ನಂದಿಬೆಟ್ಟ ವಿಶ್ವಪಾರಂಪರಿಕ ತಾಣವನ್ನಾಗಿ ಘೋಷಿಸಿ

| Published : Jul 01 2025, 12:47 AM IST

ಸಾರಾಂಶ

ಪ್ರವಾಸಿಗರನ್ನು ಆಕರ್ಷಿಸಲು ಸರ್ಕಾರ ಕೈಗೆತ್ತಿಕೊಂಡಿರುವ ರೋಪ್ ವೇ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಂದಾಗಿ ನಂದಿ ಬೆಟ್ಟಕ್ಕೆ ತೀವ್ರ ಆಪತ್ತು ಎದುರಾಗಿದೆ. ನಂದಿ ಬೆಟ್ಟವು ಭೂ ತಾಯಿಯ ವಕ್ಷ ಸ್ಥಳವಾಗಿದ್ದು ಅದನ್ನು ಬಗೆದು ರೋಪ್ ವೇ ಮಾಡಿದಲ್ಲಿ, ಭೂಕುಸಿತವಾಗುವ ಆತಂಕವಿದೆ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

‘ಪಂಚ ನದಿಗಳ ಮೂಲವಾದ, ಭೌಗೋಳಿಕ ಪ್ರಾಮುಖ್ಯ ಹಾಗೂ ಜೀವವೈವಿಧ್ಯತೆ ಹೊಂದಿರುವ ನಂದಿ ಬೆಟ್ಟವನ್ನು ಉಳಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಈ ಬೆಟ್ಟಕ್ಕೆ ಹಾನಿ ಮಾಡಬಾರದು’ ಎಂದು ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಎಚ್ಚರಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ (ಯುಎಚ್‌ಆರ್‌ಎಸ್‌ಎಫ್) ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಂದಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇದೇ ವೇಳೆ ಪರಿಸರಕ್ಕೆ ಮಾರಕವಾದ ಚಟುವಟಿಕೆಗಳೂ ನಡೆಯುತ್ತಿವೆ ಎಂದರು.

ರೋಪ್ ವೇನಿಂದ ಆಪತ್ತು

ಪ್ರವಾಸಿಗರನ್ನು ಆಕರ್ಷಿಸಲು ಸರ್ಕಾರ ಕೈಗೆತ್ತಿಕೊಂಡಿರುವ ರೋಪ್ ವೇ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಂದಾಗಿ ನಂದಿ ಬೆಟ್ಟಕ್ಕೆ ತೀವ್ರ ಆಪತ್ತು ಎದುರಾಗಿದೆ. ನಂದಿ ಬೆಟ್ಟವು ಭೂ ತಾಯಿಯ ವಕ್ಷ ಸ್ಥಳವಾಗಿದ್ದು ಅದನ್ನು ಬಗೆದು ರೋಪ್ ವೇ ಮಾಡಿದಲ್ಲಿ, ಭೂಕುಸಿತವಾಗುವ ಆತಂಕವಿದೆ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ‘ಅಪಾಯದ ಅಂಚಿಗೆ ಸಿಲುಕಿರುವ ನಂದಿ ಬೆಟ್ಟದ ಬಗ್ಗೆ ವ್ಯಾಪಕ ಅಧ್ಯಯನ ಕೈಗೊಳ್ಳಲಾಗಿದೆ. ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ವಿಪರೀತ ಏರಿಕೆಯಾಗುತ್ತಿದ್ದು, ರೆಸಾರ್ಟ್‌ಗಳು ಹೆಚ್ಚಾಗುತ್ತಿರುವ ಜತೆಗೆ ಅಲ್ಲಿನ ಪ್ರಕೃತಿಯ ಸೊಬಗಿನ ಮೇಲೆ ಒತ್ತಡ ತೀವ್ರಗೊಂಡಿದೆ. ಇದರಿಂದಾಗಿ ನಿಸರ್ಗ ಮುನಿಸಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ರೋಪ್ ವೇ ಸೇರಿ ವಿವಿಧ ಅಭಿವೃದ್ದಿ ಚಟುವಟಿಕೆಗಳನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ವರದಿಗೆ ಸರ್ಕಾರ ಸ್ಪಂದಿಸುತ್ತಿಲ್ಲ

ನಂದಿ ಬೆಟ್ಟ ಉಳಿಸಿ ಎಂದು ಸರ್ಕಾರದ ವಿವಿಧ 11 ಇಲಾಖೆಗಳಿಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಆದರೆ, ಯಾವ ಇಲಾಖೆಯಿಂದಲೂ ನಮಗೆ ಪ್ರತಿಸ್ಪಂದನೆ ದೊರೆತಿಲ್ಲ. ಉಚ್ಚ ನ್ಯಾಯಾಲಯದಲ್ಲಿ ಸಹ ರೋಪ್ ವೇ ಬೇಡ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಸರ್ಕಾರಕ್ಕೆ ನ್ಯಾಯಾಲಯ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದರು.

ಇದೇ ಸಮಯದಲ್ಲಿ ರೊಪ್ ವೇ ನಿರ್ಮಿಸಲು ನಂದಿಗಿರಿಧಾಮದ ಮೇಲ್ಭಾಗದಲ್ಲಿ ಅರ್ಕಾವತಿ ನದಿ ಉಗಮ ಸ್ಥಾನದ ಬಳಿ ತೋಟಗಾರಿಕೆ ಇಲಾಖೆಯಿಂದ ಎರಡು ಎಕರೆ ಜಾಗ ಗುರ್ತಿಸಿ ಸರ್ವೆ ಮಾಡಲು ಅನುಮೋದಿಸಿದೆ. ಅರ್ಕಾವತಿ ಉಗಮ ಸ್ಥಾನ ತಟಸ್ಥ ಪ್ರದೇಶ (ಬಫರ್ ಜೋನ್) ವಾಗಿದ್ದು ಅಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ವಿಷಯ ಕೋರ್ಟ್ ಅಂಗಳದಲ್ಲಿದ್ದರೂ ಸರ್ಕಾರ ಅನುಮೋದನೆ ನೀಡಿರುವುದು ಸರಿಯಲ್ಲ. ಒಂದಡೆ ರೋಪ್ ವೇಗೆ ಬಫರ್ ಜೋನ್ ನಲ್ಲಿ ಜಾಗನೀಡಿ, ಮತ್ತೊಂದಡೆ ಬೆಂಗಳೂರು ಜಲ ಮಂಡಳಿಯಿಂದ ಅರ್ಕಾವತಿ ಉಳಿಸಿ ಅಭಿಯಾನ ಮಾಡಿಸುತ್ತಿರುವುದು ವಿಪರ್ಯಾಸ ಎಂದರು.

ವಿಶ್ವಪಾರಂಪರಿಕ ತಾಣವಾಗಲಿ

ಜುಲೈ 2 ರಂದು ನಂದಿ ಗಿರಿಧಾಮದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರೋಪ್ ವೇ ಕಾಮಗಾರಿ ಕೈಬಿಟ್ಟು, ಜೀವವೈವಿಧ್ಯತೆಯಿಂದ ಕೂಡಿರುವ ನಂದಿ ಬೆಟ್ಟ ವನ್ನು ಉಳಿಸಿ, ನಂದಿಬೆಟ್ಟವನ್ನು ವಿಶ್ವಪಾರಂಪರಿಕ ತಾಣವಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು. ಯುಎಚ್‌ಆರ್‌ಎಸ್‌ಎಫ್ ಸಂಸ್ಥಾಪನಾಧ್ಯಕ್ಷ ಸಿ.ಡಿ. ಕಿರಣ್ ಮಾತನಾಡಿ, ‘ಮುಂದಿನ ಪೀಳಿಗೆಗಾಗಿ ನಂದಿ ಬೆಟ್ಟದ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಜೈವಿಕ ವೈವಿಧ್ಯತೆಯ ಕೇಂದ್ರವನ್ನಾಗಿ ಈ ಸ್ಥಳವನ್ನು ಘೋಷಿಸಬೇಕು. ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲು ಅನುಕೂಲವಾಗುವಂತೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಮುಷ್ಟೂರು ಶ್ರೀಧರ್‌, ಸಾಮಾಜಿಕ ಹೋರಾಟಗಾರರಾದ ಕ್ಯಾತಪ್ಪ, ರಫೀಕ್, ಜ್ಯೋತಿ ಇದ್ದರು.