ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಈ ಹಿಂದೆ ಲ್ಯಾಂಡ್‌ಲೈನ್ ಫೋನುಗಳಿದ್ದವು. ಈಗ ಜಗತ್ತು ಬದಲಾವಣೆಯತ್ತ ಸಾಗುತ್ತಿದೆ, ಅತ್ಯಾಧುನಿಕ ತಾಂತ್ರಿಕತೆಯುಳ್ಳ ಸ್ಮಾರ್ಟ್‌ಫೋನ್‌ಗಳ ಬಳಕೆ ಮಾಡುತ್ತಿದ್ದೇವೆ. ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗೆ ಅಗತ್ಯ, ಕೃಷಿ ಕ್ಷೇತ್ರದಲ್ಲೂ ನವನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಿದ್ದೇಯಾದಲ್ಲಿ, ರೈತವಲಯ ಮತ್ತಷ್ಟೂ ಲಾಭದಾಯಕದತ್ತ ಸಾಗುತ್ತದೆ ಎಂದು ಕೃಷಿ ಇಲಾಖೆಯ, ಯಾದಗಿರಿ ಜಿಲ್ಲೆಯ ಜಂಟಿ ನಿರ್ದೇಶಕ ರತೇಂದ್ರನಾಥ್ ಸೂಗೂರ ಹೇಳಿದರು.ನಗರದಲ್ಲಿ ಸೋಮವಾರ ‘ಕನ್ನಡಪ್ರಭ’ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೈತರ ಕರೆಗಳಿಗೆ, ದೂರುಗಳಿಗೆ ಸ್ಪಂದಿಸಿ ಮಾತನಾಡಿದರು. ಕೃಷಿಯಲ್ಲಿ ಆಧುನಿಕತೆಯತ್ತ ನಾವು ಒಗ್ಗಿಕೊಂಡರೆ ರೈತರಿಗೆ ಕಡಿಮೆ ಖರ್ಚು ಹಾಗೂ ಹೆಚ್ಚಿನ ಲಾಭ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮಳೆ-ಬೆಳೆ ವಿವರ, ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆಗಳು, ರಸಗೊಬ್ಬರ ಕೊರತೆ, ರೈತವಲಯದಲ್ಲಿ ಹೆಚ್ಚಿನ ಆಕ್ರೋಶ, ಪ್ರತಿಭಟನೆಗಳು, ನ್ಯಾನೋ ಗೊಬ್ಬರ ಬಳಕೆ ವಿಚಾರವಾಗಿ ಮೀನಮೇಷ ಮುಂತಾದ ಕುರಿತು ಸಾಕಷ್ಟು ಕರೆಗಳಿಗೆ ಪ್ರತಿಕ್ರಿಯಿಸಿ, ಎಲ್ಲದ್ದಕ್ಕೂ ಉತ್ತರಿಸಿ, ಗೊಂದಲ ನಿವಾರಿಸುವಲ್ಲಿ ಜಂಟಿ ನಿರ್ದೇಶಕ ರತೇಂದ್ರನಾಥ್ ಸೂಗೂರ ಪ್ರಾಮಾಣಿಕ ಪ್ರಯತ್ನಿಸಿದರು.ಮಧ್ಯಾಹ್ನ 12 ಗಂಟೆಯಿಂದ 1 ಗಂಟೆವರೆಗೆ ನಡೆದ ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕರೆಗಳು ಬಂದವು. ರಸಗೊಬ್ಬರ ಕೊರತೆ ಬಗ್ಗೆ ರೈತರ ವಲಯದಲ್ಲಿ ಅಸಮಾಧಾನ/ ಆಕ್ರೋಶ ಮೂಡಿಬಂತು. ಕೆಲವರು ನ್ಯಾನೋ ಗೊಬ್ಬರದ ಗುಣಮಟ್ಟದ ಬಗ್ಗೆ ತಮ್ಮಲ್ಲಿದ್ದ ಆತಂಕ ನಿವಾರಿಸಿಕೊಂಡರು.
ಗುರುಮಠಕಲ್‌ನಿಂದ ಕರೆ ಮಾಡಿದ ಶಿವಕುಮಾರ್, ನಾಯ್ಕಲ್‌ನಿಂದ ಮಲ್ಲಿಕಾರ್ಜುನರೆಡ್ಡಿ, ಬಾಡಿಯಾಳದಿಂದ ಮಲ್ಲಿಕಾರ್ಜುನ, ಶಹಾಪುರದಿಂದ ಹಿರಿಯ ಪತ್ರಕರ್ತ ನಾರಾಯಣಚಾರ್ಯ ಸಗರದ, ಮುಡಬೂಳದಿಂದ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ಅಶೋಕರಾವ್ ಮಲ್ಲಾಬಾದಿ, ಕೊಳ್ಳೂರು (ಎಂ)ನಿಂದ ಶಿವಾರೆಡ್ಡಿ, ರಾಜ್ಯ ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ಶಹಾಪುರದಿಂದ ಭೀಮರಾಯ ಸಜ್ಜನ್, ಕೆಂಭಾವಿಯಿಂದ ಸಂಗಮೇಶ, ಸುರಪುರದಿಂದ ರಾಘವೇಂದ್ರ ಭಕ್ರಿ, ಗಣಪುರದಿಂದ ಭೀಮಾಶಂಕರ್, ಪ್ರಾಂತ ರೈತ ಸಂಘದ ಮುಖಂಡ ಚೆನ್ನಪ್ಪ ಆನೆಗೊಂದಿ, ಎಚ್. ಆರ್. ಬಡಿಗೇರ್ ಮುಂತಾದವರು ರಸಗೊಬ್ಬರ ಕೊರತೆ, ನ್ಯಾನೋ ಗೊಬ್ಬದ ಬಳಕೆ ಬಗ್ಗೆ ದೂರು-ಸಲಹೆಗಳನ್ನು ನೀಡಿದರು.ಭವಿಷ್ಯದಲ್ಲಿ ನ್ಯಾನೋ ಗೊಬ್ಬರ ಬಳಕೆ ಅನಿವಾರ್ಯ ಎಂಬುದನ್ನು ಸಮರ್ಥಿಸಿಕೊಂಡ ಜಂಟಿ ನಿರ್ದೇಶಕ ರತೇಂದ್ರನಾಥ್, ರಸಗೊಬ್ಬರ ಮಾರಾಟದಲ್ಲಿ ಅಕ್ರಮ ಕಂಡರೆ, ಅಂಗಡಿಗಳಲ್ಲಿ ದಾಸ್ತಾನಿದ್ದರೂ ಕೊಡದ ಪಕ್ಷದಲ್ಲಿ ದೂರು ಅಧಿಕಾರಿಗಳಿಗೆ ನೀಡಬೇಕೆಂದು ಮನವಿ ಮಾಡಿದರ. ಕೃಷಿ ಅಧಿಕಾರಿ ರಾಜಕುಮಾರ್ ಗುಂಡಳ್ಳಿ ಹಾಜರಿದ್ದರು.
ರಸಗೊಬ್ಬರ ಕೊರತೆ: ಸಹಾಯವಾಣಿ ಸಂಖ್ಯೆರಸಗೊಬ್ಬರ ಕೊರತೆ ಅಥವಾ ಕೃಷಿ ಸಂಬಂಧಿತ ದೂರಗಳಿಗೆ ರೈತರು ಸಹಾಯವಾಣಿ ಸಂಖ್ಯೆ 8277933404ಗೆ ದೂರು ನೀಡಬಹುದು ಎಂದು ರತೇಂದ್ರನಾಥ್ ಸೂಗೂರ ತಿಳಿಸಿದರು. ಕೃಷಿ ಇಲಾಖೆಯ ಅಧಿಕಾರಿಗಳು ಇಂತಹ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುತ್ತಾರೆ ಎಂದರು.