ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿರುವ ವಿವಿಧ ಸರ್ಕಾರಿ ಸೇರಿದಂತೆ ಖಾಸಗಿ ಸಂಸ್ಥೆಗಳ ಕಚೇರಿಗಳು, ಶಾಲೆಗಳು, ಆಸ್ಪತ್ರೆ ಹಾಗೂ ಅಂಗಡಿಗಳ ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕವನ್ನು ಅಳವಡಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಟಿ.ಭೂಬಾಲನ್ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಜೊತೆಗೆ ಜಾಗೃತಿ ಜಾಥಾ ನಡೆಸಿದರು.ನಗರದ ಸೋಲಾಪುರ ರಸ್ತೆಯಲ್ಲಿರುವ ಬಂಜಾರಾ ಕ್ರಾಸ್‌ನಿಂದ ಆರಂಭವಾದ ಜಾಗೃತಿ ಜಾಥಾ, ಶಿವಾಜಿ ಸರ್ಕಲ್ ಮಾರ್ಗವಾಗಿ ಗಾಂಧಿ ವೃತ್ತದವರೆಗೂ ಸಂಚರಿಸಿತು. ಜಾಥಾದ ವೇಳೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಆದೇಶದಂತೆ ನಾಮಫಲಕಗಳು ಶೇ.೬೦ರಷ್ಟು ಕನ್ನಡ ಭಾಷೆಯನ್ನೇ ಒಳಗೊಂಡಿರಬೇಕು. ಉಳಿದ ಶೇ.೪೦ರಷ್ಟು ಬೇರೆ ಬೇರೆ ಭಾಷೆಗಳನ್ನು ಬಳಸಲು ಅವಕಾಶವಿದೆ. ಅಕ್ಟೋಬರ್ ೩೦ರೊಳಗೆ ಜಿಲ್ಲೆಯ ಎಲ್ಲ ನಾಮಫಲಕಗಳು ಕನ್ನಡ ಭಾಷೆಯನ್ನು ಒಳಗೊಂಡಿರಬೇಕು. ಅ.೩೧ರ ನಂತರ ಕನ್ನಡ ಭಾಷೆಯನ್ನು ಒಳಗೊಳ್ಳದಿರುವ ನಾಮಫಲಕಗಳನ್ನು ಮುಟ್ಟುಗೊಲು ಹಾಕಿಕೊಂಡು ಸಂಬಂಧಿಸಿದ ಅಂಗಡಿ, ಸಂಸ್ಥೆಗಳ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕನ್ನಡ ನಾಮಫಲಕಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಳಿಗಾಗಿ ಯಾವುದೇ ಕೈಗಾರಿಕಾ, ಅಂಗಡಿ, ವಾಣಿಜ್ಯ ಸಂಸ್ಥೆಯ ಮಾಲೀಕರಿಗೆ ಮೊದಲನೇ ಬಾರಿಯ ಅಪರಾಧಕ್ಕಾಗಿ ₹೫,೦೦೦ ದಂಡ, ನಂತರದ ಎರಡನೇ ಬಾರಿಯ ಅಪರಾಧಕ್ಕಾಗಿ ₹ ೧೦,೦೦೦ ದವರಗೆ ವಿಸ್ತರಿಸಬುಹುದಾದ ದಂಡ, ನಂತರ ಪ್ರತಿಯೊಂದು ಅಪರಾಧಕ್ಕಾಗಿ ₹ ೨೦,೦೦೦ ರವಗೆಗೆ ದಂಡ ಮತ್ತು ಪರವಾನಗಿ ರದ್ದುಪಡಿಸಲಾಗುತ್ತದೆ ಎಂಬುದರ ಬಗ್ಗೆ ಈ ವೇಳೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಈ ವೇಳೆ ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ ಅಕ್ಟೋಬರ್ ೩೧ರ ಒಳಗೆ ಕನ್ನಡ ಭಾಷೆಯ ನಾಮಫಲಕ ಅಳವಡಿಸಬೇಕು ಎಂದು ಸೂಚನೆ ನೀಡಿದರು.ಜಾಥಾದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಗುಣಾರಿ, ನಗರಾಭಿವೃದ್ಧಿ ಇಲಾಖೆ ಆಯಕ್ತ ರಾಜಶೇಖರ ಡಂಬಳ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ, ಜಿಲ್ಲಾ ಪಂಚಾಯತಿ ಯೋಜನಾ ಅಧಿಕಾರಿ ನಿಂಗಪ್ಪ ಗೋಠೆ, ಪ್ರವಾಸೋಧ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ.ಎಲ್, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ್, ಸೈನಿಕ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವಿನುತಾ, ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ್ ಮಾನವರ, ಪಿಯುಸಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ. ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೋಟ್ಕನ್ನಡ ನಾಮಫಲಕ ನಿಯಮ ಉಲ್ಲಂಘನೆಗಾಗಿ ಯಾವುದೇ ಕೈಗಾರಿಕಾ, ಅಂಗಡಿ, ವಾಣಿಜ್ಯ ಸಂಸ್ಥೆಯ ಮಾಲೀಕರಿಗೆ ಮೊದಲನೇಯ ಬಾರಿ ಅಪರಾಧಕ್ಕಾಗಿ ₹ ೫,೦೦೦ ದಂಡ, ಎರಡನೇ ಬಾರಿ ಅಪರಾಧಕ್ಕಾಗಿ ₹ ೧೦,೦೦೦ ವಿಸ್ತರಿಸಬುಹುದಾದ ದಂಡ, ನಂತರ ಪ್ರತಿ ಅಪರಾಧಕ್ಕಾಗಿ ₹ ೨೦,೦೦೦ ರವಗೆಗೆ ದಂಡ ಮತ್ತು ಪರವಾನಗಿ ರದ್ದುಪಡಿಸಲಾಗುತ್ತದೆ. ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ ಅಕ್ಟೋಬರ್ ೩೧ರೊಳಗೆ ಕನ್ನಡ ನಾಮಫಲಕ ಅಳವಡಿಸಬೇಕು.
ಟಿ.ಭೂಬಾಲನ್, ಜಿಲ್ಲಾಧಿಕಾರಿ