ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಹಲವು ಅಭಿವೃದ್ಧಿ ಯೋಜನೆ ರೂಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇಶದ ಜನರು ನೆಮ್ಮದಿ ಬದುಕು ಸಾಧಿಸಲು ಅತ್ಯುತ್ತಮ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಸಾಧನೆ ಸರ್ವಕಾಲಕ್ಕೂ ಅಮರ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.ಸಮೀಪದ ತೊರೆಕಾಡನಹಳ್ಳಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕೇಂದ್ರ ಮತ್ತು ಸ್ಥಳೀಯ ನೌಕರರ ಸಂಘ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಕೇಂದ್ರ ಹಾಗೂ ಸ್ಥಳೀಯ ಸಮಿತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬ ಹಾಗೂ ಕನ್ನಡ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ರೈತಪರ ಧ್ವನಿಯಾಗಿದ್ದ ನಾಲ್ವಡಿಯವರು ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿದ ಪರಿಣಾಮ ನೀರಾವರಿ ಕ್ಷೇತ್ರ ಶ್ರೀಮಂತಗೊಂಡು, ಜಿಲ್ಲೆಯ ರೈತರು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಮೈಸೂರು ಸಂಸ್ಥಾನದಲ್ಲಿ ಮೊದಲ ಬಾರಿಗೆ ಮೀಸಲಾತಿ ಆರಂಭಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ ಎಂದರು.ಶಿಕ್ಷಣಕ್ಕೆ ಹೆಚ್ಚು ಪ್ರಾಧನ್ಯತೆ ನೀಡಿದ ಪರಿಣಾಮ ತಾಲೂಕಿನಲ್ಲೇ ಅತೀ ಹೆಚ್ಚು ವಿದ್ಯಾವಂತರನ್ನು ಕಾಣಬಹುದು. ತನ್ನ ಆಡಳಿತಾವಧಿಯಲ್ಲಿ ಶಿಕ್ಷಣ, ಆಸ್ಪತ್ರೆ, ಕೈಗಾರಿಕೆ, ಬ್ಯಾಂಕಿಂಗ್ ಕ್ಷೇತ್ರವನ್ನು ಬಲಗೊಳಿಸಲು ಶ್ರಮಿಸಿದ್ದಾರೆ. ಇಂತಹ ದೂರದೃಷ್ಟಿಯುಳ್ಳ ಮಹಾರಾಜರ ಜನಪರ ಅಭಿವೃದ್ಧಿ ಕಾರ್ಯಕ್ರಮಗಳು ಪ್ರಸ್ತುತ ಜನಪ್ರತಿನಿಧಿಗಳಿಗೆ ಮಾರ್ಗದರ್ಶನ ಆಗಿದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವದ ಹಲವು ಸಂವಿಧಾನಗಳನ್ನು ಅಧ್ಯಯನ ಮಾಡಿ ಈ ದೇಶದಲ್ಲಿ ವಾಸಿಸುವ ಎಲ್ಲ ಬಗೆಯ ಧರ್ಮ ಮತ್ತು ವರ್ಗದ ಜನರಿಗೆ ಹಕ್ಕು ಅವಕಾಶ ನೀಡುವ ಸಮ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ ಎಂದರು.ಮಹಿಳೆಯರ ವಿಶೇಷ ಹಕ್ಕು, ಮತದಾನದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ದೊರಕಿದ ಪರಿಣಾಮ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಭಿಮಾನದ ಜೀವನ ನಡೆಸುವಂತಾಗಿದೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಿಳಿಯಬೇಕೆಂಬ ಉದ್ದೇಶದಿಂದ ಸರ್ಕಾರದಿಂದ ಸಂವಿಧಾನ ಓದು ಹಾಗೂ ಸಂವಿಧಾನ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಇದೇ ವೇಳೆ ಜಲ ಮಂಡಳಿ ಮುಖ್ಯಧ್ವಾರದ ಅವರಣದಲ್ಲಿ ನೂತನವಾಗಿ ನಿರ್ಮಿಸಲಾದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು.ಸಮಾರಂಭದಲ್ಲಿ ಗೌತಮ ವಿದ್ಯಾ ಸಂಸ್ಥೆ ಸುಗತಾಪಾಲ್ ಭಂತೇಜಿ, ಜಲಮಂಡಲಿ ಮುಖ್ಯ ಲೆಕ್ಕಾಧಿಕಾರಿ ಸುಬ್ಬರಾಮಯ್ಯ, ಮುಖ್ಯ ಎಂಜಿನಿಯರ್ ಎ.ರಾಜಶೇಖರ್, ಕುಮಾರ್ ನಾಯಕ್, ಮಹೇಶ್, ನೌಕರರ ಸಂಘದ ಪದಾಧಿಕಾರಿಗಳಾದ ಮರಿಯಪ್ಪ, ಸದಾಶಿವ ಕಾಂಬಳೆ, ಎಂ.ಎಸ್.ಚೇತನ್, ಅನಿಲ್ ಕುಮಾರ್, ಶ್ರೀಕಾಂತ್ ಎಂಜಿನಿಯರ್ ಸಿ.ಪಿ.ರಾಘವೇಂದ್ರ, ನರೇಶ್, ಕಾರ್ತೀಕ್, ಎಂ.ರಘು, ಮಂಜುನಾಥ್, ಪಲ್ಲವಿ, ಭಾಗ್ಯ ಲಕ್ಷ್ಮೀ, ಶಶಿರೇಖಾ, ವಿನೋದ್, ಪ್ರೀತಂ, ವಾಸಿಂ ಉಲ್ಲಾ ಖಾನ್, ತನುಶ್ರೀ ಸೇರಿದಂತೆ ಹಲವರು ಭಾಗವಹಿಸಿದ್ದರು.