ಸಾರಾಂಶ
ಮಾಲೂರು : ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ಹಾಲಿನ ದರಕ್ಕೆ ಹೋಲಿಸಿದರೆ ನಮ್ಮಲ್ಲಿರುವ ಹಾಲಿನ ದರ ಅತಿ ಕಡಿಮೆಯಾಗಿದೆ. ಈ ಬಗ್ಗೆ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹಾಲಿನ ದರವನ್ನು ಏರಿಕೆ ಮಾಡಿ, ಹೆಚ್ಚಿಸಿರುವ ದರವನ್ನು ನೇರವಾಗಿ ರೈತರಿಗೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.1 ರಿಂದ ದರ ಏರಿಕೆ ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಇಲ್ಲಿನ ಕೋಮುಲ್ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಉಪಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಜಿಲ್ಲಾ ಸಹಕಾರ ಹಾಲು ಉತ್ಪಾಧಕರ ಸಹಕಾರ ಸಂಘಗಳ ಒಕ್ಕೂಟದ ಉಪಕಚೇರಿ, ಸಹಕಾರ ಇಲಾಖೆ, ತಾಲೂಕಿನ ಎಲ್ಲಾ ಹಾಲು ಉತ್ಪಾಧಕರ ಸಹಕಾರ ಸಂಘಗಳು, ಕೃಷಿ ಪತ್ತಿನ ಸಹಕಾರ ಸಂಘಗಳು, ಇತರೆ ಸಹಕಾರ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಸಮಾರೋಪ ಕಾರ‍್ಯಕ್ರಮವನ್ನು ಕುರಿತು ಮಾತನಾಡಿದರು.ದೇಶದಲ್ಲಿ ಸಹಕಾರ ಸಂಸ್ಥೆಗಳಿಗೆ ವಿಶೇಷವಾದ ಸ್ಥಾನಮಾನವಿದೆ. ನೆಹರು ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸಹಕಾರ ಸಂಸ್ಥೆಗಳನ್ನು ಪ್ರಾರಂಭಿಸಿದರು. ಸಹಕಾರ ಸಂಸ್ಥೆಗಳನ್ನು ಎಷ್ಟು ಗಟ್ಟಿಯಾಗಿ ಬೆಳೆಸುತ್ತಿವೆಯೋ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು, ಡಿಸಿಸಿ ಸಹಕಾರ ಸಂಘಗಳು, ಕೃಷಿ ಪತ್ತಿನ ಸಹಕಾರ ಸಂಘಗಳು ಬಹಳ ಬಲಿಷ್ಠವಾಗಿ ಕಾರ‍್ಯನಿರ್ವಹಿಸುತ್ತಿದೆ. ಕೋಲಾರ ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳು ಕೆಲಸ ಮಾಡುತ್ತಿವೆ. ಅಲ್ಲದೆ, ಸಹಕಾರ ಪತ್ತಿನ ಸಂಘಗಳಲ್ಲಿ ಸಾಕಷ್ಟು ಮಂದಿ ಸದಸ್ಯರು ಕೆಲಸ ಮಾಡುತ್ತಿದ್ದು, ಅವರ ಭವಿಷ್ಯ ರೂಪಿಸಬೇಕಾಗಿದೆ ಎಂದರು.
ಸಹಕಾರ ಸಂಘದ ಅಧ್ಯಕ್ಷ ಪಿ.ಎಂ.ವೆಂಕಟೇಶ್, ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ನಿರ್ದೇಶಕರಾದ ಎಸ್.ವಿ. ಗೋವರ್ಧನರೆಡ್ಡಿ, ಎನ್.ಶಂಕರನಾರಾಯಣಗೌಡ, ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಚನ್ನರಾಯಪ್ಪ, ಕೋಮುಲ್‌ನ ಮಾಜಿ ನಿರ್ದೇಶಕಿ ಕಾಂತಮ್ಮ ಸೋಮಣ್ಣ, ವ್ಯವಸಾಯೋತ್ಪನ್ನ ಮಾರಾಟ ಸಂಘದ ಅಧ್ಯಕ್ಷ ಉಪ ವ್ಯವಸ್ಥಾಪಕ ಡಾ.ಲೋಹಿತ್, ಸಹಕಾರ ಅಭಿವೃದ್ದಿ ಅಧಿಕಾರಿ ಎಸ್.ವೀಣಾ, ಮುನೇಗೌಡ, ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಒಕ್ಕೂಟದ ನಿರ್ದೇಶಕರಾದ ಅ.ಮು.ಲಕ್ಷ್ಮಿನಾರಾಯಣ, ಡಿ.ಆರ್.ರಾಮಚಂದ್ರಗೌಡ, ರಾಜೇಂದ್ರಗೌಡ ಹಾಜರಿದ್ದರು.