45 ವರ್ಷದಿಂದ ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ಮಾಡಲಾಗುತ್ತಿದೆ. ಇದರಲ್ಲಿ ಬರೀ ರಾಜಕಾರಣ ಮಾಡಲಾಗುತ್ತಿದೆಯೇ ಹೊರತು ರೈತರ ಹಿತ ಕಾಪಾಡುತ್ತಿಲ್ಲ. ಕೇಂದ್ರ ಸಚಿವರಾದ ಸಿ.ಆರ್. ಪಾಟೀಲ, ರಾಜಭೂಷಣ ಚೌಧರಿ ಹಾಗೂ ವಿ. ಸೋಮಣ್ಣ ಅವರು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ.
ಹುಬ್ಬಳ್ಳಿ:
ಕಳಸಾ-ಬಂಡೂರಿ ಮಹದಾಯಿ ಯೋಜನೆ ಜಾರಿ ಹಾಗೂ ರಾಜ್ಯದ 5 ವಿಮಾನ ನಿಲ್ದಾಣಗಳಿಗೆ ಕನ್ನಡದ ಮಹನೀಯರ ಹೆಸರಿಡಲು ಒತ್ತಾಯಿಸಿ ಶನಿವಾರ ನಗರದಲ್ಲಿ ಕನ್ನಡಿಗ ಮಹನೀಯರ ನಾಮಕರಣ ಚಳವಳಿ ಸಮಿತಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಧಾರವಾಡ ಜಿಲ್ಲಾ ಸಮಿತಿ ಪದಾಧಿಕಾರಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಪದಾಧಿಕಾರಿಗಳು, ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದರು. ಬಳಿಕ ಟ್ರ್ಯಾಕ್ಟರ್ ಹಾಗೂ ಚಕ್ಕಡಿ, ವಿವಿಧ ವಾದ್ಯಮೇಳಗಳೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
45 ವರ್ಷದಿಂದ ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ಮಾಡಲಾಗುತ್ತಿದೆ. ಇದರಲ್ಲಿ ಬರೀ ರಾಜಕಾರಣ ಮಾಡಲಾಗುತ್ತಿದೆಯೇ ಹೊರತು ರೈತರ ಹಿತ ಕಾಪಾಡುತ್ತಿಲ್ಲ. ಕೇಂದ್ರ ಸಚಿವರಾದ ಸಿ.ಆರ್. ಪಾಟೀಲ, ರಾಜಭೂಷಣ ಚೌಧರಿ ಹಾಗೂ ವಿ. ಸೋಮಣ್ಣ ಅವರು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಈ ಕೂಡಲೇ ಪ್ರಧಾನಿಗಳು ಇವರ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದರು.ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ವಿಜಯಪುರದ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹಾಗೂ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಡಾ. ರಾಜಕುಮಾರ್ ಹೆಸರಿಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈ ವಿಷಯಗಳಿಗೆ ಸಂಬಂಧಿಸಿದಂತೆ ತುರ್ತು ಅಧಿಕಾರಿಗಳ ಸಭೆ ನಡೆಸಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಮನ್ಸೂರಿನ ಶ್ರೀರೇವಣಸಿದ್ದೇಶ್ವರ ಮಠದ ಬಸವರಾಜ ದೇವರು, ಮುಖಂಡರಾದ ಅಡಿವೆಪ್ಪ ಶಿವಳ್ಳಿ, ನೂಲ್ವಿ ಚಂದ್ರಣ್ಣ ಗೋಕಾಕ, ಮಲ್ಲಿಕಾರ್ಜುನ ಕುನ್ನೂರ, ಮಲ್ಲಿಕಾರ್ಜುನ ತಾಲೂರ, ಯಲ್ಲಪ್ಪ ಕುಂದಗೋಳ, ಬಸವರಾಜ ಅಗಸಿಮನಿ, ಚಂದ್ರಣ್ಣ ಕುರುಬರ ಸೇರಿದಂತೆ ಹಲವರಿದ್ದರು.
ಸೆ. 13ರಂದು 4ನೇ ಹಂತದ ಹೋರಾಟಈ ವೇಳೆ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಮಾತನಾಡಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಹಾಗೂ ಐದು ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರು ನಾಮಕರಣಗೊಳಿಸಲು ಒತ್ತಾಯಿಸಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಈ ಹಿಂದೆ 2 ಬಾರಿ ಮನವಿ ಸಲ್ಲಿಸಲಾಗಿದೆ. ಈಗ 3ನೇ ಹಂತದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುತ್ತಿದೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ಸೆ. 13ರಂದು 4ನೇ ಹಂತದ ಹೋರಾಟಕ್ಕೆ ನಿರ್ಧರಿಸಲಾಗಿದೆ. ಅಂದು ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ನೂರಾರು ಶ್ರೀಗಳು, ಹಲವು ಚಿತ್ರನಟರ ನೇತೃತ್ವದಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರನ್ನು ಒಗ್ಗೂಡಿಸಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.