ರಸ್ತೆಯೋ ..? ಕೆಸರು ಗದ್ದೆಯೋ?

| Published : Jul 20 2024, 01:00 AM IST

ಸಾರಾಂಶ

Nanjappa Barangay of Tipatur Nagar

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ನಂಜಪ್ಪ ಬಡಾವಣೆಯ ರಸ್ತೆಗಳು ಡಾಂಬರು ಕಾಣದೆ ಗುಂಡಿಗಳಿಂದ ಕೂಡಿದ್ದು ರಸ್ತೆಗಳಂತೂ ಮಳೆಯಿಂದಾಗಿ ಕೊಚ್ಚೆ ಗುಂಡಿಗಳಾಗಿರುವುದರಿಂದ ಇಲ್ಲಿನ ನಿವಾಸಿಗಳ ಪಾಡು ಹೇಳತೀರದಾಗಿದ್ದು, ನಗರಸಭೆ ಅಧಿಕಾರಿಗಳು, ಶಾಸಕರು ಇತ್ತ ಗಮನಹರಿಸಿ ರಸ್ತೆಗಳನ್ನು ಡಂಬರೀಕರಣಗೊಳಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಮಳೆಗೆ ರಸ್ತೆಗಳು ಕೆಸರುಗದ್ದೆಯಾಗಿದ್ದು ರಸ್ತೆಗಿಳಿಯಬೇಕೆಂದರೆ ಕೊಚ್ಚೆಗೆ ಇಳಿಯುತ್ತಿದ್ದೇವೆಂಬಂತೆ ಬಾಸವಾಗಿ ಸರ್ಕಸ್ ಮಾಡಿಕೊಂಡೇ ಓಡಾಡುವಂತಾಗಿದೆ. ವಾಹನಗಳನ್ನು ರಸ್ತೆಗಿಳಿಸಲು ಎರಡೆರಡು ಬಾರಿ ಯೋಚಿಸಬೇಕು. ಶಾಲೆಗೆ ಹೋಗುವ ಮಕ್ಕಳು, ವಯೋವೃದ್ದರು, ಮಹಿಳೆಯರು ಓಡಾಡುವುದೇ ತುಂಬಾ ಕಷ್ಟವಾಗಿದೆ. ನಿತ್ಯ ಜಾರಿ ಬೀಳುವುದು, ಕೈಕಾಲು ಮುರಿದುಕೊಳ್ಳುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಕಳೆದ ಎರಡು ವರ್ಷಗಳಿಂದಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗೆ ಡಾಂಬರು ಹಾಕಿಲ್ಲ. ರಸ್ತೆಯ ಅಕ್ಕಪಕ್ಕದ ಚರಂಡಿಗಳು ಕಟ್ಟಿಕೊಂಡಿದ್ದು ಮಳೆ ನೀರು ಶೇಖರಣೆಯಾಗಿ ಸೊಳ್ಳೆಗಳ ತಾಣವಾಗಿವೆ. ಇತ್ತೀಚಿಗೆ ಡೆಂಘೀ, ಚಿಕನ್‌ಗೂನ್ಯಗಳಂತಹ ಸಾಂಕ್ರಾಮಿಕ ರೋಗಗಳು ಆವರಿಸಿಕೊಳ್ಳುತ್ತಿದ್ದು ಚರಂಡಿಗಳನ್ನು ಸ್ವಚ್ಚ ಮಾಡದಿದ್ದರೆ ಇಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ನಗರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲವಾಗಿದ್ದು ಮತ್ಯಾರಿಗೆ ನಮ್ಮ ಕಷ್ಟ ಹೇಳಿಕೊಳ್ಳುವುದು ಎಂದು ಇಲ್ಲಿನ ನಿವಾಸಿ ಕೇಶವಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಡಾವಣೆಯಲ್ಲಿ ಖಾಲಿ ನಿವೇಶನಗಳಿದ್ದು ಅನಪೇಕ್ಷಿತ ಗಿಡಗಂಟಿಗಳು ಬೆಳೆದು ನಿಂತಿದ್ದು, ಮಳೆ ನೀರು ಶೇಖರಣೆಯಾಗಿ ಗಬ್ಬು ನಾರತಿದ್ದು ಮೂಗುಮುಚ್ಚಿಕೊಂಡು ಓಡಾಡುವಂತಹ ದುಸ್ಥಿತಿ ಉಂಟಾಗಿದೆ. ಅವ್ಯವಸ್ಥೆಯ ಆಗರವಾಗಿರುವ ನಮ್ಮ ಬಡಾವಣೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಆದಷ್ಟು ಬೇಗ ರಸ್ತೆಗೆ ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ನಿವಾಸಿ ಹಾಗೂ ರೋಟರಿ ಮಾಜಿ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಪೌರಾಯುಕ್ತರಿಗೆ ಒತ್ತಾಯಿಸಿದ್ದಾರೆ. ನಗರದ ಗಾಂಧಿನಗರ ಸೇರಿದಂತೆ ಬಹುತೇಕ ಬಡಾವಣೆಗಳ ರಸ್ತೆಗಳು ಇದೇ ರೀತಿ ಕೊಚ್ಚೆಗುಂಡಿಗಳಾಗಿದ್ದರೂ ತಾಲೂಕು ಅಥವಾ ನಗರಸಭೆಯಾಗಲಿ ಅಗತ್ಯಕ್ರಮ ಕೈಗೊಳ್ಳದೆ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಸರಿಪಡಿಸುತ್ತಾರಾ ಕಾದುನೋಡಬೇಕಿದೆ.