೆರೆಗಳನ್ನು ನಿರ್ಮಿಸಿ ಕೋಟ್ಯಂತರ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಬಣ್ಣಿಸಿದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಒಕ್ಕಲಿಗರ ಅಸ್ಮಿತೆ ಎಂದು ಬಂದಾಗ ನಾಡಪ್ರಭು ಕೆಂಪೇಗೌಡ, ಬಾಲಗಂಗಾಧರನಾಥ ಸ್ವಾಮೀಜಿ, ಎಸ್.ಎಂ. ಕೃಷ್ಣ, ಕೆಂಗಲ್ ಹನುಂತಯ್ಯ ಅವರ ನೆನಪು ಎಂದೂ ಇರುತ್ತದೆ. ಒಕ್ಕಲಿಗರ ಜಿಲ್ಲೆಯಲ್ಲಿ ಕೆಂಪೇಗೌಡ ಜಯಂತಿ ಮಾಡುವುದೇ ಹೆಮ್ಮೆಯ ವಿಷಯ ಎಂದರು.ಕೆಂಪೇಗೌಡ ಜಯಂತಿಯನ್ನು ಜಾರಿಗೆ ತಂದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಆದರೆ, ಕೆಂಪೇಗೌಡರ ಪ್ರತಿರೂಪ ಎಂದು ರಾಜ್ಯವನ್ನು ಆಳಿದವರಿಗೆ ಕೆಂಪೇಗೌಡ ಜಯಂತಿ ಆಚರಣೆಗೆ ತರಲು ಆಗಲಿಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಛೇಡಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್ ಮಾತನಾಡಿದರು. ಇದೇ ವೇಳೆ ಯುಪಿಎಸ್‌ಸಿಯಲ್ಲಿ 724ನೇ ರ್‍ಯಾಂಕ್ ಗಳಿಸಿ ಬೆಂಗಳೂರು ಕಾರ್ಮಿಕ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಆರ್.ನಿಖಿಲ್ ಹಾಗೂ 929ನೇ ರ್‍ಯಾಂಕ್ ಪಡೆದಿರುವ ಹಳೇಬೂದನೂರು ಗ್ರಾಮದ ಎಚ್.ಪಿ.ಮನೋಜ್ ಅವರನ್ನು ಸನ್ಮಾನಿಸಲಾಯಿತು.ಆದಿಚುಂಚನಗಿರಿ ಶಾಖಾ ಮಠ ಕೊಮ್ಮೇರಹಳ್ಳಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ. ಪಾಂಡುಕುಮಾರ್ ಅವರು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್), ಉಪಾಧ್ಯಕ್ಷ ಎಂ.ಪಿ.ಅರುಣ್ ಕುಮಾರ್, ಜಿಲ್ಲಾಕಾರಿ ಡಾ. ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಕಾರಿ ಬಿ.ಸಿ.ಶಿವಾನಂದಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ವಿ. ನಂದೀಶ್, ಜಿಲ್ಲಾ ರೆಡ್‌ಕ್ರಾಸ್ ಸಭಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಇತರರು ಉಪಸ್ಥಿತರಿದ್ದರು.
ಕಲಾ ತಂಡಗಳೊಂದಿಗೆ ಮೆರವಣಿಗೆ:ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಾಡಪ್ರಭು ಶ್ರೀಕೆಂಪೇಗೌಡ ಅವರ ಅಲಂಕೃತ ಭಾವಚಿತ್ರ ಹೊತ್ತ ಮೆರವಣಿಗೆಯು ಜಿಲ್ಲಾಕಾರಿಗಳ ಕಚೇರಿ ಆವರಣದಿಂದ ಜನಪದ ಕಲಾತಂಡಗಳೊಂದಿಗೆ ಹೊರಟು, ಜೆ.ಸಿ. ವೃತ್ತ, ಮಹಾವೀರ ವೃತ್ತ, ವಿ.ವಿ.ರಸ್ತೆ ಮೂಲಕ ಸಂಚರಿಸಿ ಕಲಾಮಂದಿರದಲ್ಲಿ ಸಮಾವೇಶಗೊಂಡಿತು.