ಪ್ರತಿ ಟನ್ ಕಬ್ಬಿಗೆ 4,500 ರು. ನಿಗದಿಪಡಿಸಿ

| Published : Aug 30 2025, 01:00 AM IST

ಸಾರಾಂಶ

ಮೈಸೂರು ಜಿಲ್ಲೆಯಲ್ಲಿ ತಂಬಾಕು ಬೆಳೆ ಬೆಳೆಯುವ ನಂಜನಗೂಡು, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್. ನಗರ ತಾಲೂಕಿನ ರೈತರಿಗೆ ನ್ಯಾಯ ಒದಗಿಸಿಕೊಡುವಲ್ಲಿ ತಂಬಾಕು ಮಂಡಳಿ ವಿಫಲ

ಕನ್ನಡಪ್ರಭ ವಾರ್ತೆ ನಂಜನಗೂಡುಪ್ರಸಕ್ತ ಸಾಲಿನಲ್ಲಿ ರೈತರು ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುವ ಪ್ರತಿ ಟನ್ ಕಬ್ಬಿಗೆ 4,500 ರು. ಗಳನ್ನು ನಿಗದಿಪಡಿಸಬೇಕು ಹಾಗೂ ಕಾರ್ಖಾನೆಗಳ ಮುಂಭಾಗ ತೂಕದ ಯಂತ್ರ ಅಳವಡಿಸಲು ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘಟನೆ ರಾಜ್ಯಾಧ್ಯಕ್ಷ ಹಾಡ್ಯ ರವಿ ಒತ್ತಾಯಿಸಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ರೈತರ ಕುಂದುಕೊರತೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಮೈಸೂರು ಜಿಲ್ಲೆಯಲ್ಲಿ ತಂಬಾಕು ಬೆಳೆ ಬೆಳೆಯುವ ನಂಜನಗೂಡು, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್. ನಗರ ತಾಲೂಕಿನ ರೈತರಿಗೆ ನ್ಯಾಯ ಒದಗಿಸಿಕೊಡುವಲ್ಲಿ ತಂಬಾಕು ಮಂಡಳಿ ವಿಫಲವಾಗಿದ್ದು, ಖಾಸಗಿ ಸಂಸ್ಥೆಗಳ ಒತ್ತಡಕ್ಕೆ ಮಣಿದು ತಂಬಾಕು ಬೆಳೆಗಾರ ರೈತರಿಗೆ ಮೋಸ ಮಾಡಲಾಗುತ್ತಿದೆ, ಜಿಲ್ಲಾಡಳಿತ ಮತ್ತು ಸಂಸತ್ ಸದಸ್ಯರು ಹಾಗೂ ಆ ಭಾಗದ ಶಾಸಕರು ರೈತರ ಸಮ್ಮುಖದಲ್ಲಿ ತಂಬಾಕು ಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಬೇಕು, ಇಲ್ಲದಿದ್ದರೆ ತಂಬಾಕು ಬೆಳೆಗಾರರು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಜೊತೆ ಸೇರಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಲಿದ್ದಾರೆ ಎಂದು ಅವರು ಎಚ್ಚರಿಸಿದರು.ರೈತರ ಕೃಷಿ ಪಂಪ್‌ ಸೆಟ್ಟುಗಳಿಗೆ ಅಕ್ರಮ ಸಕ್ರಮ ಯೋಜನೆಯನ್ನು ಮುಂದುವರಿಯಬೇಕು, ಕಾಡಂಚಿನ ರೈತರ ಜನ ಜಾನುವಾರುಗಳನ್ನು ಅರಣ್ಯ ಇಲಾಖೆ ನಿರ್ಬಂಧ ನೀಡಿರುವ ಆದೇಶವನ್ನು ಹಿಂಪಡೆಯಬೇಕು ಹಾಗೂ ನಂಜನಗೂಡು ತಾಲೂಕು ಆಡಳಿತ ರೈತರ ಖಾತೆ, ಪೋಡಿ ಹಾಗೂ ಬೀಳು ರೆಸ್ಟೋರ್ ಇನ್ನೂ ಇತರ ದಾಖಲಾತಿಗಳನ್ನು ಒದಗಿಸಲು ರೈತರನ್ನು ಅಲೆದಾಡಿಸುವ ಪ್ರವೃತ್ತಿ ತಪ್ಪಬೇಕು, ಇಲ್ಲದಿದ್ದರೆ ಮುಂದಿನ ದಿನದಲ್ಲಿ ತಾಲೂಕು ಆಡಳಿತ ಭವನದ ಮುಂದೆ ಆಹೋರಾತ್ರಿ ಚಳವಳಿ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಸಭೆಯಲ್ಲಿ ಸಂಘಟನೆ ಮೈಸೂರು ಜಿಲ್ಲಾಧ್ಯಕ್ಷ ಚಿಕ್ಕಸ್ವಾಮಿ, ಉಪಾಧ್ಯಕ್ಷ ಮಹೇಶ್, ಕಾರ್ಯಾಧ್ಯಕ್ಷ ಭುಜಂಗಪ್ಪ, ಜಿಲ್ಲಾ ಸಂಚಾಲಕ ಎಂ. ಸೋಮಣ್ಣ, ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ನಾಗೇಶ್, ಸಂಘಟನಾ ಕಾರ್ಯದರ್ಶಿ ಸಿದ್ದರಾಜು, ಕಾರ್ಯದರ್ಶಿ ಮೂರ್ತಿ, ತಾಲೂಕು ಉಪಾಧ್ಯಕ್ಷ ಮಲ್ಲೇಶ್, ಮಾಜಿ ಸೈನಿಕ ರಾಜೇಶ್, ರವಿ, ಉಮೇಶ್, ಶಂಕರ, ಮಂಜು, ನಟೇಶ್, ಪ್ರಭು, ಸಿದ್ದಪ್ಪ, ಮಹೇಶ್, ಮಹೇಂದ್ರ, ನಂಜುಂಡಸ್ವಾಮಿ, ಜಗದೀಶ್ ಭಾಗವಹಿಸಿದ್ದರು.