ಕನ್ನಡಪ್ರಭ ವಾರ್ತೆ ನಂಜನಗೂಡು

ಆಧುನಿಕ ಜ್ಞಾನ, ವಿಜ್ಞಾನ ಮತ್ತು ತಾಂತ್ರಿಕ ಯುಗದ ಒತ್ತಡದ ಜೀವನದಲ್ಲಿ ಯೋಗದ ಮಹತ್ವ ಅರಿಯುವುದು ಅವಶ್ಯವಿದ್ದು, ಆಂತರಿಕ ಶಾಂತಿ, ಆರೋಗ್ಯಕರ ಮತ್ತು ಒತ್ತಡ ಮುಕ್ತ ಜೀವನಕ್ಕೆ ಯೋಗಾಭ್ಯಾಸ ತಳಹದಿಯಾಗಿದೆ ಎಂದು ಮೈಸೂರು ಹಿಮಾಲಯ ಪ್ರತಿಷ್ಠಾನ ಸಂಸ್ಥಾಪಕ ಎನ್‌. ಅನಂತ ಹೇಳಿದರು.

ನಂಜನಗೂಡು ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಓಂ ಪ್ರಣಮ್ಯಯೋಗ ಶಾಲಾ ಸಹಯೋಗದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಠ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿ, ವಿಶ್ವದಾದ್ಯಂತ ಆಚರಿಸುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರತಿಯೊಬ್ಬರು ಅರಿವು, ಆರೋಗ್ಯ ಮತ್ತು ಸಂತೋಷದ ಸಮಾನತೆ ಕಾಪಾಡಿಕೊಂಡು ಜೀವನದ ನೈಜತೆ ಅರ್ಥಪೂರ್ಣವಾಗಿಸಿಕೊಳ್ಳುವಲ್ಲಿ ಯೋಗಾಭ್ಯಾಸದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಓಂಪ್ರಣಮ್ಯ ಯೋಗ ಶಾಲೆಯ ಸಂಸ್ಥಾಪಕ ಬಿ.ಎಂ. ರಮೇಶ್‌ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಬದುಕನ್ನು ಸಾಗಿಸುತ್ತಿದ್ದು, ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕಿದೆ. ಈ ದಿಸೆಯಲ್ಲಿ ಆರೋಗ್ಯದ ಮಹತ್ವದ ಮೂಲ ಬೇರು ಅರಿವೆಂಬ ಔಷಧಿಯಾಗಿದ್ದು, ಈ ಔಷಧಿ ಧ್ಯಾನ ಮತ್ತು ಯೋಗಾಭ್ಯಾಸದಿಂದ ಸಾಧ್ಯವಾಗುತ್ತದೆ ಎಂದರು.

ಓಂಕಾರ ಮಂತ್ರದ ಭೂಮಿಕೆಯಾದ ಭ್ರಮಣೀ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದು ಸೂಕ್ತ. ವಿವಿಧಯೋಗ ಪ್ರಕಾರಗಳನ್ನು ಪರಿಚಯಿಸುವುದರೊಂದಿಗೆ ಯೋಗಾಭ್ಯಾಸದ ಮಹತ್ವ ಕುರಿತಾದ ವಿಸ್ತತವಾದ ವಿವರಣೆ ನೀಡಿದರು.


ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಮಾತನಾಡಿ, ಶ್ರೇಷ್ಠ ಸಂಸ್ಕೃತಿ ಹಾಗೂ ಪರಂಪರೆ ಹೊಂದಿರುವ ಭಾರತ ದೇಶ ವಿಶ್ವದಾದ್ಯಂತ ಯೋಗದ ಮಹತ್ವ ಪರಿಚಯಿಸುವುದರೊಂದಿಗೆ ವಿಶ್ವಗುರುವಿನ ಸ್ಥಾನ ಅಲಂಕರಿಸುವತ್ತ ಮುನ್ನಡೆಯುತ್ತಿದೆ. ಈ ದಿಸೆಯಲ್ಲಿ ಜೀವನದ ಸಂಕೋಲೆ ಮುರಿದು, ಇಡೀ ಜಗತ್ತನ್ನು ಅರ್ಥ ಮಾಡಿಕೊಂಡು ಸಹಬಾಳ್ವೆ ಜೀವನ ನಡೆಸುವಲ್ಲಿ ಧ್ಯಾನ ಮತ್ತು ಯೋಗದ ಮಹತ್ವ ಸಾರ್ವಕಾಲಿಕ ಸತ್ಯ ಎಂದರು.

ಅಶ್ವಿನಿ ಮತ್ತು ತಂಡದವರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಎಂ. ವಿಕ್ರಮ್‌ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಚ್‌.ಆರ್‌. ಗುರು ವಂದಿಸಿದರು. ಪಿಯು ಕಾಲೇಜು ಪ್ರಾಂಶುಪಾಲ ಕೆ.ಎನ್. ಶಿವಕುಮಾರ್, ಕಾಲೇಜಿನ ಅಧ್ಯಾಪಕ- ಅಧ್ಯಾಪಕೇತರರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು. ಎಂ.ಎನ್‌. ಜಯಶೀಲ ನಿರೂಪಿಸಿದರು.