ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತದ ವತಿಯಿಂದ ಏ. ೩೦ರಂದು ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮನವಿ ಮಾಡಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏ. ೩೦ರ ಬೆಳಗ್ಗೆ ೯ ಗಂಟೆ ಸರಿಯಾಗಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಅಶ್ವಾರೂಡ ಶ್ರೀ ಬಸವೇಶ್ವರರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ೨೦೨೫ರ ಬಸವ ಜಯಂತಿಯ ಮೆರವಣಿಗೆ ಪ್ರಾರಂಭಗೊಳ್ಳಲಿದೆ ಎಂದರು.
ಮೆರವಣಿಗೆಯು ಜಿಲ್ಲಾಡಳಿತ ಭವನದಿಂದ ಹೊರಟು, ಬಿ. ರಾಚಯ್ಯ ಜೋಡಿ ರಸ್ತೆ, ಶ್ರೀ ಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ, ಸುಲ್ತಾನ್ ಷರೀಫ್ ಸರ್ಕಲ್, ಫಾರೆಸ್ಟ್ ಕಚೇರಿ ಮುಂಭಾಗದಿಂದ ಅನ್ವರ್ ಪಾಷ ಸರ್ಕಲ್, ದೊಡ್ಡ ಅಂಗಡಿ ಬೀದಿ, ನಾಗಪ್ಪಶೆಟ್ಟರ ಚೌಕ, ಶ್ರೀ ಮಹಾವೀರ ಸರ್ಕಲ್, ನೃಪತುಂಗ ಸರ್ಕಲ್, ಚಿಕ್ಕಅಂಗಡಿ ಬೀದಿ, ಸಂತೇಮರಹಳ್ಳಿ ಸರ್ಕಲ್ ಡಿವಿಯೇಷನ್ ರಸ್ತೆಯ ಮುಖಾಂತರ ಶ್ರೀ ಭುವನೇಶ್ವರಿ ವೃತ್ತದ ಬಳಿ ಇರುವ ಪೇಟೆ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಮಾಪ್ತಿಗೊಳ್ಳುವುದು ಎಂದರು.ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು, ನಂದಿಧ್ಬಜ, ಭಜನಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರುಗು ತರಲಿವೆ ಎಂದರು.
ಪೇಟೆ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ವಿವಿಧ ಸ್ತರದ ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದರು.ಜಿಲ್ಲೆಯ ಬಸವಾಭಿಮಾನಿಗಳು, ಲಿಂಗಾಯಿತ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ರಾಜಕೀಯ ಧುರೀಣರು, ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಗತ್ತಿನ ಮೊಟ್ಟಮೊದಲ ಸಮಾಜವಾದಿ, ಪ್ರಜಾಪ್ರಭುತ್ವವಾದಿ ವಿಶ್ವಗುರು ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ ೮೯೨ನೇ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಶ್ವಾರೂಢ ಶ್ರೀ ಬಸವೇಶ್ವರರ ಪ್ರತಿಮೆ ಅನಾವರಣಕ್ಕೆ ಕಾರಣರಾದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಸಚಿವ ಎಚ್.ಸಿ. ಮಹದೇವಪ್ಪ, ಸಂಸದರು, ಜಿಲ್ಲೆಯ ಶಾಸಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ, ಎಂ. ಮಂಜೇಶ್, ಕೋಶಾಧ್ಯಕ್ಷ ಗುರುಸ್ವಾಮಿ, ತಾಲೂಕು ಅಧ್ಯಕ್ಷ ಬಾಲಚಂದ್ರಮೂರ್ತಿ, ರಾಷ್ಟ್ರೀಯ ಸಮಿತಿ ಸದಸ್ಯ ಎನ್‌ರಿಚ್ ಮಹದೇವಸ್ವಾಮಿ, ನಿರ್ದೇಶಕರಾದ ರಾಜೇಂದ್ರ ಪ್ರಸಾದ್, ಬಿ.ಉಮೇಶ್ ಇದ್ದರು.