ಮತ್ತೆ ಮೆಟ್ರೋ ಸಂಚಾರ ವ್ಯತ್ಯಯ: ಪ್ರಯಾಣಿಕರ ಆಕ್ರೋಶ

| Published : Feb 21 2024, 02:07 AM IST / Updated: Feb 21 2024, 01:23 PM IST

ಸಾರಾಂಶ

ಮೆಟ್ರೋ ಸಂಚಾರ ವ್ಯತ್ಯಯವಾದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, 3 ಗಂಟೆ ಸಮಸ್ಯೆಯಾಗಿ ಸಾವಿರಾರು ಪ್ರಯಾಣಿಕರ ಪರದಾಟ ನಡೆಸಿದರು. ಸಿಗ್ನಲಿಂಗ್‌ ಸಿಸ್ಟಮ್‌ನಲ್ಲಿ ಸಂವಹನ ತೊಡಕಿಂದ ಸಮಸ್ಯೆ ಉಂಟಾಗಿದೆ ಎಂದು ಬಿಎಂಆರ್‌ಸಿಎಲ್‌ ಸ್ಪಷ್ಟನೆ ನೀಡಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ನಮ್ಮ ಮೆಟ್ರೋ’ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸೋಮವಾರ ಪುನಃ ರೈಲುಗಳ ಸಂಚಾರದಲ್ಲಿ ಮೂರು ಗಂಟೆ ವ್ಯತ್ಯಯ ಉಂಟಾಗಿ ಸಾವಿರಾರು ಪ್ರಯಾಣಿಕರು ಪರದಾಡಿದರು. 

ಮೆಟ್ರೋದಲ್ಲಿ ಮೇಲಿಂದ ಮೇಲೆ ಉಂಟಾಗುತ್ತಿರುವ ಸಂಚಾರ ಸಮಸ್ಯೆಗೆ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗ್ಗೆ 6.15ರ ಸುಮಾರಿಗೆ ‘ಬೈಯಪ್ಪನಹಳ್ಳಿ ಹಾಗೂ ಗರುಡಾಚಾರ್‌ ಪಾಳ್ಯ’ ನಿಲ್ದಾಣಗಳ ನಡುವೆ ಸಿಗ್ನಲಿಂಗ್‌ ಸಿಸ್ಟಮ್‌ನಲ್ಲಿ ಸಂವಹನ ತೊಡಕುಂಟಾಯಿತು. ಇದರಿಂದ ವಿವಿಧ ಡೇಟಾ ಪ್ರಕಾರಗಳಿಗೆ ನೈಜ-ಸಮಯದ ಸ್ಥಿತಿ ನವೀಕರಣಗಳು ಲಭ್ಯವಾಗಲಿಲ್ಲ. 

ಹೀಗಾಗಿ ಮೆಟ್ರೋ ರೈಲುಗಳು ಬೆಳಗ್ಗೆ 9.30ರ ಪೀಕ್‌ ಅವರ್‌ವರೆಗೆ ತೀರಾ ನಿಧಾನಗತಿಯಲ್ಲಿ ಸಂಚರಿಸಿದ ಪರಿಣಾಮ ಶಾಲೆ, ಕಾಲೇಜು, ಕಚೇರಿ, ಮನೆಗಳತ್ತ ಹೊರಟಿದ್ದ ಸಾವಿರಾರು ಜನ ಪ್ರಯಾಣಿಕರು ತೊಂದರೆ ಅನುಭವಿಸಿದರು. 

ಇಂಟರ್‌ ಚೇಂಜ್‌ ನಿಲ್ದಾಣ ಮೆಜಸ್ಟಿಕ್‌ನಲ್ಲಂತೂ ಪ್ರಯಾಣಿಕರು ತುಂಬು ತುಳುಕಿದರು. ಬೈಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ರಸ್ತೆ ನಿಲ್ದಾಣ ಸೇರಿ ನೇರಳೆ ಮಾರ್ಗದ ಬಹುತೇಕ ಎಲ್ಲ ನಿಲ್ದಾಣಗಳಲ್ಲಿ ರೈಲಿಗಾಗಿ ಕಾದು ಪ್ರಯಾಣಿಕರು ಸುಸ್ತಾದರು. ಇದರ ಪರಿಣಾಮ ಹಸಿರು ಮಾರ್ಗದಲ್ಲೂ ಸಂಚಾರ ದಟ್ಟಣೆ ಉಂಟಾಯಿತು.

ಬಿಎಂಆರ್‌ಸಿಎಲ್‌ ನಿರ್ಲಕ್ಷ್ಯ: ಸಮಸ್ಯೆ ಬಗ್ಗೆ 8.48ರ ಹೊತ್ತಿಗೆ ಬಿಎಂಆರ್‌ಸಿಎಲ್‌ ಸಮಸ್ಯೆ ಬಗ್ಗೆ ಅಧಿಕೃತವಾಗಿ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಮಾಹಿತಿ ನೀಡಿತು. 9.20ರ ಸುಮಾರಿಗೆ ತಾಂತ್ರಿಕ ತೊಂದರೆ ನಿವಾರಿಸಿಕೊಂಡು 9.22ರಿಂದ ಸಹಜ ರೀತಿಯಲ್ಲಿ ಮೆಟ್ರೋ ರೈಲುಗಳ ಸಂಚಾರ ಪ್ರಾರಂಭವಾಯಿತು.

ತೀವ್ರ ಜನದಟ್ಟಣೆ ಉಂಟಾಗಿದ್ದ ಕಾರಣ 10 ಗಂಟೆ ನಂತರವೂ ನಿಲ್ದಾಣ, ರೈಲುಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ನೀಡದೆ ಟಿಕೆಟ್‌ ವಿತರಿಸುತ್ತಿದ್ದ ಬಗ್ಗೆಯೂ ಜನತೆ ಅಸಮಾಧಾನ ವ್ಯಕ್ತಪಡಿಸಿದರು. 

ಜೊತೆಗೆ ಆ್ಯಪ್‌ನಲ್ಲಿ ಕ್ಯೂಆರ್‌ ಕೋಡ್‌ ಟಿಕೇಟ್‌ ಖರೀದಿ ವೇಳೆಯೂ ಈ ಸಂಬಂಧ ಮಾಹಿತಿ ಇರಲಿಲ್ಲ ಎಂದು ಕಿಡಿಕಾರಿದರು. ‘ಎಕ್ಸ್’ನಲ್ಲಿ ಸಾಕಷ್ಟು ಪ್ರಯಾಣಿಕರು ದಟ್ಟಣೆ ಬಗ್ಗೆ ಫೋಟೋ ಹಂಚಿಕೊಂಡು ಬಿಎಂಆರ್‌ಸಿಎಲ್‌ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.

ಪ್ರಯಾಣ ಮುಂದುವರಿಸಲೂ ಆಗದೇ, ಹೊರಗೆ ಬರಲೂ ಆಗದೇ ಪ್ರಯಾಣಿಕರು ಪೇಚಾಡಿದರು. 15-20 ನಿಮಿಷಕ್ಕೊಂದು, ಅರ್ಧ ಗಂಟೆಗೊಂದು ರೈಲುಗಳು ಬರುತ್ತಿವೆ. ಮುಂಜಾನೆ 8 ಗಂಟೆಗೆ ಬಂದವರು 9.30 ಆದರೂ ಇನ್ನೂ ನಿಲ್ದಾಣದಲ್ಲೆ ಇದ್ದೇವೆ ಎಂದು ಪ್ರಯಾಣಿಕರು ಹೇಳಿದರು.

ಈ ನಡುವೆ ಇಪ್ಪತ್ತಕ್ಕೂ ಹೆಚ್ಚಿನ ರೈಲುಗಳ ಸಂಚಾರ ವ್ಯತ್ಯಯವಾಗಿತ್ತು. ಮೂರು ಶಾರ್ಟ್‌ಲೂಪ್‌ ರೈಲುಗಳನ್ನು ಸಂಚರಿಸುವ ಮೂಲಕ ಬಿಎಂಆರ್‌ಸಿಎಲ್‌ ತೊಂದರೆ ನಿಯಂತ್ರಕ್ಕೆ ಪ್ರಯತ್ನಿಸಿತು.ಮೇಲಿಂದ ಮೇಲೆ ಪರದಾಟ

ಎರಡು ದಿನಗಳ ಹಿಂದಷ್ಟೇ ಚಲ್ಲಘಟ್ಟ-ಕೆಂಗೇರಿ ನಡುವೆ ಟ್ರ್ಯಾಕ್‌ನಲ್ಲಿ ಮೆಟ್ರೋ ರೈಲು ನಿಂತು ಪ್ರಯಾಣಿಕರು ಗಾಬರಿಪಡುವಂತಾಗಿತ್ತು ಎಂದು ಬಿಎಂಆರ್‌ಸಿಎಲ್‌ ಎಂಪ್ಲಾಯೀಸ್‌ ಯೂನಿಯನ್‌ ತಿಳಿಸಿದೆ. 

ಜ.27ರಂದು ವಿದ್ಯುತ್ ಪೂರೈಕೆ ವ್ಯತ್ಯಯದಿಂದಾಗಿ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ಡಿಸೆಂಬರ್‌ನಲ್ಲಿಯೂ ಇದೇ ಸಮಸ್ಯೆ ಉಂಟಾಗಿತ್ತು. ಅ.3ರಂದು ರಾಜಾಜಿನಗರ ಬಳಿ ರೋಡ್ ಕಂ ರೈಲ್‌ ವೆಹಿಕಲ್‌ ಸಿಲುಕಿ ಹಸಿರು ಮಾರ್ಗದಲ್ಲಿ ವ್ಯತ್ಯಯ ಉಂಟಾಗಿತ್ತು.

ಟ್ರ್ಯಾಕ್‌, ಸಿಗ್ನಲಿಂಗ್‌ನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವುದೇ ಆಗಾಗ ಸಮಸ್ಯೆ ಎದುರಾಗಲು ಕಾರಣವಾಗಿದೆ. ಬೈಯಪ್ಪಹಳ್ಳಿ-ವೈಟ್‌ಫೀಲ್ಡ್‌ನಲ್ಲಿ ಕೋಟ್ಯಂತರ ರುಪಾಯಿ ವ್ಯಯಿಸಿ ಹೊಸದಾಗಿ ಅಳವಡಿಸಿದ ಸಿಗ್ನಲಿಂಗ್‌ ತೊಂದರೆ ಎದುರಾಗುತ್ತಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆಯಾಗಲಿ - ಸೂರ್ಯನಾರಾಯಣಮೂರ್ತಿ. ಬಿಎಂಆರ್‌ಸಿಎಲ್‌ ಎಂಪ್ಲಾಯೀಸ್‌ ಯೂನಿಯನ್‌ ಅಧ್ಯಕ್ಷ

ಪ್ರತಿ ತಿಂಗಳು ಒಂದೆರಡು ದಿನ ಬೆಳಗ್ಗೆ ಮೆಟ್ರೋದಲ್ಲಿ ಈ ರೀತಿಯ ಸಮಸ್ಯೆ ಎದುರಿಸಿರುವುದು ಸಾಮಾನ್ಯ ಎನ್ನುವಂತಾಗಿದೆ. ಹೀಗೆ ಮುಂದುವರಿದರೆ ನಮ್ಮ ಮೆಟ್ರೋ ಕೂಡ ವಿಶ್ವಾಸಾರ್ಹತೆ ಕಳೆದುಕೊಳ್ಳಲಿದೆ - ವಿಶಾಲ್‌, ಟೆಕ್ಕಿ