ಸಾರಾಂಶ
ಚಿತ್ರನಟ, ಮಾಜಿ ಸಂಸದ ದಿ.ರೆಬಲ್ ಸ್ಟಾರ್ ಅಂಬರೀಶ್ ಅವರು ಮಾನವೀಯತೆಯ ಬಹುದೊಡ್ಡ ಗುಣ ಹೊಂದಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಿತ್ರನಟ, ಮಾಜಿ ಸಂಸದ ದಿ.ರೆಬಲ್ ಸ್ಟಾರ್ ಅಂಬರೀಶ್ ಅವರು ಮಾನವೀಯತೆಯ ಬಹುದೊಡ್ಡ ಗುಣ ಹೊಂದಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಅಭಿಪ್ರಾಯಪಟ್ಟರು. ನಗರದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಚೇರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ದಿ.ಅಂಬರೀಶ್ ಅವರ 72 ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಕಲಾವಿದರಾಗಿದ್ದು, ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಚಿತ್ರರಂಗ ಅಲ್ಲದೇ ಉತ್ತಮ ರಾಜಕಾರಣಯಾಗಿದ್ದು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಸಮಾಜಕ್ಕಾಗಿ ದುಡಿದವರು ಹಾಗೂ ಉತ್ತಮ ಕಲಾವಿದರ ಹೆಸರುಗಳನ್ನು ರಸ್ತೆಗೆ ನಾಮಕರಣ ಮಾಡಬೇಕು. ಅಂತೆಯೇ ರೆಬಲ್ ಸ್ಟಾರ್ ಅಂಬರೀಶ್ ಅವರ ಹೆಸರನ್ನು ನಗರದ ಪ್ರಮುಖ ರಸ್ತೆಗೆ ನಾಮಕರಣ ಮಾಡುವ ಕೆಲಸ ಆಗಬೇಕು. ಕಲಾವಿದರನ್ನು ಗೌರವಿಸಿದರೆ ಸಮಾಜದ ಗೌರವ ಹೆಚ್ಚಾಗುತ್ತದೆ. ಇಲ್ಲದಿದ್ದರೆ ಮಾನವೀಯ ಗುಣ, ಸಂಸ್ಕಾರ, ಸಂಸ್ಕೃತಿ ಗುಣ ನಾಶವಾಗುತ್ತದೆ ಎಂದರು. ಕನ್ನಡ ಸಂಘಟನೆಗಳ ಒಕ್ಕೂಟದಿಂದ ಚಾಮರಾಜನಗರದಲ್ಲಿ 1996ರಲ್ಲಿ ಅಂಬರೀಷ್ ಅವರ ಚಲನಚಿತ್ರ ಕೊಡುಗೆಯ 25ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಬೃಹತ್ ಮೆರವಣಿಗೆ ಹಾಗೂ ಬೆಳ್ಳಿ ಕಿರೀಟ ಧಾರಣೆ ಮಾಡಿ ಗಡಿ ಭಾಗದ ಕನ್ನಡಿಗರ ಪರವಾಗಿ ಗೌರವ ಸಲ್ಲಿಸಲಾಗಿತ್ತು ಎಂದರು.ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿ. ಅಂಬರೀಶ್ ಅವರು ಹೃದಯವಂತ ಕಲಾವಿದರಾಗಿದ್ದರು. ಖಳನಾಯಕನಾಗಿ, ಪೋಷಕ ನಟನಾಗಿ, ನಾಯಕ ನಟನಾಗಿ, ಉತ್ತಮ ರಾಜಕಾರಣಿಯಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅಂಬರೀಶ್ ಅವರ ಭಾವಚಿತ್ರ ಪುಷ್ಷಾರ್ಚನೆ ಮಾಡಿ, ಮಾತನಾಡಿ, ಅಂಬರೀಶ್ ಅವರು ಸರಳ ವ್ಯಕ್ತಿತ್ವ ಹೊಂದಿದ್ದರು. ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಹೊಂದಿದ್ದರು. ಕಾವೇರಿ ವಿಚಾರದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂಬರೀಶ್, ನಾಡಕಂಡ ಅಭೂತಪೂರ್ವ ಕಲಾವಿದರು, ರಾಜಕಾರಣಿಯಾಗಿದ್ದರು ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಎಸ್.ಸುರೇಶ್ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಣ್ಯದಹುಂಡಿ ರಾಜು, ಶಿಕ್ಷಕ ರಂಗನಾಥ್, ನಗರಸಭಾ ಮಾಜಿ ಅಧ್ಯಕ್ಷ ಮಹದೇವನಾಯಕ, ಶ್ರೀಗಂಧ ಕನ್ನಡ ಯುವ ವೇದಿಕೆ ಅಧ್ಯಕ್ಷ ರವಿಚಂದ್ರಪ್ರಸಾದ್ ಕಹಳೆ, ಪ್ರಕಾಶ್, ಶಿವಲಿಂಗಮೂರ್ತಿ, ತಾಂಡವಮೂರ್ತಿ, ನಂಜುಂಡಶೆಟ್ಟಿ, ಅರುಣ್ ಕುಮಾರ್ ಗೌಡ ಇತರರು ಹಾಜರಿದ್ದರು.