ಸಾರಾಂಶ
ದಾಂಡೇಲಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿಗೆ ಕೊಟ್ಟ ಅಭಿವೃದ್ಧಿ ಕೆಲಸಗಳ ಜತೆಗೆ ಅವರು ಜಾರಿಗೆ ತಂದ ಹಲವು ಕ್ರಾಂತಿಕಾರಕ ಯೋಜನೆಗಳು ಇಂದಿಗೂ ಪ್ರಸ್ತುತ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ನುಡಿದರು.
ಉತ್ತರಕನ್ನಡ ಜಿಲ್ಲಾ ಹಾಗೂ ದಾಂಡೇಲಿ ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಆಶರಯದಲ್ಲಿ ದಾಂಡೇಲಿಯ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ೧೪೦ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾಲ್ಚಡಿ ಕೃಷ್ಣರಾಜ ಒಡೆಯರ್ ಅವರು ಒಬ್ಬ ರಾಜರಾಗಿ ನಾಡಿಗೆ ಕೊಟ್ಟ ಕೊಡುಗೆ ಅಪಾರವಾದದ್ದು. ತಮ್ಮ ಅವಧಿಯಲ್ಲಿ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಲ್ಲದಕ್ಕಿಂತ ಹೆಚ್ಚಿನದಾಗಿ ಔದ್ಯಮಿಕವಾಗಿ ಸಾಕಷ್ಟು ಅಭಿವೃದ್ಧಿಪರ ಕೆಲಸಗಳನ್ನು ಮಾಡಿ ಜನ ಪ್ರೀತಿಗೆ ಪಾತ್ರರಾದವರು. ಅಂದೇ ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಯೊಂದಿಗೆ ಸ್ಥಳೀಯ ಸಂಸ್ಥೆಗಳ ರಚನೆ ಮಾಡಿದವರು. ಸರ್ಕಾರಿ ಉದ್ಯೋಗದಲ್ಲಿ ಎಲ್ಲರಿಗೂ ಅವಕಾಶ ತಂದರು ಎಂದರು.
ನೀರಾವರಿಗೆ ಮಹತ್ವ ನೀಡಿದರು. ರೈಲ್ವೆ ಮಾರ್ಗದ ಜತೆಗೆ ರಸ್ತೆ ಅಭಿವೃದ್ಧಿಗೆ ಮಹತ್ವ ಕೊಟ್ಟರು. ದೇವದಾಸಿ, ಗೆಜ್ಜೆಪೂಜೆ ಪದ್ಧತಿಯನ್ನು ಆ ಕಾಲದಲ್ಲಿಯೇ ನಿಷೇಧ ಮಾಡಿದರು. ವಿಧವೆಯವರಿಗೆ ಮರುಮದುವೆ ಮಾಡಿಕೊಳ್ಳುವ ಸ್ವಾತಂತ್ರ‍್ಯ ಕೊಟ್ಟರು. ಹಲವಾರು ಆರ್ಥಿಕ ಸುಧಾರಣೆ ತಂದರು. ಹೀಗೆ ಒಂದು ಪ್ರಗತಿಪರ ಆಡಳಿತ ನೀಡುವ ಜತೆಗೆ ಶತಮಾನಗಳ ಹಿಂದೆಯೇ ನಾಡು ನುಡಿಗಾಗಿ ಕೆಲಸ ಮಾಡುವುದಕ್ಕೆ ಒಂದು ಸಂಘಟನೆ ಇರಬೇಕೆಂದು ಮಹತ್ವಾಕಾಂಕ್ಷೆಯನ್ನು ಹೊಂದಿ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಆ ಸಂದರ್ಭದಲ್ಲಿ ಅವರಿಗೆ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರು ಜತೆಯಾಗಿದ್ದರು. ಅವರು ಅಂದು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಇಂದು ಕನ್ನಡ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿ ಅತ್ಯಂತ ದೊಡ್ಡ ನುಡಿ ಸಂಘಟನೆಯಾಗಿ ಬೆಳೆದು ನಿಂತಿದೆ. ನಾಡು ನುಡಿಗಾಗಿ, ಸಂಸ್ಕೃತಿಯ ಉಳಿವಿಗಾಗಿ ಅಷ್ಟು ವರ್ಷಗಳ ಹಿಂದೆಯೇ ಕೆಲಸ ಮಾಡಿದಂತಹ, ಜತೆಗೆ ಪರಿಷತ್ತನ್ನು ಕಟ್ಟಿ ಬೆಳೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನಮನಗಳನ್ನು ಸಲ್ಲಿಸಲಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಅವರು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾವೆಲ್ಲ ಕೆಲಸ ಮಾಡುವುದೇ ಭಾಗ್ಯದ ಸಂಗತಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಗತಿಪರ ಧೋರಣೆಗಳು ಮಾದರಿಯಾದುದು ಎಂದರು.
ಈ ಸಂದರ್ಭದಲ್ಲಿ ದಾಂಡೇಲಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಪ್ರವೀಣ ನಾಯ್ಕ, ಗುರುಶಾಂತ ಜಡೆಹಿರೇಮಠ, ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ, ಲೇಖಕಿ ವೆಂಕಮ್ಮ ನಾಯಕ, ಪತ್ರಕರ್ತ ಅಕ್ಷಯಗಿರಿ ಗೋಸಾವಿ ಮುಂತಾದವರಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಾರ್ಪಣೆ ಮಾಡಿದರು.