ಸಾರಾಂಶ
ಮಳವಳ್ಳಿ: ಪಟ್ಟಣದ ದೊಡ್ಡಕೆರೆ ದಡದ ನಾಲ್ವಡಿ ಕೃಷ್ಣರಾಜ ಓಡೆಯರ್ ಉದ್ಯಾನವನದ ಸ್ವಚ್ಛತೆಗೆ ಬುಧವಾರ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಚಾಲನೆ ನೀಡಿದರು.
ಕಾವೇರಿ ನೀರಾವರಿ ನಿಗಮದ ಸಹಯೋಗದೊಂದಿಗೆ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ವ್ಯಾಪ್ತಿ ಸಾರ್ವಜನಿಕ ಉದ್ಯಾನವನ, ರುದ್ರಭೂಮಿಗಳು, ದೇವಸ್ಥಾನಗಳು ಸೇರಿ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ಸಾರ್ವಜನಿಕರ ಕುಂದು, ಕೊರತೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಜತೆಗೂಡಿ ಕೆಲಸ ಮಾಡಲಾಗುತ್ತಿದೆ. ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನವನವು ನಿರ್ವಹಣೆ ಇಲ್ಲದೇ ಅವ್ಯವಸ್ಥೆಯಿಂದ ಕೂಡಿತ್ತು. ಹೀಗಾಗಿ ಆದ್ಯತೆ ಮೇರೆಗೆ ಸ್ವಚ್ಛತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕರು ಸಹ ಈ ಬಗ್ಗೆ ಪುರಸಭೆ ಗಮನ ಸೆಳೆದಿದ್ದರು. ಹೀಗಾಗಿ ಸ್ವಚ್ಛತೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮ ವಹಿಸಲಾಗುವುದು. ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಈ ಉದ್ಯಾನವನವನ್ನು ಪುರಸಭೆಗೆ ಹಸ್ತಾಂತರ ಮಾಡಿಕೊಳ್ಳುವ ಸಂಬಂಧ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷ ಎನ್.ಬಸವರಾಜು(ಜಯಸಿಂಹ) ಮಾತನಾಡಿ, ಪಟ್ಟಣ ವ್ಯಾಪ್ತಿಯ ಉದ್ಯಾನವನಗಳು, ರುದ್ರಭೂಮಿಗಳು, ದೇವಸ್ಥಾನಗಳಲ್ಲಿ ಮೂಲ ಸವಲತ್ತು ಕಲ್ಪಿಸಿ ಅಭಿವೃದ್ಧಿಪಡಿಸಲಾಗುವುದು. ಪ್ರಮುಖವಾಗಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ಈ ವೇಳೆ ಕಾವೇರಿ ನೀರಾವರಿ ನಿಗಮದ ಎಇಇ ಎಸ್.ಭರತೇಶ್ ಕುಮಾರ್, ಮುಖಂಡರಾದ ಕೃಷ್ಣ, ನಾಗರಾಜು, ಅಂಕರಾಜು, ಕೃಷ್ಣ, ಷರೀಫ್ ಇದ್ದರು.