ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುನಂಜನಗೂಡು ನಗರಸಭೆಯಲ್ಲಿ 2024-25ನೇ ಸಾಲಿಗೆ 60.19 ಕೋಟಿ ರು. ಮೊತ್ತದ ಬಜೆಟ್ ನ್ನು ಸಿದ್ಧಪಡಿಸಲಾಗಿದ್ದು, ಸುಮಾರು 2.50 ಕೋಟಿ ರು. ಉಳಿತಾಯ ಬಜೆಟ್ನ್ನು ಮಂಡಿಸಲಾಗಿದೆ ಎಂದು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
ಅವರು ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ 2024-54ನೇ ಸಾಲಿನ ಬಜೆಟ್ ಆಯ ವ್ಯಯವನ್ನು ಮಂಡಿಸಿ ಅವರು ಮಾತನಾಡಿದರು.ಪ್ರಾರಂಭಿಕ ಶುಲ್ಕ 16.61 ಕೋಟಿ ರು. ಸೇರಿದಂತೆ ಆಸ್ತಿ ತೆರಿಗೆ, ಖಾತೆ ಶುಲ್ಕ, ನೀರಿನ ಶುಲ್ಕ ಸೇರಿದಂತೆ ಇತರೆ ಮೂಲಗಳಿಂದ ಸುಮಾರು 20 ಕೋಟಿ ಆದಾಯ ಬರುವ ನಿರೀಕ್ಷೆಯಿದೆ. ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಸ್.ಎಫ್.ಸಿ ವೇತನ ಅನುದಾನ, ಬೀದಿ ದೀಪ ವಿದ್ಯುತ್, ನೀರು ಸರಬರಾಜು, 15ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ಸುಮಾರು 25 ಕೋಟಿ ಬರುವ ಸಾಧ್ಯತೆಯೊಂದಿಗೆ 2024-25ನೇ ಸಾಲಿಗೆ 62.7 ಕೋಟಿ ಆದಾಯ ನಿರೀಕ್ಷೆಯನ್ನು ಹೊಂದಲಾಗಿದ್ದು, ಇದರಲ್ಲಿ 60.19 ಕೋಟಿ ರು. ವೆಚ್ಚದಲ್ಲಿ ಬಜೆಟ್ ಸಿದ್ಧಪಡಿಸಲಾಗಿದೆ ಎಂದರು.
ನಗರಸಭೆ ಆಸ್ತಿ ರಚನೆಗೆ ಕ್ರಮ:ಈ ಬಾರಿ ನಗರಸಭೆಗೆ ಆದಾಯ ಬರುವ ಆಸ್ತಿಗಳನ್ನು ಸೃಷ್ಟಿ ಮಾಡಲು ಕ್ರಮವಹಿಸಲಾಗಿದೆ. ಅಲ್ಲದೆ ಕಪಿಲ ನದಿಯ ಸ್ವಚ್ಚತೆಯ ಹಿತದೃಷ್ಠಿಯನ್ನಿಟ್ಟುಕೊಂಡು ಬಜೆಟ್ ರಚನೆ ಮಾಡಲಾಗಿದೆ ಎಂದರಲ್ಲದೆ, ಎಲ್ಲ ವಾರ್ಡ್ಗಳಲ್ಲಿ ರಸ್ತೆ, ಪಾದಚಾರಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 9.5 ಕೋಟಿ, ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ 1.5 ಕೋಟಿ, ನೀರು ಸರಬರಾಜು ನಿರ್ವಹಣೆಗೆ 2.05 ಕೋಟಿ, ಉದ್ಯಾನಗಳ ಅಭಿವೃದ್ಧಿಗಾಗಿ 75 ಲಕ್ಷ, ನಗರಸಭೆ ಅಧಿಕಾರಿಗಳ ವೇತನಕ್ಕಾಗಿ 4.77 ಕೋಟಿ, ಬೀದಿದೀಪ ವಿದ್ಯುತ್ ಶುಲ್ಕ ಪಾವತಿಗಾಗಿ 5.75 ಕೋಟಿ, ನೀರು ಸರಬರಾಜು ವಿದ್ಯುತ್ ಶುಲ್ಕ ಪಾವತಿಗಾಗಿ 2.75 ಕೋಟಿ, ನೈರ್ಮಲ್ಯ ವೆಚ್ಚಾಗಿ 2 ಕೋಟಿ, ದುರಸ್ತಿ ಕಾರ್ಯಗಳಿಗಾಗಿ 1.55 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಇನ್ನು 50 ಲಕ್ಷ ರು. ವೆಚ್ಚದಲ್ಲಿ ಬಜಾರ್ ರಸ್ತೆಯ್ಲಲಿರುವ ಮಳಿಗೆಯ ಮೊದಲ ಅಂತಸ್ತಿನಲ್ಲಿ ಹೆಚ್ಚುವರಿ ಮಳಿಗೆ, ಕಾಂಪೌಂಡ್, ಕ್ರೀಡಾಂಗಣ ಅಭಿವದ್ಧಿಗೆ ಒಂದು ಕೋಟಿ, ಸಮುದಾಯ ಭವನ, ಅಂಗನವಾಡಿ, ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ, ಮಳೆ ನೀರಿನ ಚರಂಡಿ ಹಾಗೂ ಸೇತುವೆ ನಿರ್ಮಾಣಕ್ಕೆ 50 ಲಕ್ಷ, ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ 50 ಲಕ್ಷ, ಸಾರ್ವಜನಿಕರಿಗೆ ಉಪಟಳ ನೀಡುವ ಕೋತಿ, ಬಡಾಡಿ ದನ-ಕುದುರೆ, ಹಂದಿಗಳನ್ನು ಹಿಡಿದು ಸಾಗಿಸಲು 40 ಲಕ್ಷ, ಪ್ರತಿ ವಾರ್ಡಿನಲ್ಲೂ 100 ಗಿಡ ನೆಡಲು 50 ಲಕ್ಷ ವಿನಿಯೋಗಿಸಲಾಗುವುದು ಎಂದು ಮಾಹಿತಿ ನೀಡಿದರು.ಮಾಜಿ ನಗರಸಭಾಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ ಮಾತನಾಡಿ, ಈ ಬಜೆಟ್ ಸಾರ್ವಜನಿಕ ಉಪಯೋಗಿ ಬಜೆಟ್ ಆಗಿಲ್ಲ, ಅಧಿಕಾರಿಗಳ ಉಪಯೋಗಿ ಬಜೆಟ್ ಆಗಿದೆ. ಕಳೆದ ಬಾರಿ ವಾಹನ ರಿಪೇರಿಗೆ 2 ಲಕ್ಷ ಮಾತ್ರ ಮೀಸಲಿಡಲಾಗಿತ್ತು. ಈ ಬಾರಿ 25 ಲಕ್ಷ ಮೀಸಲಿಟ್ಟಿದ್ದಾರೆ. ಸಾರ್ವಜನಿಕರ ಉಪಯೋಗಕ್ಕೆ ಬರುವ ಯಾವುದೇ ಕಾಮಗಾರಿಗಳಿಗೆ ಅನುದಾನ ನೀಡಿಲ್ಲ ಎಂದು ಆರೋಪಿಸಿದರು.
ಕಳೆದ 10 ವರ್ಷಗಳ ಹಿಂದೆ ಜಾರಿಯಾದ 24*7 ಕುಡಿಯುವ ನೀರಿನ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇಂದಿಗೂ ಹಳೇ ಪಟ್ಟಣ ಪ್ರದೇಶದ ಬಡಾವಣೆಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ ಎಂದು ಸದಸ್ಯೆ ಗಾಯತ್ರಿ ಮೋಹನ್ ಆಪಾದಿಸಿದರು. ಯೋಜನೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ಜಾರಿಗೊಳಿಸುವ ಮುನ್ನವೇ ಕೆಎಂಆರ್.ಪಿಗೆ ಎಲ್ಲಾ ಬಿಲ್ ಗಳನ್ನು ಪಾಸ್ ಮಾಡಿಕೊಡಲಾಗಿದೆ. ಇನ್ನು ಒಳಚರಂಡಿ ಯೋಜನೆಗೆ ಪ್ರತಿ ವರ್ಷ ಕೋಟಿ ಕೋಟಿ ಅನುದಾನ ಮೀಸಲಿಟ್ಟರೂ ಅದೂ ಕೂಡ ಯಶಸ್ವಿಯಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.ಎಇಇ ಚಿನ್ನಸ್ವಾಮಿ ಅಸಮರ್ಪಕವಾಗಿ ಸಮಜಾಯಿಷಿ ನೀಡುವುದನ್ನು ಕಂಡು ಕೆರಳಿದ ಸದಸ್ಯರು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ವೇಳೆ ಮಧ್ಯೆಪ್ರವೇಶಿಸಿ ಮಾತನಾಡಿದ ಡಿಸಿ ಡಾ. ರಾಜೇಂದ್ರ, 40 ದಿನದೊಳಗಾಗಿ ಪ್ರತಿ ವಾರ್ಡಿಗೂ ಸದಸ್ಯರೊಂದಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆ ಆಲಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಆದೇಶಿಸಿದರು.
ಇನ್ನು ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ ಅವರು ವಾರದಲ್ಲಿ ಮೂರು ದಿನ ಮುಂಜಾನೆ 7 ಗಂಟೆಗೆ ವಾರ್ಡ್ಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಬೇಕು. ಭೇಟಿ ನೀಡಿರುವ ಜಿಪಿಎಸ್ ಚಿತ್ರಗಳನ್ನು ನನಗೆ ಕಳುಹಿಸಬೇಕು. ಇಲ್ಲವಾದಲ್ಲಿ ಲೋಕಸಭಾ ಚುನಾವಣೆ ಬಳಿಕ ನಿಮ್ಮನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕಾಗುತ್ತದೆ ಎಂದು ಡಿಸಿ ಡಾ.ರಾಜೇಂದ್ರ ಎಚ್ಚರಿಸಿದರು.ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ, ನಗರಸಭಾ ಆಯುಕ್ತ ನಂಜುಂಡಸ್ವಾಮಿ, ನಗರಸಭಾ ಸದಸ್ಯರಾದ ಮಹೇಶ್ ಅತ್ತಿಖಾನೆ, ಕಪಿಲೇಶ್, ಸಿದ್ದರಾಜು, ಗಂಗಾಧರ್, ಶ್ರೀಕಂಠಸ್ವಾಮಿ, ನಗರಸಭಾ ಅಧಿಕಾರಿಗಳು ಮತ್ತು ಸದಸ್ಯರು ಇದ್ದರು.