ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೇವಲ ಗುಣಮಟ್ಟದ ಹೆಸರು, ಉದ್ದು ತೆಗೆದುಕೊಂಡು ಉಳಿದ ರೈತರ ಕಾಳುಗಳನ್ನು ಖರೀದಿಸದೇ ಹಿಂದಕ್ಕೆ ಕಳಿಸುತ್ತಿದ್ದಾರೆ. ಅತಿವೃಷ್ಟಿಯಿಂದಾಗಿ ಬಿತ್ತನೆ ಮಾಡಲಾಗಿದ್ದ ಹೆಸರು ಹಾಗೂ ಉದ್ದು ಬೆಳೆ ಹಾನಿಯಾಗಿವೆ.

ಅಣ್ಣಿಗೇರಿ:

ಗುಣಮಟ್ಟ ಪರಿಶೀಲಿಸದೇ ಹೆಸರು, ಉದ್ದು ಬೆಳೆಯನ್ನು ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಒತ್ತಾಯಿಸಿ ಪಕ್ಷಾತೀತ ಹೋರಾಟ ಸಮಿತಿ ಮತ್ತು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆ ವತಿಯಿಂದ ಸೋಮವಾರದಿಂದ ಇಲ್ಲಿನ ಬಸ್‌ ನಿಲ್ದಾಣದ ಬಳಿ ಇರುವ ರೈತ ಹೋರಾಟ ಸಮಿತಿ ವೇದಿಕೆಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.

ಈ ವೇಳೆ ತಾಲೂಕು ಘಟಕದ ಅಧ್ಯಕ್ಷ ಜಯರಾಜ್ ಹೂಗಾರ ಮಾತನಾಡಿ, ಈಗಾಗಲೇ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೇವಲ ಗುಣಮಟ್ಟದ ಹೆಸರು, ಉದ್ದು ತೆಗೆದುಕೊಂಡು ಉಳಿದ ರೈತರ ಕಾಳುಗಳನ್ನು ಖರೀದಿಸದೇ ಹಿಂದಕ್ಕೆ ಕಳಿಸುತ್ತಿದ್ದಾರೆ. ಅತಿವೃಷ್ಟಿಯಿಂದಾಗಿ ಬಿತ್ತನೆ ಮಾಡಲಾಗಿದ್ದ ಹೆಸರು ಹಾಗೂ ಉದ್ದು ಬೆಳೆ ಹಾನಿಯಾಗಿವೆ. ಇಂತಹ ಸಮಯದಲ್ಲಿ ಗುಣಮಟ್ಟ ಪರಿಶೀಲಿಸಿ ಹೆಸರು, ಉದ್ದು ಖರೀದಿಸುವುತ್ತಿರುವುದು ಸರಿಯಲ್ಲ. ಸರ್ಕಾರ ಈ ಕೂಡಲೇ ರೈತರು ಬೆಳೆದಿರುವ ಎಲ್ಲ ಹೆಸರು, ಉದ್ದು ಖರೀದಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ರೈತ ಸಮಿತಿ ಮುಖಂಡ ಭಗವಂತಪ್ಪ ಪುಟ್ಟನವರ ಮಾತನಾಡಿ, ಬೆಂಬಲ ಬೆಲೆಯಡಿ ಖರೀದಿಸುವುದು ಡಿ. 23ಕ್ಕೆ ಕೊನೆಯ ದಿನ ಎಂದು ಖರೀದಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಬೆರಳೆಣಿಕೆ ರೈತರ ಬೆಳೆಗಳನ್ನು ಮಾತ್ರ ಖರೀದಿಸಿದ್ದಾರೆ. ಈ ಕೂಡಲೇ ಶಾಸಕರು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಷಣ್ಮುಖಣ್ಣ ಗುರಿಕಾರ, ಗುರುಶಿದ್ದಪ್ಪ ಕೊಪ್ಪದ, ಲೋಕನಾಥ ಹೆಬಸೂರು, ವಿ.ಪಿ. ಗುರಿಕಾರ, ಮಹಾದೇವಿ ಹುಯಿಳಗೊಳ, ಮಾಬುಸಾಬ್‌ ನವಲಗುಂದ, ಶಿವಶಂಕರ ಕಲ್ಲೂರು, ಬಸಪ್ಪ ಕರ್ಲವಾಡ, ನಿಂಗಪ್ಪ ಬಡೆಪ್ಪನವರ ಸೇರಿದಂತೆ ಹಲವರಿದ್ದರು.