ನಂದಿಗಿರಿ ಪ್ರದಕ್ಷಿಣೆಗೆ ಜನಸಾಗರ ನಂದಿಗಿರಿ ಪ್ರದಕ್ಷಿಣೆಗೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ, ಬಾಗೇಪಲ್ಲಿ, ಬೆಂಗಳೂರು, ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ವಿಜಯಪುರ ಸೇರಿ ವಿವಿಧೆಡೆಯಿಂದ ಅಬಾಲ ವೃದ್ಧರಾದಿಯಾಗಿ ಭಕ್ತರು ಆಗಮಿಸಿದ್ದರು.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ವೈಶಾಖ ಮಾಸದ ಬುದ್ಧ ಪೌರ್ಣಮಿಯ ನಂದಿಗಿರಿ ಪ್ರದಕ್ಷಿಣೆಯು ಆರೋಗ್ಯ ಹಾಗೂ ಅಧ್ಯಾತ್ಮದ ಸಮ್ಮಿಲನದ ಗುರುತಾಗಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

ವೈಶಾಖ ಮಾಸದ ಬುದ್ಧ ಪೌರ್ಣಮಿಯ ಅಂಗವಾಗಿ ಶುಕ್ರವಾರ ಸಂಜೆ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ದೇವಾಲಯದಿಂದ ಮೂರನೇ ನಂದಿಗಿರಿ ಪ್ರದಕ್ಷಿಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸುಮಾರು 2500 ವರ್ಷಗಳಿಗಿಂತ ಹಿಂದೆ ಮಗದ ಸಾಮ್ರಾಜ್ಯದ ಯುವರಾಜ ಸಿದ್ಧಾರ್ಥನು ಜನಸಾಮಾನ್ಯರ ಸಂಕಷ್ಟಗಳಿಗೆ ಕಾರಣ ಮತ್ತು ಪರಿಹಾರಗಳನ್ನು ಕಾಣಲೇಬೇಕೆಂಬ ಇಚ್ಛೆಯಿಂದ ರಾಜ್ಯಾಧಿಕಾರ, ಅರಮನೆ, ಮಡದಿ, ಮಕ್ಕಳು ಮತ್ತು ತನ್ನ ಜನಸಮುದಾಯ ಎಲ್ಲವನ್ನು ತೊರೆದು ಸಮಾಜ ಸುಧಾರಕನಾಗಿ ಹತ್ತಾರು ವರ್ಷಗಳು ಅಲೆದು, ಚಿಂತನೆ ಮಾಡಿ ಮನುಷ್ಯನ ಜೀವನವನ್ನು ಅರ್ಥ ಮಾಡಿಕೊಂಡು ಜ್ಞಾನೋದಯವಾಗಿ ಬುದ್ಧನಾಗಿ ಪರಿವರ್ತನೆಯಾದ ಇಂದು ನಂದಿಗಿರಿ ಪ್ರದಕ್ಷಿಣೆಗೆ ಚಾಲನೆ ನೀಡುತ್ತಿರುವುದು ಸಂತಸವಾಗಿದೆ ಎಂದು ನುಡಿದರು.

ನಂದಿ ಗ್ರಾಮದೊಂದಿಗೆ ಸುಮಾರು ವರ್ಷಗಳ ನಂಟು ಇದ್ದು ನಂದಿಯ ಭೋಗನಂದೀಶ್ವರ ದೇವಾಲಯದ ಪ್ರತಿ ಕಾರ್ಯಕ್ರಮದಲ್ಲೂ ಕಳೆದ 16 ವರ್ಷಗಳಿಂದ ಬಾಗವಹಿಸುತ್ತಿದ್ದೇನೆ ಎಂದು ಶ್ರೀಗಳು ತಿಳಿಸಿದರು.

ಐತಿಹಾಸಿಕ ಕಾರ್ಯಕ್ರಮ: ಸುಧಾಕರ್‌

ಸಂಸದ ಡಾ.ಕೆ. ಸುಧಾಕರ್ ಮಾತನಾಡಿ, ನಂದಿಗಿರಿ ಪ್ರದಕ್ಷಿಣೆಯು ಐತಿಹಾಸಿಕ ಕಾರ್ಯಕ್ರಮವಾಗಿದ್ದು ಪ್ರತಿ ತಿಂಗಳ ಹುಣ್ಣಿಮೆಯ ದಿನ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಮೂರನೇ ಹುಣ್ಣಿಮೆ ಕಾರ್ಯಕ್ರಮ. ಪಕ್ಷಾತೀತವಾಗಿ, ರಾಜಕೀಯ ಹೊರತಾದ ಕಾರ್ಯಕ್ರಮ ಇದಾಗಿದೆ. ವಿವಿಧ ಭಜನಾ ಮಂಡಳಿಗಳ ಪ್ರತಿನಿಧಿಗಳು ಹಾಗೂ ಸಾಂಸ್ಕೃತಿಕ ಸಂಘಗಳ ಮುಖಂಡರು, ಸಾಧು ಸಂತರು ಪಾಲ್ಗೊಂಡಿದ್ದಾರೆ ಎಂದರು.

ನಂದಿ ಬೆಟ್ಟವನ್ನು ದಕ್ಷಿಣದ ಕಾಶಿ ಎಂದೂ ಕರೆಯಲಾಗುತ್ತದೆ. ತಮಿಳುನಾಡಿನ ತಿರುವಣಾಮಲೈನಲ್ಲಿ ಪ್ರತಿ ಪೌರ್ಣಮಿಗೆ ಅರುಣಾಚಲ ಗಿರಿಯ ಪ್ರದಕ್ಷಿಣೆ ಮಾಡಿದರೆ ಕೈಲಾಸವನ್ನು ಪ್ರದಕ್ಷಿಣೆ ಮಾಡಿದಷ್ಟೇ ಪುಣ್ಯ ಎಂಬ ನಂಬಿಕೆ ಇಂದಿಗೂ ಇದೆ. ಆದರೆ ದೂರದ ತಿರುವಣಾಮಲೈಗೆ ತೆರಳಲು ಆಗದು ಎಂದು ನಂದಿಗಿರಿಗೆ ಪ್ರದಕ್ಷಿಣೆ ಮಾಡಿದರೆ ಅದೇ ಪುಣ್ಯ ಲಭಿಸುತ್ತದೆ ಎಂದರು.

ಹುಣ್ಣಿಮೆ ಎಂದರೆ ಚಂದ್ರನು ಪೂರ್ಣರೂಪದಲ್ಲಿ ಬೆಳಗುವ ದಿನವಾಗಿದೆ. ಸೂರ್ಯ ಚಂದ್ರರು ಕಣ್ಣಿಗೆ ಕಾಣುವ ದೇವರೆಂದು ಎಲ್ಲರೂ ನಂಬುತ್ತಾರೆ. ಹಿಂದೂಗಳು ಮಾತ್ರವಲ್ಲದೆ, ಮುಸ್ಲಿಮರು ಕೂಡ ರಂಜಾನ್‌ ಸಮಯದಲ್ಲಿ ಚಂದ್ರನ ಗೋಚರತೆಯನ್ನು ಆಧರಿಸಿ ಹಬ್ಬ ಆಚರಿಸುತ್ತಾರೆ. ಆದ್ದರಿಂದ ಎಲ್ಲ ಧರ್ಮದವರೂ ಚಂದ್ರನನ್ನು ಶ್ರೇಷ್ಠವೆಂದು ಪರಿಗಣಿಸುತ್ತಾರೆ. ಮಾಘಮಾಸದ ಹುಣ್ಣಿಮೆಯ ದಿನ ಶ್ರೇಷ್ಠವಾಗಿದ್ದು, ಇದೇ ದಿನದಂದು ದಿಬ್ಬಗಿರಿ, ಬ್ರಹ್ಮಗಿರಿ, ನಂದಿಗಿರಿ (ನಂದಿಬೆಟ್ಟ), ಚೆನ್ನಗಿರಿ, ಗೋರ್ವಧನ ಗಿರಿ ಸೇರಿದಂತೆ ಪಂಚಗಿರಿಗಳ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರದಕ್ಷಿಣೆ ಮಾರ್ಗ: ನಂದಿಯ ಶ್ರೀ ಭೋಗನಂದಿಶ್ವರಸ್ವಾಮಿ ದೇವಾಲಯದಿಂದ ಆರಂಭಗೊಳ್ಳುವ ಪ್ರದಕ್ಷಿಣೆ ಅಂಗಟ್ಟ, ಈರೇನಹಳ್ಳಿ, ಕುಡುವತಿ, ಕಾರಹಳ್ಳಿ ಕ್ರಾಸ್,ಕಣಿವೆಪುರ, ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಮೊಡಕು ಹೊಸಹಳ್ಳಿ, ಕಣಿವೆ ಬಸವಣ್ಣನ ದೇವಾಲಯದಲ್ಲಿ ಬಸವನ ದರ್ಶನ ಪಡೆದು,ಸುಲ್ತಾನ್ ಪೇಟೆ ಮಾರ್ಗವಾಗಿ ಸುಮಾರು 16 ಕಿ.ಮೀ ಕಾಲ್ನಡಿಗೆಯಲ್ಲಿ ಪ್ರದಕ್ಷಿಣೆ ಹಾಕಿ ಮತ್ತೆ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ಆಲಯಕ್ಕೆ ವಾಪಸ್ ಬಂದ ಬಳಿಕ ಶ್ರೀ ಭೋಗನಂದಿಶ್ವರಸ್ವಾಮಿಗೆ ಮಹಾಮಂಗಳಾರತಿ ಎತ್ತಿದ ಬಳಿಕ ಉಪಹಾರದ ನಂತರ ಕಾರ್ಯಕ್ರಮಕ್ಕೆ ಅಂತ್ಯ ಹಾಡಲಾಯಿತು.

ಭಕ್ತರಿಗೆ ಅಗತ್ಯ ವ್ಯವಸ್ಥೆ:

ಪ್ರತಿ ನಾಲ್ಕು ಕಿಲೋ ಮೀಟರ್ ಗಳಿಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಆಯಾಸ ನೀಗಿಸಲು ಅಲ್ಲಲ್ಲಿ ಮಜ್ಜಿಗೆ, ತಂಪು ಪಾನೀಯ, ನೀರು, ಬಿಸ್ಕೆಟ್, ಗ್ಲುಕೋಸ್, ಚಾಕೋಲೇಟ್, ಕಲ್ಲುಸಕ್ಕರೆ, ಖರ್ಜೂರ ಮುಂತಾದ ಹಣ್ಣುಗಳನ್ನು ವಿತರಿಸಲಾಯಿತು. ಅರಣ್ಯ ಮತ್ತು ಪೋಲಿಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತು, ಇದಲ್ಲದೆ ಉಚಿತ ಆರೋಗ್ಯ ಶಿಭಿರ ಮತ್ತು ಔಷಧ ವಿತರಣೆಗೆ ವ್ಯೆವಸ್ಥೆ ಮಾಡಲಾಗಿತ್ತು.

ನಂದಿಗಿರಿ ಪ್ರದಕ್ಷಿಣೆಗೆ ಜನಸಾಗರ ನಂದಿಗಿರಿ ಪ್ರದಕ್ಷಿಣೆಗೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ, ಬಾಗೇಪಲ್ಲಿ, ಬೆಂಗಳೂರು, ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ವಿಜಯಪುರ ಸೇರಿ ವಿವಿಧೆಡೆಯಿಂದ ಅಬಾಲ ವೃದ್ಧರಾದಿಯಾಗಿ ಭಕ್ತರು ಆಗಮಿಸಿದ್ದರು. ವಿವಿಧ ಭಜನಾ ತಂಡಗಳೊಂದಿಗೆ ದೇವರ ಹಾಡುಗಳನ್ನು ಹಾಡುತ್ತ ಸಂಸದ ಡಾ. ಕೆ.ಸುಧಾಕರ್ ರೊಂದಿಗೆ ಬೆಟ್ಟ-ಗುಡ್ಡಗಳ ನಡುವಿನ ಆಹ್ಲಾದಕರ ವಾತಾವರಣದಲ್ಲಿ ದೇವರ ನಾಮಸ್ಮರಣೆ ಮಾಡುತ್ತ ಕಾಲ್ನಡಿಗೆಯಲ್ಲಿ ಭಕ್ತರು ನಂದಿಗಿರಿ ಪ್ರದಕ್ಷಿಣೆ ಹಾಕಿದರು ಸಹಸ್ರಾರು ಭಕ್ತರು ಹರನಾಮ ಸ್ಮರಣೆಯೊಂದಿಗೆ ಪ್ರಾಕೃತಿಕ ರಮ್ಯತಾಣ ನಂದಿಗಿರಿ ಪ್ರದಕ್ಷಿಣೆ ಹಾಕಿ ಭಕ್ತಿ ಸಮರ್ಪಿಸಿದರು. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಇದರಲ್ಲಿ ಭಾಗವಹಿಸಿದ್ದರು,