ಸಾರಾಂಶ
ಹಾಸನಕ್ಕೂ ಬಂದ ವಕ್ಫ್ ಭೂತ । ಗೋಣಿಸೋಮನಹಳ್ಳಿ ಶಾಲೆ ಭೂಮಿ ದಾಖಲೆಗಳಲ್ಲಿ ಉಲ್ಲೇಖ । ಇಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಳೆಬೀಡುಹಳೆಬೀಡು ಹೋಬಳಿಯ ಗೋಣಿಸೋಮನಹಳ್ಳಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆ ಆಸ್ತಿ ಸರ್ವೆ ನಂ ೪೩೫ರಲ್ಲಿ ವಕ್ಫ್ ಹೆಸರು ಸೇರ್ಪಡೆ ಕಂಡು ಬಂದಿರುವುದರಿಂದ ಬೇಲೂರು ತಾಲೂಕ ಮಟ್ಟದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಆಕ್ರೋಶ, ಭಾರಿ ಪ್ರತಿಭಟನೆ ನಡೆಯಲಿದೆ ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ಹಳೆಬೀಡಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋಣಿ ಸೋಮನಹಳ್ಳಿ ಭೂದಾನ ಮಾಡಿದ ಶಾಲೆಯ ಆಸ್ತಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದಕ್ಕೆ ವಕ್ಫ್ ಸಚಿವ ಜಮೀರ್ ಅಹ್ಮದ್ ಪಿತೂರಿ ಕಾರಣವಾಗಿದೆ. ಮುಖ್ಯಮಂತ್ರಿ ಕುಮ್ಮಕ್ಕಿನಿಂದಲೇ ಬಿಜಾಪುರದಿಂದ ಹಿಡಿದು ಹಾಸನ ಜಿಲ್ಲೆಯ ಬೇಲೂರು ತಾಲೂಕಿಗೆ ಕಾಲಿಟ್ಟಿದೆ. ಆದ್ದರಿಂದ ನ.6 ಸರ್ಕಾರದ ವಿರುದ್ಧ ತಾಲೂಕು ಕಚೇರಿಯ ಮುಂದೆ ೧೧ ಗಂಟೆಗೆ ನೂರಾರು ರೈತ ಮುಖಂಡರು ಹಾಗೂ ಸಾವಿರಾರು ರೈತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.ಮುಖ್ಯಮಂತ್ರಿ ಕುಮ್ಮಕ್ಕೇ ಕಾರಣ:
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಎಲ್ಲಾ ಅವಾಂತರಗಳಿಗೂ ಮೂಲ ಕಾರಣ. ಯಾರ ಕುಟುಂಬ ಹಾಗೂ ಸಮುದಾಯವನ್ನು ಓಲೈಸಲು ಈ ರೀತಿಯ ಕೆಟ್ಟ ರಾಜಕಾರಣ ಮಾಡಿ ರೈತರನ್ನು ಬೀದಿಗೆ ತಂದಿದ್ದಾರೆ. ರೈತರ ಜಮೀನು, ಮಠದ ಜಮೀನು, ದೇವಸ್ಥಾನದ ಜಾಗ ಮಾತ್ರವಲ್ಲದೆ ಈಗ ಶಾಲೆ, ದೇಗುಲಕ್ಕೂ ಕಾಲಿಟ್ಟು ಶಾಲೆಗೆ ದಾನ ನೀಡಿರುವ ಶಾಲೆಯ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದಕ್ಕೆ ಮುಖ್ಯಮಂತ್ರಿಯೇ ಕಾರಣ ಎಂದು ಕಿಡಿಕಾರಿದರು.ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ ೪೩೫ ರ ಪಹಣಿಯಲ್ಲಿ ೩೮ ಗುಂಟೆ ಜಾಗವನ್ನು ಶಾಲೆಗೆ ಭೂದಾನ ಎಂದಿತ್ತು. ಆದರೆ ಇತ್ತೀಚೆಗೆ ಶಾಲೆ ಹಾಗೂ ಶಾಲೆಯ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಶಾಲೆಗೆಂದು ಮೀಸಲಿಟ್ಟ ಸ್ಥಳವನ್ನೇ ವಕ್ಫ್ ಆಸ್ತಿಯಾಗಿ ಬದಲಾವಣೆಗೊಂಡಿದೆ. ಇನ್ನು ಸಾಮಾನ್ಯ ರೈತರ ಆಸ್ತಿ ಏನಾಗಿರಬಹುದು ಎಂಬುದು ನಿಜಕ್ಕೂ ಆತಂಕ ಉಂಟುಮಾಡಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಹಣಿ ಪರೀಕ್ಷಿಸಿಕೊಳ್ಳಿ:ಈಗಾಗಲೇ ಸರ್ಕಾರ ರೈತರ ಜಮೀನನ್ನು ವಕ್ಫ್‌ಗೆ ಬರೆದುಕೊಡಲು ಹುನ್ನಾರ ನಡೆಸುತ್ತಿದ್ದು ದಯಮಾಡಿ ರೈತರು ತಮ್ಮ ತಮ್ಮ ಜಮೀನಿನ ಪಹಣಿಯನ್ನು ಪರೀಕ್ಷಿಸಬೇಕು. ಅಂತಹ ಪ್ರಕರಣಗಳು ಕಂಡು ಬಂದಿದ್ದಲ್ಲಿ ಎಚ್ಚೆತ್ತುಕೊಳ್ಳಿ. ಜತೆಗೆ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ನಮ್ಮ ಗಮನಕ್ಕೆ ತೆಗೆದುಕೊಂಡು ಬನ್ನಿ. ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.
ಗೆಜೆಟ್ ನೋಟಿಫಿಕೇಶನ್ ತೆಗೆದುಹಾಕಿ:ಕೇವಲ ಉಪಚುನಾವಣೆಯ ಕಾರಣದಿಂದ ರೈತರಿಗೆ ನೀಡಿದ ನೋಟಿಸ್ ಅನ್ನು ಸರ್ಕಾರ ವಾಪಸ್ ಪಡೆದಿದೆ. ಆದರೆ ಇದು ರೈತರ ಕಣ್ಣೊರೆಸುವ ತಂತ್ರ. ಈ ಬಗ್ಗೆ ಆಗಿರುವ ಗೆಜೆಟ್ ನೋಟಿಫಿಕೇಶನ್ ರದ್ದುಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹವನ್ನು ಕೂಡ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಹಿಂದುಗಳಿಗೆ ಭದ್ರತೆ ಇಲ್ಲ:ಲಜ್ಜೆಗೆಟ್ಟ, ಮಾನ, ಮರ್ಯಾದೆ ಇಲ್ಲದ ಈ ಸರ್ಕಾರ ಯಾವುದೋ ಒಂದು ಕೋಮಿನ ಜನರ ಓಲೈಕೆಗಾಗಿ ಈ ಎಲ್ಲಾ ಕಸರತ್ತು ಮಾಡುತ್ತಿದೆ. ಇದರಿಂದ ಹಿಂದೆ ದೊಡ್ಡ ಹುನ್ನಾರವೇ ಅಡಗಿದೆ. ಈ ಕಾರಣಕ್ಕಾಗಿ ಹಿಂದೂಗಳಿಗೆ ಭದ್ರತೆ ಇಲ್ಲದಂತಾಗಿದೆ. ವಂಶ ಪಾರಂಪರ್ಯವಾಗಿ ಬಂದಿರುವ ಆಸ್ತಿಗಳನ್ನು ಅವರ ಪಹಣಿಗಳನ್ನ ಒಳಗೆಯೇ ಬದಲಾವಣೆ ಮಾಡುವ ಹುನ್ನಾರ ಮಾಡಿದ್ದಾರೆ. ಇದು ಹಿಂದೂಗಳಿಗೆ ರಕ್ಷಣೆ ಇಲ್ಲದ ನಾಚಿಕೆಗೇಡಿನ ಸರ್ಕಾರವಾಗಿದೆ. ಇದೇ ರೀತಿ ಮುಂದುವರಿದರೆ ಸರ್ಕಾರ ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ತಿಳಿಸಿದರು.
ಬೇಲೂರು ತಾಲೂಕು ಬಿಜೆಪಿ ಅಧ್ಯಕ್ಷ ಸಂಜಯ್ ಕೌರಿ ,ವೀರಶೈವ ಯುವ ಘಟಕದ ಅಧ್ಯಕ್ಷ ಚೇತನ್, ವಿನಯ್ ರಂಜಿತ್, ರೈತ ಸಂಘದ ಮಹೇಶ್ ಹಾಜರಿದ್ದರು.