ಸಾರಾಂಶ
ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಾಗೂ ಪುಷ್ಪ ನರ್ಸಿಂಗ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ ಹೆಣ್ಣು ಮಗು ಮನೆಯ ನಂದಾದೀಪವಾಗಿದ್ದು ಹೆಣ್ಣು ಮಗು ಹುಟ್ಟಿದಾಗ ಕುಟುಂಬದ ಎಲ್ಲರೂ ಸಂಭ್ರಮ ಪಡಬೇಕು ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಹೆಣ್ಣು ಮಗು ಮನೆಯ ನಂದಾದೀಪವಾಗಿದ್ದು ಹೆಣ್ಣು ಮಗು ಹುಟ್ಟಿದಾಗ ಕುಟುಂಬದ ಎಲ್ಲರೂ ಸಂಭ್ರಮ ಪಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ತಿಳಿಸಿದರು.
ಗುರುವಾರ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಾಗೂ ಪುಷ್ಪ ನರ್ಸಿಂಗ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು. ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದ್ದು, ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದ ಯಶಸ್ಸಿನಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಭ್ರೂಣ ಲಿಂಗ ಪತ್ತೆ ಮಾಡಿ ಭ್ರೂಣ ಹತ್ಯೆ ಮಾಡುವಂತಹ ಕೆಲಸ ಯಾರೂ ಮಾಡಬಾರದು. ಹೆಣ್ಣು ಕುಟುಂಬದ ಕಣ್ಣಾಗಿದ್ದು ಅದನ್ನು ಪೋಷಿಸುವ ಹೊಣೆಗಾರಿಕೆ ಸಮಾಜದ ಎಲ್ಲರ ಮೇಲಿದೆ. ರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಮೂರು ಮುಖ್ಯ ಗುರಿಯೊಂದಿಗೆ ಆಚರಿಸಲಾಗುತ್ತಿದ್ದು ಲಿಂಗ ತಾರತಮ್ಯ ಹೋಗಲಾಡಿಸುವುದು, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಅರಿವು ಮೂಡಿಸುವುದು ಹಾಗೂ ಹೆಣ್ಣು ಮಗುವಿಗೆ ಆರೋಗ್ಯ ಶಿಕ್ಷಣ ಮತ್ತು ಪೌಷ್ಠಿಕತೆ ತುಂಬುವ ಗುರಿ ಹೊಂದಲಾಗಿದೆ. ಹೆಣ್ಣು ಮಗುವಿನ ರಕ್ಷಣೆಗೆ ಸರ್ಕಾರ ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಶಾಸನ ಜಾರಿಗೊಳಿಸಿದ್ದು ಎಲ್ಲರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಚಂದ್ರಪ್ರಭ ಮಾತನಾಡಿ, ಈ ವರ್ಷ ಹೆಣ್ಣು ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಈ ವರ್ಷ ಜ.24 ರಂದು ಜನ್ಮ ತಾಳಿದ ಹೆಣ್ಣು ಮಗು ಹಾಗೂ ತಾಯಿಯನ್ನು ಸನ್ಮಾನಿಸ ಲಾಗುತ್ತಿದೆ. ಹೆಣ್ಣನ್ನು ಗೌರವಿಸುವ, ಆದರಿಸುವ, ರಕ್ಷಿಸುವ ಮನೋಭಾವವನ್ನು ಎಲ್ಲರೂ ಬೆಳಿಸಿ ಕೊಳ್ಳಬೇಕು. ಹೆಣ್ಣು ಮಗುವಿನ ರಕ್ಷಣೆ ಎಲ್ಲರ ಜವಬ್ದಾರಿ ಎಂದರು.
ಜ. 24 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಣಂತಿಯರಾದ ಹರ್ಷಿತ, ಅನಿತ ಹಾಗೂ ಇಬ್ಬರ ಹೆಣ್ಣು ಮಗುವನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಡಾ.ಅಶ್ವಿನಿ, ಡಾ.ಶ್ವೇತ, ಡಾ.ಆಶಾ, ಪ್ರಾಥಮಿಕ ಆರೋಗ್ಯ ಹಿರಿಯ ಸುರಕ್ಷಣಾಧಿಕಾರಿ ಡೈಸಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು. ಸುಜಾತ ಸ್ವಾಗತಿಸಿದರು.ಚೈತ್ರಾ ವಂದಿಸಿದರು.